ADVERTISEMENT

ಎಚ್‌ಎಎಲ್‌ ಘಟಕಕ್ಕೆ ಭೂಮಿ, ನೀರು ನೀಡಲು ಸರ್ಕಾರ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2014, 19:30 IST
Last Updated 1 ಮಾರ್ಚ್ 2014, 19:30 IST

ಬೆಂಗಳೂರು: ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಬಿದರೆಹಳ್ಳ ಕಾವಲ್‌ನಲ್ಲಿ ಸರ್ಕಾರಿ ಸ್ವಾಮ್ಯದ ಎಚ್‌ಎಎಲ್‌ ಘಟಕ ಸ್ಥಾಪನೆಗೆ ಅಗತ್ಯವಿರುವ 600 ಎಕರೆ ಜಮೀನು ನೀಡಲು ರಾಜ್ಯ ಸರ್ಕಾರ ಮುಂದಾಗಿದೆ.

ಹೆಲಿಕಾಪ್ಟರ್‌ ತಯಾರಿಕಾ ಘಟಕ ಸ್ಥಾಪನೆಗೆ ಎಚ್‌ಎಎಲ್‌ ಮುಂದೆ ಬಂದಿದ್ದು, ಭೂಮಿ ಸೇರಿದಂತೆ ಎಲ್ಲ ರೀತಿಯ ಸೌಲಭ್ಯಗಳನ್ನು ಕಲ್ಪಿಸಲಾ ಎಂದು ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಕೌಶಿಕ್‌ ಮುಖರ್ಜಿ ‘ಪ್ರಜಾವಾಣಿ’ಗೆ ತಿಳಿಸಿದರು. ‘2–3 ವಾರಗಳಲ್ಲಿ ಈ ಪ್ರಕ್ರಿಯೆ ಪೂರ್ಣವಾಗಲಿದೆ’ ಎಂದರು.

ಎಚ್‌ಎಎಲ್‌ ಘಟಕ ಸ್ಥಾಪನೆಗೆ  ಮೂಲಸೌಕರ್ಯಗಳನ್ನು ಕಲ್ಪಿಸಿಕೊಡುವ ಸಂಬಂಧ ಅವರು ಶನಿವಾರ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. 600 ಎಕರೆ ಭೂಮಿ ಜತೆಗೆ ಮುಖ್ಯ ಹೆದ್ದಾರಿಯಿಂದ ಬಿದರೆಹಳ್ಳಕಾವಲ್‌ಗೆ 45 ಮೀಟರ್‌ ಅಗಲದ ರಸ್ತೆ ನಿರ್ಮಾಣ, ಟೌನ್‌ಶಿಪ್‌ ನಿರ್ಮಾಣಕ್ಕೆ 150 ಎಕರೆ ಭೂಮಿ, ಪ್ರತಿದಿನ 12 ಮೆಗಾವಾಟ್‌ ವಿದ್ಯುತ್‌ ಹಾಗೂ 42 ಲಕ್ಷ ಲೀಟರ್‌ ನೀರಿನ ಬೇಡಿಕೆಯನ್ನು ಎಚ್‌ಎಎಲ್‌ ಮುಂದಿಟ್ಟಿದೆ. ಈ ಬೇಡಿಕೆ ಗಳಿಗೆ ಸರ್ಕಾರ ಒಪ್ಪಿಗೆ ಸೂಚಿಸಿದೆ.

ಮೊದಲ ಹಂತದಲ್ಲಿ ₨ 4,000 ಕೋಟಿ ಬಂಡವಾಳ ಹೂಡಿಕೆ ಯಾಗಲಿದೆ. 3ರಿಂದ 4 ಸಾವಿರ ಮಂದಿಗೆ ಉದ್ಯೋಗ ಸಿಗಲಿದೆ. ಪ್ರತಿ ವರ್ಷ 50 ಹೆಲಿಕಾಪ್ಟರ್‌ ತಯಾರಿಸುವ ಗುರಿ ಹೊಂದಲಾಗಿದೆ. ಮುಂದಿನ ದಿನಗಳಲ್ಲಿ ಒಟ್ಟಾರೆ ₨ 60 ಸಾವಿರ ಕೋಟಿ ಹೂಡಿಕೆ ಮಾಡುವ ಉದ್ದೇಶವನ್ನು ಎಚ್‌ಎಎಲ್‌ ಹೊಂದಿದೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.