ADVERTISEMENT

ಎನ್‌ಆರ್‌ಇಜಿ:ಕೂಲಿ ಹೆಚ್ಚಳಕ್ಕೆ ಆದೇಶ, ಕೂಲಿಕಾರರ ಹೋರಾಟಕ್ಕೆ ಜಯ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2011, 19:30 IST
Last Updated 23 ಸೆಪ್ಟೆಂಬರ್ 2011, 19:30 IST

ಬೆಂಗಳೂರು: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಎಂಎನ್‌ಆರ್‌ಇಜಿ) ವ್ಯಾಪ್ತಿಗೆ ಒಳಪಡುವ ಕೃಷಿ ಕಾರ್ಮಿಕರಿಗೆ ದಿನಗೂಲಿಯಾಗಿ  ರೂ.82 ಬದಲಾಗಿ ರೂ.119.42  ನೀಡುವಂತೆ ಹೈಕೋರ್ಟ್ ಶುಕ್ರವಾರ ಮಹತ್ವದ ತೀರ್ಪು ನೀಡಿದೆ.

ಈ ಹಿನ್ನೆಲೆಯಲ್ಲಿ, ದಿನಗೂಲಿ ಹೆಚ್ಚಳ ಮಾಡುವ ಸಂಬಂಧ ಹಲವು ವರ್ಷಳಿಂದ ಕಾನೂನು ಸಮರ ಸಾರಿದ್ದ ಕೂಲಿ ಕಾರ್ಮಿಕರಿಗೆ ಜಯ ದೊರೆತಿದೆ.

ಕೂಲಿ ಹಣವನ್ನು ರೂ. 82ಕ್ಕೆ ನಿಗದಿ ಮಾಡಿ ಕೇಂದ್ರ ಸರ್ಕಾರ 2009ರ ಜ.1ರಂದು ಹೊರಡಿಸಿದ್ದ ಅಧಿಸೂಚನೆಯು ಕಾನೂನು ಬಾಹಿರವೂ, ಅಸಾಂವಿಧಾನಿಕವೂ ಆಗಿದೆ ಎಂದು ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರನ್ನು ಒಳಗೊಂಡ ವಿಭಾಗೀಯ ಪೀಠ ಅಭಿಪ್ರಾಯ ಪಟ್ಟಿದೆ. ಈ ಹಿನ್ನೆಲೆಯಲ್ಲಿ ಅಧಿಸೂಚನೆಯನ್ನು ರದ್ದು ಮಾಡಿ ಆದೇಶಿಸಲಾಗಿದೆ.

ಅಧಿಸೂಚನೆ ಹೊರಟ ದಿನದಿಂದ ಅನ್ವಯ ಆಗುವಂತೆ ಇಲ್ಲಿಯವರೆಗೆ ಹೆಚ್ಚುವರಿಯಾಗಿ ಈ ಕಾರ್ಮಿಕರಿಗೆ ಎಷ್ಟು ಹಣ ಬರಬೇಕೋ ಅದನ್ನು ಶೀಘ್ರದಲ್ಲಿ ನೀಡುವಂತೆ ಸರ್ಕಾರಕ್ಕೆ ನ್ಯಾಯಮೂರ್ತಿಗಳು ನಿರ್ದೇಶಿಸಿದ್ದಾರೆ.

ಕೇಂದ್ರ ಸರ್ಕಾರ ನೀಡುತ್ತಿರುವ ಹಣವನ್ನು ಹೆಚ್ಚಿಸುವಂತೆ ಕೋರಿ `ಕರ್ನಾಟಕ ಪ್ರಾಂತ ರೈತ ಸಂಘ~ ಹಾಗೂ ಇತರ ಹಲವು ಕಾರ್ಮಿಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಪೀಠ ನಡೆಸಿತು. ಕಾಯ್ದೆಯ 6(1)ನೇ ಕಲಮಿನ ಅಡಿ ಕೇಂದ್ರ ಸರ್ಕಾರಕ್ಕೆ ದಿನಗೂಲಿಯನ್ನು ನಿಗದಿ ಮಾಡುವ ಅಧಿಕಾರ ಇದೆ. ಆದರೆ ಅದು ಕಡಿಮೆ ಹಣ ನಿಗದಿ ಮಾಡಿದ್ದು, ಅದರ ಹೆಚ್ಚಳಕ್ಕೆ ಆದೇಶಿಸಬೇಕು ಎಂಬ ವಾದವನ್ನು ನ್ಯಾಯಮೂರ್ತಿಗಳು ಮಾನ್ಯ ಮಾಡಿದ್ದಾರೆ.

ಕೋರ್ಟ್ ಹೇಳಿದ್ದೇನು: `ಕೇಂದ್ರ ಸರ್ಕಾರವು ಈ ಕಾರ್ಮಿಕರಿಗೆ ನೀಡುತ್ತಿರುವ ದಿನಗೂಲಿಯು ರಾಜ್ಯ ಸರ್ಕಾರ ತನ್ನ ಕೂಲಿಕಾರರಿಗೆ ನೀಡುತ್ತಿರುವ ಹಣಕ್ಕಿಂತ ಕಡಿಮೆ ಇದೆ. ಇದು ನಿಯಮ ಬಾಹಿರ.

`ಆಯಾ ರಾಜ್ಯ ಸರ್ಕಾರಗಳು ಕನಿಷ್ಠ ವೇತನ ಕಾಯ್ದೆಯ 3ನೇ ಕಲಮಿನ ಅಡಿ ಎಷ್ಟು ದಿನಗೂಲಿಯನ್ನು ತನ್ನ ವ್ಯಾಪ್ತಿಯ ಕೂಲಿಕಾರರಿಗೆ ನೀಡುತ್ತಿವೆಯೋ ಅಷ್ಟೇ ಹಣವನ್ನು ಎನ್‌ಆರ್‌ಇಜಿ ಕಾಯ್ದೆಯ 6(2)ನೇ ಕಲಮಿನ ಅನ್ವಯ ಕೇಂದ್ರ ಸರ್ಕಾರ ನೀಡಬೇಕಿದೆ. ಆದರೆ ವಿಷಾದವೆಂದರೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕಿಂತ ಕಡಿಮೆ ಹಣ ನಿಗದಿ ಮಾಡುವ ಅಧಿಕಾರವನ್ನು ಇದೇ ಕಾಯ್ದೆಯ 6(1)ರ ಕಲಮಿನಲ್ಲಿ ಉಲ್ಲೇಖಿಸಲಾಗಿದೆ. ಈ ಹಿನ್ನೆಲೆಯಲ್ಲಿ ಇದನ್ನು ಅನೂರ್ಜಿತಗೊಳಿಸುವುದೇ ಸೂಕ್ತ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.