ADVERTISEMENT

ಎಸ್.ಆರ್.ಪಾಟೀಲ್- ಮಜುಂದಾರ್ ಭೇಟಿ ನಾಳೆ?

​ಪ್ರಜಾವಾಣಿ ವಾರ್ತೆ
Published 1 ಜೂನ್ 2013, 19:59 IST
Last Updated 1 ಜೂನ್ 2013, 19:59 IST

ಬೆಂಗಳೂರು: `ಯುವ ಸಚಿವರಿಗೆ ಐ.ಟಿ/ಬಿ.ಟಿ ಖಾತೆ ಕೊಟ್ಟಿದ್ದರೆ ಚೆನ್ನಾಗಿರುತ್ತಿತ್ತು' ಎಂದು ಹೇಳುವುದರ ಮೂಲಕ ವಿವಾದಕ್ಕೆ ಒಳಗಾಗಿರುವ ಬಯೋಕಾನ್ ಅಧ್ಯಕ್ಷೆ  ಕಿರಣ್ ಮಜುಂದಾರ್ ಅವರು ಮಾಹಿತಿ ತಂತ್ರಜ್ಞಾನ ಸಚಿವ ಎಸ್.ಆರ್.ಪಾಟೀಲ ಅವರನ್ನು ಸೋಮವಾರ ಭೇಟಿ ಮಾಡುವ ಸಾಧ್ಯತೆ ಇದೆ.

`ಮಜುಂದಾರ್ ಅವರು ಪತ್ರದ ಮೂಲಕ ಸಚಿವ ಪಾಟೀಲರ ಕ್ಷಮೆ ಕೋರಿದ್ದಾರೆ. ಖುದ್ದು ಭೇಟಿ ಮಾಡುವ ಇಂಗಿತ ವ್ಯಕ್ತಪಡಿಸಿದ್ದು, ಸೋಮವಾರ ಆ ಭೇಟಿ ನಡೆಯಲಿದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.

`65 ವರ್ಷದ ಪಾಟೀಲರ ಬದಲಿಗೆ ಕೃಷ್ಣ ಬೈರೇಗೌಡ ಅಥವಾ ದಿನೇಶ ಗುಂಡೂರಾವ್ ಅವರಂತಹ ಯುವಕರಿಗೆ ಈ ಖಾತೆ ಡಬೇಕಿತ್ತು' ಎಂದು ಮಜುಂದಾರ್ ಹೇಳಿದ್ದರು. ಇದೇ ಧಾಟಿಯಲ್ಲಿ ಮಣಿಪಾಲ್ ಗ್ಲೋಬಲ್ ಎಜುಕೇಷನ್ ಅಧ್ಯಕ್ಷ .ವಿ.ಮೋಹನ್‌ದಾಸ್ ಪೈ ಕೂಡ ಅಸಮಾಧಾನ ಹೊರ ಹಾಕಿದ್ದರು. `ಪಾಟೀಲ್ ಅವರನ್ನು ಐ.ಟಿ ಸಚಿವರನ್ನಾಗಿ ನೇಮಕ ಮಾಡಿದ ದಿನ ಬೇಸರದ ದಿನ' ಎಂದು ಟ್ವೀಟ್ ಮಾಡಿದ್ದರು.

ಈ ಇಬ್ಬರ ಹೇಳಿಕೆಗಳು ವಿವಾದಕ್ಕೆ ಕಾರಣವಾಗಿದ್ದವು. ವ್ಯಾಪಕ ಚರ್ಚೆಗಳು ನಡೆದವು. ಸಚಿವ ಪಾಟೀಲ್ ಅವರೇ ಸ್ವತಃ ಆಕ್ಷೇಪ ಎತ್ತಿದರು. `ನನಗೆ 65 ವರ್ಷ ಆಗಿದ್ದರೂ ಮನಸ್ಸು ಮತ್ತು ಹೃದಯ ಯುವಕರ ಹಾಗೆ ಇದೆ' ಎಂದು ಹೇಳುವುದರ ಮೂಲಕ ತಿರುಗೇಟು ನೀಡಿದ್ದರು.

`ನಾನೇನೂ ಐಟಿ ಖಾತೆ ಕೊಡಿ ಎಂದು ಮುಖ್ಯಮಂತ್ರಿ ಅವರನ್ನು ಕೇಳಿರಲಿಲ್ಲ. ಅವರು ಕೊಟ್ಟ ಖಾತೆ ನಿಭಾಯಿಸುವ ಶಕ್ತಿ ರೂಡಿಸಿಕೊಳ್ಳುತ್ತೇನೆ. ಐಟಿ ಸಚಿವರಿಗೆ ಸಾಫ್ಟ್‌ವೇರ್ ಅಭಿವೃದ್ಧಿ ಗೊತ್ತಿರಬೇಕು; ರೈಲ್ವೆ ಸಚಿವರಿಗೆ ರೈಲು ಓಡಿಸುವುದು ಬರಬೇಕು ಎನ್ನುವ ಧೋರಣೆ ಸರಿಯಲ್ಲ' ಎಂದು ಅವರು ಆಕ್ಷೇಪಿಸಿದ್ದರು.

ಈ ವಿವಾದ ಒಂದೊಂದು ದಿನ ಒಂದೊಂದು ರೀತಿಯ ತಿರುವು ಪಡೆಯುತ್ತಿದ್ದನ್ನು ಗಮನಿಸಿದ ಈ ಇಬ್ಬರೂ, ಸಚಿವ ಪಾಟೀಲರ ಕ್ಷಮೆ ಕೋರಿದ್ದಾರೆ. ಪೈ ಶುಕ್ರವಾರ ಪಾಟೀಲ್ ಅವರನ್ನು ಭೇಟಿ ಮಾಡಿ ಚರ್ಚಿಸಿದರು. `ನನ್ನ ಉದ್ದೇಶ ತಮಗೆ ಅಗೌರವ ಸೂಚಿಸುವುದು ಆಗಿರಲಿಲ್ಲ' ಎಂದಿದ್ದಾರೆ. ನಗರದಲ್ಲಿ ಇರಲಿಲ್ಲ ಎನ್ನುವ ಕಾರಣ ಕೊಟ್ಟು ಮಜುಂದಾರ್ ಪತ್ರದ ಮೂಲಕ ಕ್ಷಮೆ ಕೋರಿದ್ದಾರೆ.

ಬೆಳೆಸುವುದು ಬೇಡ: `ಇದನ್ನು ಇಲ್ಲಿಗೇ ಬಿಟ್ಟು ಬಿಡೋಣ. ಅವರಿಗೂ ತಮ್ಮ ತಪ್ಪಿನ ಅರಿವಾಗಿದೆ. ಕ್ಷಮೆ ಕೇಳಿದ ನಂತರ ಅದನ್ನು ಮತ್ತಷ್ಟು ಬೆಳೆಸುವುದು ಬೇಡ' ಎಂದು ಪಾಟೀಲರು `ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದರು.

`ಐ.ಟಿ/ಬಿ.ಟಿ ಕ್ಷೇತ್ರದ ಅಭಿವೃದ್ಧಿಗೆ ಗಮನ ನೀಡುತ್ತೇನೆ. ಅದರ ಪ್ರಯೋಜನ ಗ್ರಾಮೀಣ ಜನರಿಗೂ ಸಿಗುವ ಹಾಗೆ ಮಾಡುತ್ತೇನೆ. ಅದರ ನೆರವಿನಿಂದ ಭ್ರಷ್ಟಾಚಾರ ಮುಕ್ತ ಆಡಳಿತ ನೀಡಲು ಪ್ರಯತ್ನಿಸುತ್ತೇನೆ' ಎಂದರು.

ಕೃಷ್ಣ ಬೈರೇಗೌಡ ಅಥವಾ ದಿನೇಶ ಗುಂಡೂರಾವ್ ಅವರನ್ನು ಐ.ಟಿ ಸಚಿವರನ್ನಾಗಿ ಮಾಡಿದ್ದರೆ ಚೆನ್ನಾಗಿರುತ್ತಿತ್ತು ಎನ್ನುವ ಅವರ ಹೇಳಿಕೆ ಹಿಂದೆ ಯಾವುದಾದರೂ ಲಾಬಿ ಇದೆಯೇ ಎಂಬ ಪ್ರಶ್ನೆಗೆ `ನನಗೇನೂ ಗೊತ್ತಿಲ್ಲ. ಆದರೆ, ಜನ ಆ ರೀತಿ ಮಾತನಾಡಿಕೊಳ್ಳುವ ಸಾಧ್ಯತೆಯನ್ನು ತಳ್ಳಿ ಹಾಕಲಾಗದು' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.