ADVERTISEMENT

ಎರಡು ಆನೆಗಳ ಸಾವು

​ಪ್ರಜಾವಾಣಿ ವಾರ್ತೆ
Published 11 ಮೇ 2012, 19:30 IST
Last Updated 11 ಮೇ 2012, 19:30 IST

ಚಾಮರಾಜನಗರ: ಜಿಲ್ಲೆಯ ಬಂಡೀಪುರ ರಾಷ್ಟ್ರೀಯ ಉದ್ಯಾನ ಹಾಗೂ ಬಿಳಿಗಿರಿರಂಗನಾಥ ಸ್ವಾಮಿ ಹುಲಿ ರಕ್ಷಿತಾರಣ್ಯದಲ್ಲಿ ಎರಡು ಆನೆಗಳು ಮೃತಪಟ್ಟಿವೆ. ಸಾವಿಗೆ ಅತಿಸಾರ ಕಾರಣ ಎಂದು ಭಾವಿಸಲಾಗಿದೆ.
ಬಿಳಿಗಿರಿರಂಗನಾಥಸ್ವಾಮಿ ಹುಲಿ ರಕ್ಷಿತಾರಣ್ಯದ ಕೆ. ಗುಡಿ ವಲಯದ ಹನಕೆರೆ ಬಳಿ 40 ವರ್ಷದ ಹೆಣ್ಣಾನೆ ಗುರುವಾರ ಮೃತಪಟ್ಟಿದೆ. ಆನೆಯ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಕರಳುಬೇನೆಗೆ ತುತ್ತಾಗಿರುವ ಲಕ್ಷಣ ಕಂಡುಬಂದಿದೆ.

ಬಂಡೀಪುರ ರಾಷ್ಟ್ರೀಯ ಉದ್ಯಾನದ ಮದ್ದೂರು ವಲಯದಲ್ಲೂ ಒಂದು ವರ್ಷದ ಗಂಡಾನೆ ಮರಿಯೊಂದು ಅಸು ನೀಗಿದೆ. ಐದಾರು ದಿನಗಳ ಹಿಂದೆ ಈ ಮರಿ ಅತಿಸಾರದಿಂದ ಬಳಲುತ್ತಿತ್ತು.ಆನೆಗಳ ಶವಪರೀಕ್ಷೆ ವೇಳೆ ಕರಳುಬೇನೆ ಲಕ್ಷಣ ಕಂಡುಬಂದಿರುವ ಹಿನ್ನೆಲೆಯಲ್ಲಿ ಹೆಚ್ಚಿನ ವಿವರಕ್ಕಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಮಾದರಿಯನ್ನು ಕಳುಹಿಸಲಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ಬೇಸಿಗೆಯಲ್ಲಿ ಅರಣ್ಯದ್ಲ್ಲಲಿರುವ ಕೆರೆ-ಕಟ್ಟೆಗಳಲ್ಲಿ ನೀರು ಕಡಿಮೆ ಆಗಿದೆ. ಈ ನೀರಿನಲ್ಲಿಯೇ ಆನೆಗಳು ವಿಶ್ರಮಿಸುವುದು ಉಂಟು. ಆ ವೇಳೆ ನೀರಿನಲ್ಲಿಯೇ ಲದ್ದಿ ಹಾಕುತ್ತವೆ. ಈ ಕಲ್ಮಷ ನೀರನ್ನೇ ಕುಡಿದಿರುವ ಆನೆಗಳು ಕರಳುಬೇನೆಗೆ ತುತ್ತಾಗಿವೆ. ನಂತರ ಅತಿಸಾರದಿಂದ ಬಳಲಿ ಮೃತಪಟ್ಟಿರುವ ಸಾಧ್ಯತೆ ಇದೆ ಎಂಬುದು ಪಶುವೈದ್ಯರ ವಿವರಣೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.