ADVERTISEMENT

ಎಲ್ಲಆರೋಪಿಗಳ ಖುಲಾಸೆ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2011, 19:30 IST
Last Updated 29 ಅಕ್ಟೋಬರ್ 2011, 19:30 IST

ತುಮಕೂರು: ಜಿಲ್ಲೆಯ ಪಾವಗಡ ತಾಲ್ಲೂಕಿನ ವೆಂಕಟಮ್ಮನಹಳ್ಳಿಯಲ್ಲಿ ಬೀಡುಬಿಟ್ಟಿದ್ದ ಕೆಎಸ್‌ಆರ್‌ಪಿ 9ನೇ ತುಕಡಿ ಮೇಲೆ ನಕ್ಸಲೀಯರ ಗುಂಪು ಬಾಂಬ್ ಹಾಗೂ ಬಂದೂಕು ದಾಳಿ ನಡೆಸಿ 8 ಪೊಲೀಸರು ಹಾಗೂ ಒಬ್ಬ ನಾಗರಿಕನನ್ನು ಕೊಂದ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಹಾಜರುಪಡಿಸಿದ್ದ ಎಲ್ಲಾ 19 ಆರೋಪಿಗಳನ್ನು ಇಲ್ಲಿನ ಎರಡನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಶನಿವಾರ ಖುಲಾಸೆಗೊಳಿಸಿತು.

ಕೋರ್ಟ್ ಆವರಣದಲ್ಲಿ ಕಿಕ್ಕಿರಿದು ತುಂಬಿದ್ದ ವಕೀಲರ ನಡುವೆ ಕಾಣದಂತೆ ನಿಂತಿದ್ದ ಆರೋಪಿಗಳನ್ನು ಕಣ್ಣಿಗೆ ಕಾಣಿಸುವಂತೆ ನಿಲ್ಲಿಸಿಕೊಂಡ ನ್ಯಾಯಾಧೀಶರಾದ ಬಿ.ಬಾಲಕೃಷ್ಣ ಅವರು ತೀರ್ಪು ಓದುತ್ತಿದ್ದಂತೆ ಆರೋಪಿಗಳ ಮೊಗದಲ್ಲಿ ಸಂತಸದ ಅಲೆಯೇ ಉಕ್ಕಿದರೆ, ಪೊಲೀಸರ ಮುಖಗಳು ಕಳಾಹೀನವಾದವು.

“ನಿರಪರಾಧಿಗಳು ಅಥವಾ ನಿರ್ದೋಷಿಗಳೆಂದು ನಿಮ್ಮನ್ನು ಬಿಡುಗಡೆ ಮಾಡುತ್ತಿಲ್ಲ. ನಕ್ಸಲರಲ್ಲ ಅಥವಾ ನಕ್ಸಲೀಯ ಸಂಘಟನೆಗಳ ಜೊತೆ ಸಂಪರ್ಕ ಇಲ್ಲ ಎಂದೂ ಕೂಡ ನಿಮ್ಮನ್ನು ಬಿಡುಗಡೆ ಮಾಡುತ್ತಿಲ್ಲ. ಪೊಲೀಸರು ಸರಿಯಾಗಿ ತನಿಖೆ ನಡೆಸಿ ಸಾಕ್ಷ್ಯಗಳನ್ನು ಹಾಜರುಪಡಿಸಿಲ್ಲದ ಕಾರಣ `ಸಂಶಯದ ಲಾಭ~ದಡಿ ಬಿಡುಗಡೆ ಮಾಡಲಾಗಿದೆ” ಎಂದು ನ್ಯಾಯಾಧೀಶರು ಹೇಳಿದರು.

ಚಿಕ್ಕಮಗಳೂರಿನ ಮೆಣಸಿನ ಹಾಡ್ಯದಲ್ಲಿ ನಡೆದಿದ್ದ ನಕ್ಸಲೀಯ ನಾಯಕ ಸಾಕೇತ್ ರಾಜನ್ ಎನ್‌ಕೌಂಟರ್‌ಗೆ ಪ್ರತೀಕಾರವಾಗಿ 2005 ಫೆಬ್ರವರಿ 10ರಂದು ದಾಳಿ ನಡೆದಿತ್ತು. ರಾತ್ರಿ ಸುಮಾರು 200ರಷ್ಟಿದ್ದ ನಕ್ಸಲೀಯರ ಗುಂಪು ಶಾಲೆಯಲ್ಲಿ ಬೀಡುಬಿಟ್ಟಿದ್ದ ಪೊಲೀಸ್ ಶಿಬಿರದ ಮೇಲೆ ಮನಸೋ ಇಚ್ಛೆ ಬಾಂಬ್ ಹಾಗೂ ಗುಂಡಿನ ಸುರಿಮಳೆ ನಡೆಸಿ ಈ ಕೃತ್ಯ ಎಸಗಿತ್ತು. ಒಬ್ಬ ಸಬ್‌ಇನ್ಸ್‌ಪೆಕ್ಟರ್, 7 ಕಾನ್‌ಸ್ಟೇಬಲ್, ನಾಗರಿಕರೊಬ್ಬರು ಸ್ಥಳದಲ್ಲೇ ಸಾವಿಗೀಡಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.