ADVERTISEMENT

ಎಸಿಎಫ್ ಹತ್ಯೆ: ಮಾಹಿತಿ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 13 ಮೇ 2012, 19:30 IST
Last Updated 13 ಮೇ 2012, 19:30 IST
ಎಸಿಎಫ್ ಹತ್ಯೆ: ಮಾಹಿತಿ ಸಂಗ್ರಹ
ಎಸಿಎಫ್ ಹತ್ಯೆ: ಮಾಹಿತಿ ಸಂಗ್ರಹ   

ದಾಂಡೇಲಿ: ದಾಂಡೇಲಿಯ ಸಹಾಯ ಅರಣ್ಯ ಸಂರಕ್ಷಣಾಧಿಕಾರಿ ಮದನ ನಾಯಕ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಕೈಗೊಂಡಿರುವ ಎಸ್‌ಪಿ  ಕೆ. ಪಿ. ಭೀಮಯ್ಯ ನೇತೃತ್ವದ ಸಿಐಡಿ ತಂಡ ಭಾನುವಾರ ನಾಯಕ ಅವರ ಪತ್ನಿ, ಮಕ್ಕಳೊಂದಿಗೆ ಘಟನೆ ನಡೆದಿರುವ ಸ್ಥಳ ಹಾಲಮಡ್ಡಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿತು.

ಅಂದು  (ಭಾನುವಾರ) ನಡೆದ ಘಟನೆಯ ಬಗ್ಗೆ ನಾಯಕ ಅವರ ಪತ್ನಿ ಸುಮತಿ, ಪುತ್ರಿ ಮೇಘನಾ ಮತ್ತು ಪುತ್ರ ಶಿಶಿರ್ ಅವರಿಂದ ಸಿಐಡಿ ತಂಡ ಪ್ರತ್ಯೇಕ ಹೇಳಿಕೆ ದಾಖಲಿಸಿಕೊಂಡಿತು. ಬಳಿಕ ಎಸಿಎಫ್ ನಾಯಕ ಅವರು ವಾಸವಾಗಿದ್ದ ಅರಣ್ಯ ಇಲಾಖೆ ವಸತಿಗೃಹಕ್ಕೂ ಭೇಟಿ ನೀಡಿತು.

ವಸತಿಗೃಹದಲ್ಲಿದ್ದ ಕಾವಲುಗಾರನಿಂದ ಮಾಹಿತಿ ಪಡೆದುಕೊಂಡ ಸಿಐಡಿ ಅಧಿಕಾರಿಗಳು, ನಾಯಕ ಅವರು ಧರಿಸಿದ್ದ ಬಟ್ಟೆಗಳನ್ನು ವಶಕ್ಕೆ ಪಡೆದರು.

ನಾಯಕ ಅವರ ಕುಟುಂಬ ಠಾಣೆಯಲ್ಲಿದ್ದ ಸಂದರ್ಭದಲ್ಲಿ ಹಾಜರಿದ್ದ ನಗರಸಭೆ ಸದಸ್ಯ ಅನಿಲ್ ದಂಡಗಲ್, ಮಾಜಿ ಸದಸ್ಯ ಕೀರ್ತಿ ಗಾಂವಕರ, ಕರವೇ ತಾಲ್ಲೂಕು ಘಟಕದ ಅಧ್ಯಕ್ಷ ಮೋಹನ ಹಲವಾಯಿ, ಅರಣ್ಯ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿಯಿಂದಲೂ ಅಂದು ನಡೆದ ವಿದ್ಯಮಾನಗಳ ಬಗ್ಗೆ ತಂಡ ಮಾಹಿತಿ ಪಡೆಯಿತು.

`ಮೂರು ದಿನಗಳ ಅವಧಿಯಲ್ಲಿ ಬಹಳಷ್ಟು ಮಾಹಿತಿ ಸಂಗ್ರಹಿಸಿದ್ದೇವೆ. ನಾಯಕ ಅವರ ಪತ್ನಿ, ಮಕ್ಕಳಿಂದ ಪ್ರತ್ಯೇಕ ಹೇಳಿಕೆ ಪಡೆದಿದ್ದೇವೆ. ಇನ್ನೂ ಬೇರೆ ಬೇರೆ ದಿಕ್ಕಿನಿಂದಲೂ ತನಿಖೆ ನಡೆಸಬೇಕಾಗಿದೆ. ತಪ್ಪಿತಸ್ಥರಲ್ಲಿ ಪೊಲೀಸರು ಅಥವಾ ಬೇರೆ ಯಾರೇ ಇರಲಿ ಅವರ ವಿರುದ್ಧ ಪ್ರಾಮಾಣಿಕವಾಗಿ ಕ್ರಮ ಕೈಗೊಳ್ಳುತ್ತೇವೆ~ ಎಂದು ಭೀಮಯ್ಯ ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.