ADVERTISEMENT

ಎಚ್‌ಐವಿ ಸೋಂಕು ಜಾಗೃತಿ ಅಭಿಯಾನ: ಸಚಿನ್ ತೆಂಡೂಲ್ಕರ್ ಪ್ರಚಾರ ರಾಯಭಾರಿ

​ಪ್ರಜಾವಾಣಿ ವಾರ್ತೆ
Published 18 ಜುಲೈ 2012, 19:30 IST
Last Updated 18 ಜುಲೈ 2012, 19:30 IST

ಮೈಸೂರು: ರಾಜ್ಯ ಸರ್ಕಾರ ಆರಂಭಿಸಲು ಉದ್ದೇಶಿಸಿರುವ ಎಚ್‌ಐವಿ ಸೋಂಕು ಪೀಡಿತ ಮಕ್ಕಳ ಜಾಗೃತಿ ಅಭಿಯಾನದ ಪ್ರಚಾರ ರಾಯಭಾರಿಯಾಗಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಕಾರ್ಯನಿರ್ವಹಿಸಲಿದ್ದಾರೆ.

ರಾಜ್ಯದಲ್ಲಿರುವ ಎಚ್‌ಐವಿ ಸೋಂಕು ಪೀಡಿತರ ಸಮೀಕ್ಷೆ ನಡೆಸಲಾಗಿದ್ದು, 1.60 ಲಕ್ಷ ಜನರಿಗೆ ಸೋಂಕು ಇರುವುದು ಪತ್ತೆಯಾಗಿದೆ. ಈ ಪೈಕಿ 14 ವರ್ಷದ ಒಳಗಿನ 8 ಸಾವಿರ ಮಕ್ಕಳಲ್ಲೂ ಎಚ್‌ಐವಿ ಸೋಂಕು ಕಂಡು ಬಂದಿದೆ. ಆದ್ದರಿಂದ ಬೆಳಗಾವಿಯಲ್ಲಿ ಎಚ್‌ಐವಿ ಪೀಡಿತ ಮಕ್ಕಳಿಗೆ ಪುನರ್ವಸತಿ ಕೇಂದ್ರವನ್ನು ಆರಂಭಿಸಿ, ಯೋಗ ಥೆರಪಿ ಮೂಲಕ ಚಿಕಿತ್ಸೆ ನೀಡಲು ವೈದ್ಯಕೀಯ ಇಲಾಖೆ ನಿರ್ಧರಿಸಿದೆ.

ಉತ್ತರ ಕರ್ನಾಟದಲ್ಲಿ ಅದರಲ್ಲೂ ಬೆಳಗಾವಿ, ವಿಜಾಪುರ, ಬಾಗಲಕೋಟೆ, ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಗಳ ಮಕ್ಕಳು ಹೆಚ್ಚಿನ ಪ್ರಮಾಣದಲ್ಲಿ ಈ ಸೋಂಕಿಗೆ ತುತ್ತಾಗಿದ್ದಾರೆ. ಈ ಮಕ್ಕಳಿಗೆ ಪುನರ್ವಸತಿ ಕಲ್ಪಿಸಲು ಬೆಳಗಾವಿ ಹೊರವಲಯದ 200 ಎಕರೆ ಸರ್ಕಾರಿ ಜಾಗದಲ್ಲಿ ಪುನರ್ವಸತಿ ಕೇಂದ್ರವನ್ನು ಆರಂಭಿಸಲಾಗುತ್ತಿದೆ. ಇದರ ಜತೆಗೆ ರಾಜ್ಯದ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ 20 ಹಾಸಿಗೆಯ ಪ್ರತ್ಯೇಕ ವಾರ್ಡ್ ಅನ್ನು ಎಚ್‌ಐವಿ ಪೀಡಿತ ಮಕ್ಕಳಿಗಾಗಿ ತೆರೆಯಲು ಇಲಾಖೆ ಮುಂದಾಗಿದೆ.

ADVERTISEMENT

`ಉತ್ತರ ಕರ್ನಾಟಕದ ಮಕ್ಕಳೇ ಹೆಚ್ಚಿನ ಪ್ರಮಾಣದಲ್ಲಿ ಎಚ್‌ಐವಿ ಪೀಡಿತರಾಗಿರುವುದರಿಂದ ಬೆಳಗಾವಿಯಲ್ಲೇ ಪುನರ್ವಸತಿ ಕೇಂದ್ರ ತೆರೆಯಲು ನಿರ್ಧರಿಸಲಾಗಿದೆ. ಜಾಗೃತಿ ಅಭಿಯಾನದ ಪ್ರಚಾರ ರಾಯಭಾರಿಯಾಗಿ ಎಚ್‌ಐವಿ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಸಚಿನ್ ತೆಂಡೂಲ್ಕರ್ ಅವರಿಗೆ ಪತ್ರ ಬರೆಯಲಾಗಿದ್ದು, ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಅವರ ಜೊತೆಗೆ ರಾಷ್ಟ್ರಮಟ್ಟದ ಕರ್ನಾಟಕದ ಕ್ರಿಕೆಟ್ ಆಟಗಾರರೂ ಜಾಗೃತಿ ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಯೋಜನೆಗೆ ಅಗತ್ಯವಿರುವ ರೂ 2 ಕೋಟಿ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಲಾಗಿದೆ. ಇನ್ನುಳಿದ ಹಣವನ್ನು ಸ್ವಯಂ ಸಂಘಗಳು ಹಾಗೂ ಇತರ ಸಂಸ್ಥೆಗಳಿಂದ ಸಂಗ್ರಹಿಸಲಾಗುವುದು~ ಎಂದು ವೈದ್ಯಕೀಯ ಶಿಕ್ಷಣ ಸಚಿವ ಎಸ್.ಎ.ರಾಮದಾಸ್ `ಪ್ರಜಾವಾಣಿ~ಗೆ ತಿಳಿಸಿದರು.

`ಆಗಸ್ಟ್ ಮೊದಲ ವಾರದಲ್ಲಿ ತೆಂಡೂಲ್ಕರ್ ಅವರನ್ನು ಭೇಟಿಯಾಗಿ ಯೋಜನೆಯ ರೂಪು ರೇಷೆ ಬಗ್ಗೆ ಅವರಿಗೆ ತಿಳಿಸಲಾಗುವುದು. ಬೆಳಗಾವಿ, ಬಾಗಲಕೋಟೆ, ವಿಜಾಪುರ, ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ ಎಚ್‌ಐವಿ ಸೋಂಕಿನ ಬಗ್ಗೆ ಜಾಗೃತಿ ಮೂಡಿಸುವಲ್ಲಿ 100ಕ್ಕೂ ಹೆಚ್ಚು ಮಂದಿ ನಿರತರಾಗಿದ್ದು ಅವರ ಸೇವೆ ಪಡೆಯಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.