ADVERTISEMENT

ಎಸ್ಕಾಂಗಳಿಗೆ ₹ 12,553 ಕೋಟಿ: ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2017, 19:30 IST
Last Updated 11 ಡಿಸೆಂಬರ್ 2017, 19:30 IST
ಎಸ್ಕಾಂಗಳಿಗೆ ₹ 12,553 ಕೋಟಿ: ಒಪ್ಪಿಗೆ
ಎಸ್ಕಾಂಗಳಿಗೆ ₹ 12,553 ಕೋಟಿ: ಒಪ್ಪಿಗೆ   

ಬೆಂಗಳೂರು:‌ ಭಾಗ್ಯಜ್ಯೋತಿ, ಕುಟೀರ ಜ್ಯೋತಿ ಮತ್ತು 10 ಎಚ್‌ಪಿವರೆಗಿನ ನೀರಾವರಿ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್‌ ಪೂರೈಕೆಗಾಗಿ ವಿದ್ಯುತ್‌ ಸರಬರಾಜು ಕಂಪೆನಿಗಳಿಗೆ (ಎಸ್ಕಾಂ) 2018–19ನೇ ಸಾಲಿನ ಬಜೆಟ್‌ನಲ್ಲಿ ₹12,553 ಕೋಟಿ ಸಹಾಯಧನ ಒದಗಿಸಲು ರಾಜ್ಯ ಸಚಿವ ಸಂಪುಟ ಸಭೆ ಸೋಮವಾರ ಒಪ್ಪಿಗೆ ನೀಡಿದೆ.

‘ಸದ್ಯ 10 ಎಚ್‌ಪಿ ವರೆಗಿನ 19.51 ಲಕ್ಷ ನೀರಾವರಿ ಪಂಪ್‌ಸೆಟ್‌ಗಳಿವೆ. 2018–19ನೇ ಸಾಲಿಗೆ ಈ ಪಂಪ್‌ಸೆಟ್‌ಗಳ ಸಂಖ್ಯೆ 22.33 ಲಕ್ಷಕ್ಕೆ ಏರಿಕೆ ಆಗಲಿದೆ. ಹೀಗಾಗಿ ಸಹಾಯಧನದ ಮೊತ್ತವನ್ನೂ ಹೆಚ್ಚಿಸಲಾಗಿದೆ’ ಎಂದು ಸಭೆಯ ಬಳಿಕ ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

ವಿಶೇಷ ಕೃಷಿ ವಲಯ ಸ್ಥಾಪನೆ: ರಾಜ್ಯದಲ್ಲಿ ವಿಶೇಷ ಕೃಷಿ ವಲಯ ಸ್ಥಾಪಿಸುವ ಪ್ರಸ್ತಾವಕ್ಕೂ ಸಭೆ ಅನುಮೋದನೆ ನೀಡಿದೆ. ಕೃಷಿ ತಜ್ಞ ಸ್ವಾಮಿನಾಥನ್ ಅಧ್ಯಕ್ಷತೆಯ ವಿಷನ್ ಗ್ರೂಪ್ ನೀಡಿದ ಸಲಹೆಯಂತೆ, ರೈತರ ಉಪಯೋಗಕ್ಕಾಗಿ ವಿಶೇಷ ಕೃಷಿ ವಲಯ ಗುರುತಿಸಲು ಉದ್ದೇಶಿಸಲಾಗಿದೆ ಎಂದರು.

ADVERTISEMENT

ಕೃಷಿ ಭೂಮಿ ಸಂರಕ್ಷಿಸುವ ಜೊತೆಗೆ ಕೃಷಿ ಕ್ಷೇತ್ರಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಇಂಥ ವಲಯ ಸ್ಥಾಪಿಸಲಾಗುವುದು. ಆ ಮೂಲಕ ಆಹಾರ ಉತ್ಪಾದನೆ ಹೆಚ್ಚಿಸಲು ಸಹಾಯಕವಾಗುವ ನೀತಿ ಜಾರಿಗೊಳಿಸಲು ಚಿಂತನೆ ನಡೆದಿದೆ ಎಂದರು.

ತ್ಯಾಜ್ಯ ನೀರು ಮರು ಬಳಕೆ ನೀತಿ: ರಾಜ್ಯದ ಎಲ್ಲ ನಗರಗಳಲ್ಲೂ ತ್ಯಾಜ್ಯ ನೀರು ಮರುಬಳಕೆ ನೀತಿಗೂ ಒಪ್ಪಿಗೆ ನೀಡಲಾಗಿದೆ. ಈ ನೀತಿ ಎಲ್ಲ ಜಿಲ್ಲೆಗಳಿಗೆ ಅನ್ವಯಿಸಲಿದೆ ಎಂದು ಅವರು ತಿಳಿಸಿದರು.

ಬೆಂಗಳೂರಿಗೆ ಸರಬರಾಜು ಆಗುವ ಅಂದಾಜು 19 ಟಿಎಂಸಿ ಅಡಿ ನೀರಿನಲ್ಲಿ 10.56 ಟಿಎಂಸಿ ಅಡಿಯಷ್ಟು ತ್ಯಾಜ್ಯ ನೀರು ಕೋಲಾರ ಮತ್ತು
ಚಿಕ್ಕಬಳ್ಳಾಪುರ ಜಿಲ್ಲೆಯ 526 ಕೆರೆ ತುಂಬಿಸಲು ಮರು ಬಳಕೆ ಮಾಡುವ ಯೋಜನೆ ಪ್ರಗತಿಯಲ್ಲಿದೆ. ರಾಜ್ಯದ ಎಲ್ಲ ನಗರಗಳಲ್ಲೂ ವಿಸ್ತರಿಸುತ್ತೇವೆ ಎಂದು ಹೇಳಿದರು.

ಪ್ರಕರಣ ಕೈ ಬಿಡಲು ತೀರ್ಮಾನ

ರೈತರಿಗೆ ಬೆಳೆ ನಷ್ಟ ಪರಿಹಾರ ತಲುಪಿಸುವ ಸಂದರ್ಭದಲ್ಲಿ ನಿಯಮ ಉಲ್ಲಂಘಿಸಿದ ಆರೋಪ ಎದುರಿಸುತ್ತಿರುವ ಕೆಎಎಸ್‌ (ಕಿರಿಯ ಶ್ರೇಣಿ) ಅಧಿಕಾರಿಗಳಾದ ಅನಿತಾಲಕ್ಷ್ಮಿ, ಬಿ.ಎ. ಜಗದೀಶ ಮತ್ತು ಎಂ. ತಿಪ್ಪೇಸ್ವಾಮಿ ವಿರುದ್ಧದ ಪ್ರಕರಣವನ್ನು ಕೈಬಿಡಲು ಸಚಿವ ಸಂಪುಟ ನಿರ್ಧರಿಸಿದೆ.

‘ಫಲಾನುಭವಿಗಳು ನೀಡಿದ ದೂರಿನ ಕುರಿತು ಶಿಸ್ತುಕ್ರಮ ತೆಗೆದುಕೊಳ್ಳುವಂತೆ ಉಪ ಲೋಕಾಯುಕ್ತರು ಮಾಡಿರುವ ಶಿಫಾರಸು ಏನು’ ಎಂದು ಮಾಧ್ಯಮ ಪ್ರತಿನಿಧಿಗಳು ಪ್ರಶ್ನಿಸಿದಾಗ, ಉತ್ತರಿಸಲು ಸಚಿವ ಜಯಚಂದ್ರ ತಡವರಿಸಿದರು.

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್‌) ಕಾರ್ಯದರ್ಶಿ ಅನಿಲ್‌ ಕುಮಾರ್‌ ಝಾ ಅವರನ್ನು ಕರೆಸಿಕೊಂಡು ಮಾಹಿತಿ ಪಡೆದ ಬಳಿಕವೂ ಸಮರ್ಪಕ ಉತ್ತರ ನೀಡಲು ಅಸಾಧ್ಯವಾದ ಕಾರಣ, ಎರಡು ದಿನಗಳ ಒಳಗೆ ಮಾಧ್ಯಮಗೋಷ್ಠಿ ಕರೆದು ವಿವರ ನೀಡುವುದಾಗಿ ಸಚಿವರು ತಿಳಿಸಿದರು.

‘ಮಧುಗಿರಿಯಲ್ಲಿ ಅನಿತಾಲಕ್ಷ್ಮಿ ಉಪ ವಿಭಾಗಾಧಿಕಾರಿಯಾಗಿದ್ದರು. ಆಗ ರೈತರಿಗೆ 337 ಚೆಕ್‌ಗಳ ಮೂಲಕ ₹ 3.19 ಲಕ್ಷ ಬೆಳೆ ನಷ್ಟ ಪರಿಹಾರ ಮೊತ್ತ ವಿತರಿಸಲಾಗಿದೆ. ಈ ಚೆಕ್‌ಗಳ ಪೈಕಿ 44 ಚೆಕ್‌ಗಳು ಕಣ್ಮರೆಯಾಗಿವೆ. ಕೆಲವು ಫಲಾನುಭವಿಗಳ ಹೆಸರು ಎರಡು ಕಡೆ ನಮೂದಾಗಿದೆ. ಒಂದೇ ಮಾದರಿಯ ಸಹಿಗಳಿವೆ’ ಎಂದು ಮಾಹಿತಿ ನೀಡಿದರು. ಆದರೆ, ಈ ದೂರಿನ ತನಿಖೆ ನಡೆಸಿದ್ದ ಉಪ ಲೋಕಾಯುಕ್ತರು ಮಾಡಿದ ಶಿಫಾರಸಿನ ಬಗ್ಗೆ ವಿವರ ನೀಡಲು ಅವರು ಹಿಂದೇಟು ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.