ADVERTISEMENT

ಎಸ್‌ಪಿ ವಿರುದ್ಧ ಪ್ರತಾಪ ಸಿಂಹ ಮತ್ತೆ ಟೀಕೆ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2017, 19:30 IST
Last Updated 5 ಡಿಸೆಂಬರ್ 2017, 19:30 IST
ಎಸ್‌ಪಿ ವಿರುದ್ಧ ಪ್ರತಾಪ ಸಿಂಹ ಮತ್ತೆ ಟೀಕೆ
ಎಸ್‌ಪಿ ವಿರುದ್ಧ ಪ್ರತಾಪ ಸಿಂಹ ಮತ್ತೆ ಟೀಕೆ   

ಮೈಸೂರು: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್ ವಿರುದ್ಧ ಸಂಸದ ಪ್ರತಾಪಸಿಂಹ ಅವರ ವಾಗ್ದಾಳಿ ಮಂಗಳವಾರವೂ ಮುಂದುವರಿದಿದೆ.

‘ನೀವು ಕರ್ತವ್ಯಕ್ಕೆ ನಿಷ್ಠರೊ ಅಥವಾ ಕೆಂಪಯ್ಯ ಅವರಿಗೆ ನಿಷ್ಠರೊ ಎಂದು ನಿಮ್ಮ ಆತ್ಮಸಾಕ್ಷಿ ಕೇಳಿ’ ಎಂದು ತಮ್ಮ ‘ಫೇಸ್‌ಬುಕ್ ಲೈವ್‌’ನಲ್ಲಿ ಹೇಳಿದ್ದಾರೆ.

‘ಗೌರವಾನ್ವಿತ ಸಂಸದರೇ ಎಂದರೆ ಸಾಲದು. ಗೌರವವಾಗಿ ನಡೆಸಿಕೊಳ್ಳಬೇಕು. ಕೊಲೆಯತ್ನದ ದೂರು ನೀಡುವಂತೆ ಪೊಲೀಸ್ ಸಿಬ್ಬಂದಿ ಮೇಲೆ ಒತ್ತಡ ಹೇರಿರಲಿಲ್ಲವೇ? ಪೊಲೀಸರ ದಾಖಲೆಗಾಗಿ ಮಾಡಿದ ವಿಡಿಯೊವನ್ನು ಬಹಿರಂಗಪಡಿಸಿದ್ದು ಏಕೆ?’ ಎಂದುಪ್ರಶ್ನಿಸಿದ್ದಾರೆ.

ADVERTISEMENT

‘ನೀವು ನೀಡುವ ವರದಿಯ ಆಧಾರದ ಮೇಲೆ ಜಿಲ್ಲಾಧಿಕಾರಿ ಡಿ.ರಂದೀಪ್ ಆದೇಶ ನೀಡುವುದು ಎಂಬ ವಿಚಾರ ಎಲ್ಲರಿಗೂ ತಿಳಿದಿದೆ. ಅವರನ್ನು ಅನಾವಶ್ಯಕವಾಗಿ ಪ್ರಕರಣದಲ್ಲಿ ಎಳೆದು ತಂದಿದ್ದೀರಿ’ ಎಂದು ಕಿಡಿಕಾರಿದ್ದಾರೆ.

ಅಮಿತ್ ಷಾ ಹೇಳಿಕೆಗೆ ಸಂಬಂಧ ಇಲ್ಲ: ಜ್ವಲಂತ ಸಮಸ್ಯೆ ಇಟ್ಟುಕೊಂಡು ಹೋರಾಟ ಮಾಡಿ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಹೇಳಿದ್ದು ನಿಜ. ಆದರೆ, ಮಾಧ್ಯಮಗಳಲ್ಲಿ ಪ್ರಕಟವಾದ ವಿಡಿಯೊವನ್ನು ಎಡಿಟ್ ಮಾಡಲಾಗಿದೆ. ಅಮಿತ್ ಷಾ ಹೇಳಿಕೆಗೂ ಹುಣಸೂರು ಘಟನೆಗೂ ಸಂಬಂಧ ಇಲ್ಲ ಎಂದು ಪ್ರತಾಪಸಿಂಹ ಸ್ಪಷ್ಟಪಡಿಸಿದ್ದಾರೆ.

ಈ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.

ಪ್ರತಾಪ ವಿರುದ್ಧ ದೂರು ದಾಖಲು

ಸಂಸದ ಪ್ರತಾಪಸಿಂಹ ವಿರುದ್ಧ ಕಾಂಗ್ರೆಸ್ ಮುಖಂಡರಾದ ಮಂಜುಳಾ ಮಾನಸ ಹಾಗೂ ಇತರ 10 ಮಂದಿ ವಕೀಲರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ನಗರ ಪೊಲೀಸ್ ಕಮೀಷನರ್‌ಗೆ ದೂರು ಸಲ್ಲಿಸಿದ್ದಾರೆ.

‘ಸಾಮಾಜಿಕ ಮಾಧ್ಯಮಗಳ ಮೂಲಕ ಸಮಾಜದ ನೆಮ್ಮದಿಗೆ ಭಂಗ ತರುವಂತಹ ಹಾಗೂ ಮಹಿಳೆಯರ ಘನತೆಗೆ ಧಕ್ಕೆ ತರುವಂತಹ ಹೇಳಿಕೆ ನೀಡುತ್ತಿರುವ ಪ್ರತಾಪಸಿಂಹ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.