ADVERTISEMENT

ಏಕಾದಶಿ: ಪಂಢರಪುರದಲ್ಲಿ 10 ಲಕ್ಷಭಕ್ತರ ದರ್ಶನ

​ಪ್ರಜಾವಾಣಿ ವಾರ್ತೆ
Published 19 ಜುಲೈ 2013, 19:59 IST
Last Updated 19 ಜುಲೈ 2013, 19:59 IST

ವಿಜಾಪುರ: ಆಷಾಢ ಏಕಾದಶಿಯ ದಿನವಾದ ಶುಕ್ರವಾರ ಮಹಾರಾಷ್ಟ್ರದ ಪಂಢರಪುರದಲ್ಲಿ 10 ಲಕ್ಷಕ್ಕೂ ಅಧಿಕ ಭಕ್ತರು ಸೇರಿದ್ದರು. ಸುರಿಯುವ ಮಳೆಯಲ್ಲಿಯೇ ನಾಲ್ಕೈದು ಕಿ.ಮೀ. ಉದ್ದದ ಸರದಿ ಸಾಲಿನಲ್ಲಿ ದಿನವಿಡೀ ನಿಂತು ವಿಠ್ಠಲ ಮತ್ತು ರುಕ್ಮಿಣಿ ದರ್ಶನ ಪಡೆದರು.

ಮಹಾರಾಷ್ಟ್ರ ಸರ್ಕಾರದ ಪರವಾಗಿ ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ್ ಶುಕ್ರವಾರ ಜಾವ 2.35ಕ್ಕೆ ವಿಠ್ಠಲನಿಗೆ ವಿಶೇಷ ಪೂಜೆ ಸಲ್ಲಿಸಿದರು. ಸುರಿಯುತ್ತಿದ್ದ ಮಳೆಯಲ್ಲಿಯೇ ಭಕ್ತರು ಚಂದ್ರಬಾಗಾ (ಭೀಮಾ) ನದಿಯಲ್ಲಿ ಸ್ನಾನ ಮಾಡಿದರು. ತಾಳ-ಮೃದಂಗ ನುಡಿಸುತ್ತ, `ಪುಂಡಲೀಕ ವರದೆ ಹರೇ ವಿಠ್ಠಲ' ಎಂಬ ಘೋಷಣೆ ಹಾಕುತ್ತ ವಿಠ್ಠಲನ ಕಳಸದ ಮೆರವಣಿಗೆ ನಡೆಸಿದರು.

`ಹತ್ತು ದಿನಗಳಿಂದ ನಡೆಯುತ್ತಿರುವ ಈ ಉತ್ಸವದಲ್ಲಿ ಈವರೆಗೆ ಅಂದಾಜು ಐದು ಲಕ್ಷ ಭಕ್ತರು ದರ್ಶನ ಪಡೆದಿದ್ದಾರೆ. ಏಕಾದಶಿಯ ದಿನವಾದ ಶುಕ್ರವಾರ ಭಕ್ತರ ಸಂಖ್ಯೆ 10 ಲಕ್ಷಕ್ಕಿಂತ ಹೆಚ್ಚು ಇತ್ತು. ದಿಂಡಿ ಯಾತ್ರೆಯ ಮೂಲಕ ಆಗಮಿಸಿರುವ ಕರ್ನಾಟಕದ ಭಕ್ತರೇ ಅಧಿಕ ಸಂಖ್ಯೆಯಲ್ಲಿದ್ದಾರೆ' ಎಂದು ದೇವಸ್ಥಾನ ಸಮಿತಿಯವರು ಹೇಳಿದರು. ಬೋಧಗಯಾ ಸ್ಫೋಟದ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಬಿಗಿ ಭದ್ರತೆ ಒದಗಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.