ADVERTISEMENT

ಎತ್ತಿನಹೊಳೆ: ಎಚ್‌ಡಿಕೆ ಟೀಕೆ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2013, 19:30 IST
Last Updated 24 ಡಿಸೆಂಬರ್ 2013, 19:30 IST

ಬೆಂಗಳೂರು: ಎತ್ತಿನಹೊಳೆ ಯೋಜನೆ ವಿಚಾರದಲ್ಲಿ ರಾಜ್ಯ ಸರ್ಕಾರ ಜನರನ್ನು ಕತ್ತಲೆಯಲ್ಲಿಟ್ಟು ದಾರಿ ತಪ್ಪಿಸುತ್ತಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಟೀಕಿಸಿದರು. ಈ ಯೋಜನೆಯನ್ನು ಜಾರಿಗೊಳಿ­ಸುವ ಮನಸ್ಥಿತಿ­ಯಲ್ಲಿ ಸರ್ಕಾರ ಇಲ್ಲ. ಇದುವರೆಗೆ ವಿಸ್ತೃತವಾದ ಯೋಜನಾ ವರದಿಯೇ ಸಿದ್ಧವಾಗಿಲ್ಲ. ಹಣ ಲೂಟಿ­ಯಾಗುತ್ತಿದೆ ಅಷ್ಟೆ ಎಂದು ಮಂಗಳವಾರ ಇಲ್ಲಿ ಪತ್ರಿಕಾ­ಗೋಷ್ಠಿ­ಯಲ್ಲಿ ಆರೋಪಿಸಿದರು.

₨2,689 ಕೋಟಿ ಮೊತ್ತದ ಕಾಮಗಾರಿಗೆ ಟೆಂಡರ್‌ ಕರೆಯಲಾಗಿದೆ ಎಂದು ಸರ್ಕಾರ ಹೇಳು­ತ್ತಿದೆ. ಆದರೆ, ಇದರ ಯೋಜನಾ ವೆಚ್ಚ ₨8263 ಕೋಟಿ ಎಂದು ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳು ಹೇಳುತ್ತಾರೆ. ಇನ್ನೂ ವಿಸ್ತೃತ ಯೋಜನಾ ವರದಿಯೇ ಸಿದ್ಧವಾಗಿಲ್ಲ. ಹಣ ಖರ್ಚು ಮಾಡಲು ಹೇಗೆ ಸಾಧ್ಯ? ಸರ್ಕಾರ ಸುಳ್ಳು ಹೇಳುತ್ತಿದೆ ಎಂದು ಟೀಕಿಸಿದರು.

ಕೇಂದ್ರ ಸಚಿವ ಎಂ.ವೀರಪ್ಪ ಮೊಯಿಲಿ ಹಾಗೂ ಬಿಜೆಪಿಯವರು ನಾಲ್ಕು ವರ್ಷಗಳಿಂದ ಜನರಿಗೆ ಸುಳ್ಳು ಹೇಳುತ್ತಿದ್ದಾರೆ. ಇದುವರೆಗೆ ನಯಾ ಪೈಸೆ ಕೆಲಸ ಆಗಿಲ್ಲ. ಲೋಕಸಭಾ ಚುನಾವಣೆ ಬಂದಾಗ ಮೊಯಿಲಿ ಅವರಿಗೆ ಈ ­ಯೋಜನೆಯ ನೆನಪು ಬರುತ್ತದೆ ಎಂದು ವ್ಯಂಗ್ಯವಾಡಿದರು.

ಈ ಯೋಜನೆಗೆ ಅರಣ್ಯ ಭೂಮಿಯ ಅಗತ್ಯವಿದೆ. ಈಗ ಅರಣ್ಯ ಖಾತೆ­ಯನ್ನೂ ಮೊಯಿಲಿ ನೋಡಿ­ಕೊಳ್ಳು­ತ್ತಿ­ದ್ದಾರೆ. ಅವರಿಗೆ ನಿಜವಾದ ಕಾಳಜಿ ಇದ್ದರೆ ಅರಣ್ಯ ಇಲಾಖೆಯ ಅನುಮತಿ ಕೊಡಿ­ಸಲಿ ಎಂದು ಸವಾಲು ಹಾಕಿದರು. ಲೋಕಸಭಾ ಚುನಾವಣೆ ಹತ್ತಿರ­ವಾದಾಗ ಶಂಕುಸ್ಥಾಪನೆ ನೆರವೇರಿಸಲು ಮುಂದಾಗುತ್ತಾರೆ. ಅಷ್ಟಕ್ಕೆ ಸೀಮಿತ­ವಾಗ­ಬಾರದು. ಎಲ್ಲಿಂದ ನೀರು ತರ­ಲಾ­ಗುತ್ತದೊ, ಆ ಜಾಗದಲ್ಲೇ ಶಂಕು­ಸ್ಥಾಪನೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಬೇಕು ಎಂದು ಆಗ್ರಹಿಸಿದರು.

ಜೈಲಿಗೆ ಹೋದವರ ಅಪ್ಪುಗೆ...
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಮತ್ತು ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ ಎಂದು ಎಚ್‌.ಡಿ.ಕುಮಾರಸ್ವಾಮಿ ಟೀಕಿಸಿದರು. ಕಾಂಗ್ರೆಸ್‌ನ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಮೋದಿ ಅವರು, ರಾಜ್ಯದಲ್ಲಿ ತಮ್ಮದೇ ಪಕ್ಷದವರು ನಡೆಸಿದ  ಭ್ರಷ್ಟಾಚಾರದ ಬಗ್ಗೆ ಚಕಾರ ಎತ್ತುವುದಿಲ್ಲ ಯಾಕೆ ಎಂದು ಪ್ರಶ್ನಿಸಿದರು.

‘ಜೈಲಿಗೆ ಹೋಗಿದ್ದ, ಭ್ರಷ್ಟಾಚಾರದಲ್ಲಿ ಸಿಲುಕಿರುವ ನಾಯಕರೇ ನಮಗೆ ಬೇಕು ಎಂದು ರಾಜ್ಯದ ಬಿಜೆಪಿ ಮುಖಂಡರು ಹೇಳುತ್ತಿದ್ದಾರೆ’ ಎಂದು ಯಡಿಯೂರಪ್ಪ ಹೆಸರನ್ನು ಹೇಳದೆ ಪರೋಕ್ಷವಾಗಿ ತರಾ­ಟೆಗೆ ತೆಗೆದು­ಕೊಂಡರು. ವಿದೇಶದಲ್ಲಿರುವ ಕಪ್ಪುಹಣವನ್ನು ಯುಪಿಎ ಸರ್ಕಾರ ವಾಪಸ್‌ ತರಲಿಲ್ಲ ಎಂದು ಮೋದಿ ಟೀಕೆ ಮಾಡುತ್ತಿದ್ದಾರೆ. ಎನ್‌ಡಿಎ ಅಧಿಕಾರ­ದಲ್ಲಿ ಇದ್ದಾಗ ಕಪ್ಪುಹಣವನ್ನು ಯಾಕೆ ವಾಪಸ್‌ ತರಲಿಲ್ಲ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT