ADVERTISEMENT

ಏಕಕಾಲಕ್ಕೆ 2 ಚಿತ್ರ ಬಿಡುಗಡೆ ವಿವಾದ; ನಾಳೆ ಅಂತಿಮ ತೀರ್ಪು

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2012, 19:30 IST
Last Updated 24 ಏಪ್ರಿಲ್ 2012, 19:30 IST

ಬೆಂಗಳೂರು: ಚಿತ್ರ ಬಿಡುಗಡೆ ಸಂಬಂಧ ನಿರ್ಮಾಪಕರಾದ ಕೆ.ಮಂಜು ಮತ್ತು ಮುನಿರತ್ನ ನಡುವೆ ಎದ್ದಿರುವ ವಿವಾದಕ್ಕೆ ಏಪ್ರಿಲ್ 26ರಂದು ತೆರೆ ಎಳೆಯಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಿರ್ಧರಿಸಿದೆ.

`ಕಠಾರಿವೀರ ಸುರಸುಂದರಾಂಗಿ~ ಮತ್ತು `ಗಾಡ್‌ಫಾದರ್~ ಚಿತ್ರಗಳ ಬಿಡುಗಡೆ ಕುರಿತಂತೆ ಉದ್ಭವಿಸಿರುವ ವಿವಾದ ಬಗೆಹರಿಸುವಂತೆ ಕೆ.ಮಂಜು ಅವರ ಮನವಿ ಮೇರೆಗೆ ಚಲನಚಿತ್ರ ವಾಣಿಜ್ಯ ಮಂಡಳಿ ಮಂಗಳವಾರ ಸಭೆ ನಡೆಸಿತು. ಮುನಿರತ್ನ ಮತ್ತು ನಟ ಅಂಬರೀಷ್ ಸಭೆಗೆ ಗೈರುಹಾಜರಿಯ ನಡುವೆ ವಾಣಿಜ್ಯ ಮಂಡಳಿ ಅಧ್ಯಕ್ಷ ಕೆ.ವಿ.ಚಂದ್ರಶೇಖರ್ ನೇತೃತ್ವದಲ್ಲಿ ಕೆ.ಮಂಜು ಮತ್ತು ನಟ ಉಪೇಂದ್ರ ಅವರೊಂದಿಗೆ ಮಾತುಕತೆ ನಡೆಯಿತು.

`ಎರಡೂ ಚಿತ್ರಗಳ ನಿರ್ಮಾಪಕರಿಂದ ಚಿತ್ರಬಿಡುಗಡೆ ಕುರಿತಂತೆ ಮಾಹಿತಿ ಪಡೆಯಲಾಗಿದೆ. ಎರಡು ಚಿತ್ರಗಳು ಏಕಕಾಲಕ್ಕೆ ಬಿಡುಗಡೆಯಾಗುವುದರಿಂದ ಉಂಟಾಗಬಹುದಾದ ಪರಿಣಾಮಗಳ ಕುರಿತು ಚರ್ಚಿಸಲಾಗಿದೆ. ಯಾವ ಚಿತ್ರ ಮೊದಲು ಬಿಡುಗಡೆಯಾಗಬೇಕು ಎಂಬುದನ್ನು ಏಪ್ರಿಲ್ 26ರ ಗುರುವಾರ ಮಧ್ಯಾಹ್ನ ನಡೆಯಲಿರುವ ಸಭೆಯಲ್ಲಿ ಅಂತಿಮ ನಿರ್ಧಾರ ಪ್ರಕಟಿಸಲಾಗುವುದು ಎಂದು ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಕೆ.ವಿ.ಚಂದ್ರಶೇಖರ್ `ಪ್ರಜಾವಾಣಿ~ಗೆ ತಿಳಿಸಿದರು.

`ವಿವಾದದಿಂದ ತಲೆದೋರಿರುವ ಶೇಕಡಾ 90ರಷ್ಟು ಸಮಸ್ಯೆ ಬಗೆಹರಿದಿದೆ. ಇಬ್ಬರೂ ನಿರ್ಮಾಪಕರಿಂದ ಸಂಗ್ರಹಿಸಿದ ಮಾಹಿತಿಯನ್ನು ಪರಿಗಣಿಸಿ ಗುರುವಾರ ಅಂತಿಮ ತೀರ್ಮಾನ ಹೊರಬೀಳಲಿದೆ~ ಎಂದು ಹೇಳಿದರು.
ಮಂಡಳಿ ತೀರ್ಮಾನಕ್ಕೆ ಬದ್ಧ: `ವಾಣಿಜ್ಯ ಮಂಡಳಿ ಕೇಳಿದ ಎಲ್ಲಾ ಮಾಹಿತಿಗಳನ್ನು ನೀಡಲಾಗಿದೆ. ಚಿತ್ರಬಿಡುಗಡೆ ಕುರಿತಂತೆ ಅಭಿಪ್ರಾಯಗಳನ್ನು ಸಭೆಯಲ್ಲಿ ತಿಳಿಸಿದ್ದೇನೆ. `ಗಾಡ್‌ಫಾದರ್~ ಚಿತ್ರವನ್ನು ಮೇ 11ಕ್ಕೆ ಬಿಡುಗಡೆ ಮಾಡಲು ಅವಕಾಶ ನೀಡುವಂತೆ ಸಭೆಯಲ್ಲಿ ಕೋರಿದ್ದೇನೆ. ಆದರೆ ವಾಣಿಜ್ಯ ಮಂಡಳಿ ತೆಗೆದುಕೊಳ್ಳುವ ಅಂತಿಮ ನಿರ್ಧಾರಕ್ಕೆ ಬದ್ಧನಾಗಿದ್ದೇನೆ~ ಎಂದು ನಿರ್ಮಾಪಕ ಕೆ.ಮಂಜು ತಿಳಿಸಿದರು.

ತಮ್ಮ ಹಾಗೂ ನಟ ಉಪೇಂದ್ರ ಅವರೊಂದಿಗೆ ಮಂಡಳಿ ಪ್ರತ್ಯೇಕವಾಗಿ ಸಭೆ ನಡೆಸಿತು. ಆ ಮಾತುಕತೆಯ ವಿವರಗಳು ತಮಗೆ ತಿಳಿದಿಲ್ಲ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.