ADVERTISEMENT

ಎಚ್‌ಡಿಕೆ - ಹೆಗ್ಡೆ ವಾಕ್ಸಮರ ತಾರಕಕ್ಕೆ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2011, 19:30 IST
Last Updated 28 ಆಗಸ್ಟ್ 2011, 19:30 IST
ಎಚ್‌ಡಿಕೆ - ಹೆಗ್ಡೆ ವಾಕ್ಸಮರ ತಾರಕಕ್ಕೆ
ಎಚ್‌ಡಿಕೆ - ಹೆಗ್ಡೆ ವಾಕ್ಸಮರ ತಾರಕಕ್ಕೆ   

ಬೆಂಗಳೂರು: ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮತ್ತು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಅವರ ನಡುವೆ ವಾಕ್ಸಮರ ಮುಂದುವರಿದಿದೆ. 

ಹೆಗ್ಡೆ ಅವರ ವೈಯಕ್ತಿಕ ಜೀವನದ ಕುರಿತು ಕುಮಾರಸ್ವಾಮಿ ನೀಡಿದ್ದ ಹೇಳಿಕೆಯೇ ಈ ಮಾತಿನ ಸಮರಕ್ಕೆ ಕಾರಣ. ಶನಿವಾರ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ್ದ ಕುಮಾರಸ್ವಾಮಿ, `ಹೆಗ್ಡೆ ಅವರ ತಡರಾತ್ರಿಯ ಚಟುವಟಿಕೆಗಳಿಗೆ ಯಾರು ಹಣ ಕೊಡುತ್ತಿದ್ದಾರೆ~ ಎಂದು ಪ್ರಶ್ನಿಸಿದ್ದರು.

ಈ ಕುರಿತು ಆಗಲೇ ಹೆಗ್ಡೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದರು. ಈ ಬಗ್ಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ವಿಷಾದವನ್ನೂ ವ್ಯಕ್ತಪಡಿಸಿದ್ದರು. ಆದರೆ, ಭಾನುವಾರ ಮತ್ತೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಕುಮಾರಸ್ವಾಮಿ, `ಹಿಂದಿನ ಹೇಳಿಕೆಗೆ ಈಗಲೂ ಬದ್ಧ~ ಎಂದರು.

`ನನ್ನ ಹೇಳಿಕೆಯ ಬಗ್ಗೆ ವಿಷಾದ ವ್ಯಕ್ತಪಡಿಸುವ ಪ್ರಶ್ನೆಯೇ ಇಲ್ಲ. ನಾನು ಏನು ಹೇಳಿದ್ದೆನೋ ಅದಕ್ಕೆ ಬದ್ಧನಾಗಿದ್ದೇನೆ. ನನ್ನ ಹೇಳಿಕೆಗೆ ಪೂರಕವಾದ ದಾಖಲೆಗಳನ್ನು ಕೆಲ ದಿನಗಳಲ್ಲಿ ಒದಗಿಸಲು ಸಿದ್ಧ. ಸಂತೋಷ್ ಹೆಗ್ಡೆಯವರ ದುಂದುವೆಚ್ಚದ ಬಗ್ಗೆ ಅವರೊಂದಿಗೆ ನೇರವಾಗಿ ಚರ್ಚೆ ನಡೆಸಲು ಸಿದ್ಧನಿದ್ದೇನೆ. ಅವರು ಬಂದರೆ ಇಬ್ಬರೂ ನೇರವಾಗಿಯೇ ಜನರೊಂದಿಗೆ ಅಭಿಪ್ರಾಯ ಹಂಚಿಕೊಳ್ಳಬಹುದು~ ಎಂದು ಕುಮಾರಸ್ವಾಮಿ ಹೇಳಿದರು.

ಮತ್ತೆ ತಿರುಗೇಟು: ನಗರದಲ್ಲಿ ನಡೆದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ನೌಕರರ ಸಂಘದ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಮಾತನಾಡುತ್ತಾ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಂತೋಷ್ ಹೆಗ್ಡೆ, `ಇನ್ನೊಬ್ಬರ ವೈಯಕ್ತಿಕ ಜೀವನದ ಬಗ್ಗೆ ಮಾತನಾಡುವವರು ತಮ್ಮ ಜೀವನ ಹೇಗಿದೆ ಎಂಬುದನ್ನು ಮೊದಲು ನೋಡಿಕೊಳ್ಳಬೇಕು~ ಎಂದು ತಿರುಗೇಟು ನೀಡಿದರು.

`ನನ್ನ ತಡರಾತ್ರಿಯ ಚಟುವಟಿಕೆಗಳಿಗೆ ಹಣ ಯಾರು ಕೊಡುತ್ತಿದ್ದಾರೆ ಎಂದು ರಾಜಕಾರಣಿಯೊಬ್ಬರು ಪ್ರಶ್ನಿಸಿದ್ದಾರೆ. ನನಗೆ ಇರುವುದು ಒಬ್ಬರೇ ಪತ್ನಿ ಹಾಗೂ ಒಂದೇ ಮನೆ. ಕಚೇರಿ ಕೆಲಸ, ಸ್ವಾತಂತ್ರ್ಯ ಉದ್ಯಾನದ ಆಂದೋಲನದಲ್ಲಿ ಭಾಗವಹಿಸಿ ನಾನು ನೇರವಾಗಿ ನನ್ನ ಮನೆಗೇ ಮರಳುತ್ತೇನೆ. ಇನ್ನೊಂದು ಮನೆ ನನಗಿಲ್ಲ~ ಎಂದರು.

`ಅಕ್ರಮ ಗಣಿಗಾರಿಕೆ ಕುರಿತ ವರದಿಯಲ್ಲಿ ಕುಮಾರಸ್ವಾಮಿ ಸೇರಿದಂತೆ ಹಿಂದಿನ ಇಬ್ಬರು ಮತ್ತು ಒಬ್ಬ ಹಾಲಿ ಮುಖ್ಯಮಂತ್ರಿಯ ಹೆಸರು ಪ್ರಸ್ತಾಪಿಸಿದ್ದೆ. ತಮ್ಮ ಹೆಸರು ವರದಿಯಲ್ಲಿ ಇರುವುದರಿಂದ ಕುಮಾರಸ್ವಾಮಿ ಅವರಿಗೆ ನನ್ನ ಮೇಲೆ ಅಸಮಾಧಾನ ಉಂಟಾಗಿರಬಹುದು. ಅದಕ್ಕಾಗಿಯೇ ಹೀಗೆ ಮಾತನಾಡುತ್ತಿದ್ದಾರೆ~ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.