ಬೆಂಗಳೂರು: ರಾಜ್ಯದಾದ್ಯಂತ ಗುರುವಾರ ನಡೆದ ಎಸ್‌ಎಸ್‌ಎಲ್‌ಸಿ ವಿಜ್ಞಾನ ಪರೀಕ್ಷೆಯಲ್ಲಿ ನಕಲು ಮಾಡಿದ ಒಟ್ಟು 24 ವಿದ್ಯಾರ್ಥಿಗಳನ್ನು ಡಿಬಾರ್ ಮಾಡಲಾಗಿದೆ. ವಿಜಾಪುರ ಜಿಲ್ಲೆಯಲ್ಲಿ 9, ಮೈಸೂರು ಜಿಲ್ಲೆಯಲ್ಲಿ ಆರು ವಿದ್ಯಾರ್ಥಿಗಳನ್ನು ಡಿಬಾರ್ ಮಾಡಲಾಗಿದೆ.
ಬಾಗಲಕೋಟೆ ಮತ್ತು ಗುಲ್ಬರ್ಗ ಜಿಲ್ಲೆಗಳಲ್ಲಿ ಮೂರು, ರಾಯಚೂರು, ಗದಗ, ಕೋಲಾರ ಜಿಲ್ಲೆಗಳಲ್ಲಿ ತಲಾ ಒಬ್ಬ ವಿದ್ಯಾರ್ಥಿಯನ್ನು ಡಿಬಾರ್ ಮಾಡಲಾಗಿದೆ ಎಂದು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಿರ್ದೇಶಕ ಡಿ. ವೆಂಕಟೇಶಯ್ಯ ತಿಳಿಸಿದ್ದಾರೆ. ವಿಜ್ಞಾನ ಪರೀಕ್ಷೆಯ ಪ್ರಶ್ನೆಪತ್ರಿಕೆ ಬಹಿರಂಗ ಆಗಿಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
ಸಿಇಟಿ: ಸಾಮಾನ್ಯ ಪ್ರವೇಶ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ದ್ವಿತೀಯ ಪಿಯು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಚಂದನ ವಾಹಿನಿಯಲ್ಲಿ ಶುಕ್ರವಾರ ಬೆಳಿಗ್ಗೆ 7ರಿಂದ 7.45ರವರೆಗೆ ಭೌತವಿಜ್ಞಾನ, ರಾತ್ರಿ 9.15ರಿಂದ 10 ಗಂಟೆಯವರೆಗೆ ರಸಾಯನ ವಿಜ್ಞಾನ ಕುರಿತು ಕಾರ್ಯಕ್ರಮ ಪ್ರಸಾರವಾಗಲಿದೆ.
ಶನಿವಾರ ಬೆಳಿಗ್ಗೆ 7ರಿಂದ 7.45ರವರೆಗೆ ಜೀವ ವಿಜ್ಞಾನ ಹಾಗೂ ರಾತ್ರಿ 9.15ರಿಂದ 10ರವರೆಗೆ ಭೌತವಿಜ್ಞಾನ ಕುರಿತು ಕಾರ್ಯಕ್ರಮ ಪ್ರಸಾರವಾಗಲಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.