ADVERTISEMENT

ಎಚ್‌ಎಎಲ್ ನಿರ್ದೇಶಕ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2011, 19:30 IST
Last Updated 11 ಅಕ್ಟೋಬರ್ 2011, 19:30 IST
ಎಚ್‌ಎಎಲ್ ನಿರ್ದೇಶಕ ಆತ್ಮಹತ್ಯೆ
ಎಚ್‌ಎಎಲ್ ನಿರ್ದೇಶಕ ಆತ್ಮಹತ್ಯೆ   

ಚಿಕ್ಕಬಳ್ಳಾಪುರ: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಯೋಜನಾ ವಿಭಾಗದ ನಿರ್ದೇಶಕ ಬಲದೇವ್ ಸಿಂಗ್ (58) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲ್ಲೂಕಿನ ನಂದಿ ಬೆಟ್ಟದಲ್ಲಿ ಮಂಗಳವಾರ ನಡೆದಿದೆ.

`ಬಲದೇವ್ ಸಿಂಗ್ ಮಂಗಳವಾರ ಬೆಳಿಗ್ಗೆ ಕಾರು ಚಾಲಕ ರಮೇಶ್ ಜೊತೆಗೆ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದ ವರೆಗೆ ಕಾರ್‌ನಲ್ಲಿ ಬಂದಿದ್ದಾರೆ. ಅಲ್ಲಿ ರಮೇಶ್‌ನನ್ನು ಕಾರ್‌ನಿಂದ ಕೆಳಗಡೆ ಇಳಿಸಿದ್ದಾರೆ. ನಂತರ ತಮ್ಮ ಮೊಬೈಲ್ ಫೋನ್ ಸ್ವಿಚ್‌ಆಫ್ ಮಾಡಿದ್ದಾರೆ. ಇಲ್ಲೇ ಸ್ನೇಹಿತರನ್ನು ಭೇಟಿಯಾಗಿ ಹಿಂದಿರುಗುತ್ತೇನೆ ಎಂದು ಆತನನ್ನು ವಾಪಸು ಕಳುಹಿಸಿದ್ದಾರೆ. ಆತ ಬರುತ್ತೇನೆಂದರೂ ಅವರು ನಿರಾಕರಿಸಿದ್ದಾರೆ. ಸ್ವತಃ ಕಾರು ಚಾಲನೆ ಮಾಡಿಕೊಂಡು ನಂದಿಬೆಟ್ಟಕ್ಕೆ ಬಂದಿದ್ದಾರೆ~ ಎಂದು ಡಿವೈಎಸ್‌ಪಿ ಚೆಲುವರಾಜ `ಪ್ರಜಾವಾಣಿ~ಗೆ ತಿಳಿಸಿದರು.

`ನಂದಿ ಬೆಟ್ಟದ ಶನಿಮಹಾತ್ಮ ದೇವಾಲಯದ ಬಳಿ ಬಂದ ಬಲದೇವ್‌ಸಿಂಗ್ ಕಾರನ್ನು ನಿಲ್ಲಿಸಿದ್ದಾರೆ. ಬಳಿಕ ಸುಮಾರು ಒಂದು ಕಿ.ಮೀ.ನಷ್ಟು ದೂರ ಕಾಡಿನೊಳಗೆ ಹೋಗಿದ್ದಾರೆ. ತಮ್ಮ ತಲೆಯ ಮೇಲಿದ್ದ ಪೇಟವನ್ನು ತೆಗೆದು ಹೊಂಗೆ ಮರಕ್ಕೆ ಕಟ್ಟಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶವವನ್ನು ಜಿಲ್ಲಾ ಆಸ್ಪತ್ರೆಯಲ್ಲಿ ಇಡಲಾಗಿದೆ~ ಎಂದು ಅವರು ತಿಳಿಸಿದರು.

ಬಲದೇವ್ ಸಿಂಗ್ ಅವರಿಗೆ ಪತ್ನಿ, ಇಬ್ಬರು ಮಕ್ಕಳಿದ್ದಾರೆ. ಮಕ್ಕಳು ವಿದೇಶದಲ್ಲಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಂತರವಷ್ಟೇ ಕಾರಣ ತಿಳಿದು ಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.