ADVERTISEMENT

ಏ. 1ರಿಂದ ವಿದ್ಯುತ್ ದುಬಾರಿ

ಎ.ಎಂ.ಸುರೇಶ
Published 17 ಫೆಬ್ರುವರಿ 2013, 19:59 IST
Last Updated 17 ಫೆಬ್ರುವರಿ 2013, 19:59 IST
ಏ. 1ರಿಂದ ವಿದ್ಯುತ್ ದುಬಾರಿ
ಏ. 1ರಿಂದ ವಿದ್ಯುತ್ ದುಬಾರಿ   

ಬೆಂಗಳೂರು: ವಿದ್ಯುತ್ ಕಣ್ಣಾಮುಚ್ಚಾಲೆ ನಡುವೆಯೇ ಗ್ರಾಹಕರಿಗೆ ವಿದ್ಯುತ್ ದರ ಏರಿಕೆ ಬಿಸಿ ತಟ್ಟಲಿದೆ. ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು (ಕೆಇಆರ್‌ಸಿ) ಈಗಾಗಲೇ ದರ ಹೆಚ್ಚಳಕ್ಕೆ ಅಗತ್ಯ ಸಿದ್ಧತೆ ನಡೆಸಿದೆ. ಮಾರ್ಚ್ ಅಂತ್ಯದಲ್ಲಿ ದರ ಹೆಚ್ಚಳ ಆದೇಶ ಹೊರಬೀಳಲಿದೆ. ಏಪ್ರಿಲ್ 1ರಿಂದಲೇ ಪರಿಷ್ಕೃತ ದರಗಳು ಜಾರಿಗೆ ಬರಲಿವೆ.

ಪ್ರತಿ ಯೂನಿಟ್‌ಗೆ 70 ಪೈಸೆ ಹೆಚ್ಚಳ ಮಾಡುವಂತೆ ಕೋರಿ ರಾಜ್ಯದ ಐದೂ ವಿದ್ಯುತ್ ಸರಬರಾಜು ಕಂಪೆನಿಗಳು (ಎಸ್ಕಾಂ) ಕಳೆದ ಡಿಸೆಂಬರ್‌ನಲ್ಲಿ ಕೆಇಆರ್‌ಸಿಗೆ ಪ್ರಸ್ತಾವನೆ ಸಲ್ಲಿಸಿವೆ. ದರ ಹೆಚ್ಚಳಕ್ಕೆ ಸಂಬಂಧಪಟ್ಟಂತೆ ಸಾರ್ವಜನಿಕರು, ಸಂಘ ಸಂಸ್ಥೆಗಳಿಂದ ಆಕ್ಷೇಪಣೆಗಳು ಸಲ್ಲಿಕೆಯಾಗಿವೆ. ಈ ಹಿನ್ನೆಲೆಯಲ್ಲಿ ಇದೇ 22ರಿಂದ ಕಂಪೆನಿವಾರು ಸಾರ್ವಜನಿಕರ ಅಹವಾಲು ಸಭೆಗಳು ನಡೆಯಲಿವೆ.

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಸಲ್ಲಿಸಿರುವ ಪ್ರಸರಣ ವೆಚ್ಚ ಹೆಚ್ಚಳಕ್ಕೆ ಸಂಬಂಧಿಸಿದ ಪ್ರಸ್ತಾವನೆಯ ಅಹವಾಲು ಸಭೆ 22ರಂದು ಶುಕ್ರವಾರ ಆಯೋಗದ ಕೇಂದ್ರ ಕಚೇರಿಯಲ್ಲಿ ನಡೆಯಲಿದೆ. ಪ್ರಸರಣ ದರ ಹೆಚ್ಚಳದ ಹೊರೆ ನೇರವಾಗಿ ಗ್ರಾಹಕರ ಮೇಲೆ ಬೀಳುವುದಿಲ್ಲ. ಆಯಾ ಕಂಪೆನಿಗಳು ಈ ಹೊರೆ ಭರಿಸಬೇಕಾಗುತ್ತದೆ.

ಇದೇ 25ರಂದು ಬೆಸ್ಕಾಂ, 26ರಂದು ಚೆಸ್ಕ್, 28ರಂದು ಮೆಸ್ಕಾಂ, ಮಾರ್ಚ್ 4ರಂದು ಹೆಸ್ಕಾಂ ಹಾಗೂ 6ರಂದು ಜೆಸ್ಕಾಂ ಕಂಪೆನಿಯ ಅಹವಾಲು ಸಭೆಗಳು ನಡೆಯಲಿವೆ. ಐದೂ ಕಂಪೆನಿಗಳು ಏಕರೂಪದ ದರ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಿವೆ. ಆದಾಯ ಮತ್ತು ವೆಚ್ಚದ ನಡುವಿನ ಕೊರತೆಯನ್ನು ಸರಿದೂಗಿಸಿಕೊಳ್ಳುವ ಉದ್ದೇಶದಿಂದ ಇವು ದರ ಏರಿಕೆಯ ಮೊರೆ ಹೋಗಿವೆ.

ದರ ಹೆಚ್ಚಳ ಮಾಡುವುದನ್ನು ವಿರೋಧಿಸಿ ಈಗಾಗಲೇ ಸಾರ್ವಜನಿಕರಿಂದ ಆಕ್ಷೇಪಣೆಗಳು ಬಂದಿವೆ. ಆಕ್ಷೇಪಣೆ ಸಲ್ಲಿಸದೆ ಇರುವವರು ಸಹ ನೇರವಾಗಿ ಅಹವಾಲು ಸಭೆಗಳಲ್ಲಿ ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ತಿಳಿಸಬಹುದು ಎಂದು ಆಯೋಗದ ಅಧ್ಯಕ್ಷ ಎಂ.ಆರ್.ಶ್ರೀನಿವಾಸಮೂರ್ತಿ ಅವರು `ಪ್ರಜಾವಾಣಿ'ಗೆ ತಿಳಿಸಿದರು.

ಆಯೋಗವು ಎರಡು ತಿಂಗಳಿನಿಂದ ದರ ಏರಿಕೆಗೆ ಸಂಬಂಧಪಟ್ಟಂತೆ ಕಂಪೆನಿಗಳು ಸಲ್ಲಿಸಿರುವ ಪ್ರಸ್ತಾವನೆಗಳ ಪರಿಶೀಲನೆಯಲ್ಲಿ ತೊಡಗಿದೆ. ಕಂಪೆನಿಗಳ ಆದಾಯ ಮತ್ತು ವೆಚ್ಚ, ವಿದ್ಯುತ್ ಖರೀದಿ ಮಾಡುತ್ತಿರುವ ಪ್ರಮಾಣ ಇತ್ಯಾದಿ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಯಾವ ಪ್ರಮಾಣದಲ್ಲಿ ದರ ಹೆಚ್ಚಳ ಮಾಡಬೇಕು ಎಂಬುದನ್ನು ನಿರ್ಧರಿಸಲಿದೆ ಎಂದರು.

25- 30 ಪೈಸೆ ಏರಿಕೆ?: ಈ ಹಿಂದೆ ಮಾಡಿರುವ ದರ ಹೆಚ್ಚಳವನ್ನು ಅವಲೋಕಿಸಿದರೆ, ಈ ಬಾರಿ ಯೂನಿಟ್‌ಗೆ 25 ರಿಂದ 30 ಪೈಸೆ ಹೆಚ್ಚಳವಾಗುವ ಸಾಧ್ಯತೆ ಇದೆ. ಆಯೋಗವು ಸ್ವತಂತ್ರವಾದ ಸಂಸ್ಥೆ. ಅಲ್ಲದೆ ಕೇಂದ್ರ ವಿದ್ಯುತ್ ಮೇಲ್ಮನವಿ ಪ್ರಾಧಿಕಾರದ ಪ್ರಕಾರ ಪ್ರತಿ ವರ್ಷ ಏಪ್ರಿಲ್ 1ರಿಂದ ದರ ಪರಿಷ್ಕರಣೆ ಆಗಬೇಕು. ಹೀಗಾಗಿ ವಿಧಾನಸಭಾ ಚುನಾವಣೆಯ ಮೇಲೆ ಪರಿಣಾಮ ಬೀರಬಹುದು ಎಂಬ ಕಾರಣಕ್ಕೆ ದರ ಏರಿಕೆಯನ್ನು ಮುಂದೂಡಲು ಸಾಧ್ಯವಿಲ್ಲ.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಇದುವರೆಗೆ ನಾಲ್ಕು ಬಾರಿ ದರ ಏರಿಕೆಯಾಗಿದೆ. ಈ ಸರ್ಕಾರದ ಅವಧಿ ಮುಗಿಯುವ ಮೊದಲೇ ಮತ್ತೊಂದು ಬಾರಿ ದರ ಏರಿಕೆಯಾಗುವುದು ಖಚಿತವಾಗಿದೆ. ಪ್ರತಿ ವರ್ಷ ವಿದ್ಯುತ್ ದರ ಏರಿಕೆಯಾಗುತ್ತಲೇ ಇದೆ.

ಸಮಾಧಾನದ ಸಂಗತಿ ಎಂದರೆ ದರ ಏರಿಕೆ ಪ್ರಮಾಣ ವರ್ಷದಿಂದ ವರ್ಷಕ್ಕೆ ಕಡಿಮೆಯಾಗಿದೆ. ಕಳೆದ ವರ್ಷ 73 ಪೈಸೆ ಹೆಚ್ಚಳ ಮಾಡುವಂತೆ ಕೋರಿ ಕಂಪೆನಿಗಳು ಪ್ರಸ್ತಾವನೆ ಸಲ್ಲಿಸಿದ್ದವು. ಆದರೆ, ಆಯೋಗವು ಯೂನಿಟ್‌ಗೆ ಸರಾಸರಿ 13 ಪೈಸೆ ಹೆಚ್ಚಳ ಮಾಡಿ ಆದೇಶ ಹೊರಡಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.