ADVERTISEMENT

`ಐತೀರ್ಪು ಅಧಿಸೂಚನೆ; ಮೇಲ್ಮನವಿಗೆ ಅವಕಾಶ ಇದೆ'

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2012, 19:59 IST
Last Updated 27 ಡಿಸೆಂಬರ್ 2012, 19:59 IST
ಕಾವೇರಿ ನದಿ ನೀರು ಹಂಚಿಕೆ ಸಂಬಂಧ ರಾಜ್ಯದ ಪರ ಸುಪ್ರೀಂಕೋರ್ಟ್‌ನಲ್ಲಿ ವಾದ ಮಂಡಿಸುತ್ತಿರುವ ಹಿರಿಯ ವಕೀಲ ಫಾಲಿ ಎಸ್.ನಾರಿಮನ್ ಗುರುವಾರ ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್ ಜಲಾಶಯಕ್ಕೆ ಭೇಟಿ ನೀಡಿದ್ದರು. ಕಾವೇರಿ ನೀರಾವರಿ ನಿಗಮದ ಮುಖ್ಯ ಎಂಜಿನಿಯರ್ ಶಿವಶಂಕರ್ ಇದ್ದಾರೆ 	-ಪ್ರಜಾವಾಣಿ ಚಿತ್ರ
ಕಾವೇರಿ ನದಿ ನೀರು ಹಂಚಿಕೆ ಸಂಬಂಧ ರಾಜ್ಯದ ಪರ ಸುಪ್ರೀಂಕೋರ್ಟ್‌ನಲ್ಲಿ ವಾದ ಮಂಡಿಸುತ್ತಿರುವ ಹಿರಿಯ ವಕೀಲ ಫಾಲಿ ಎಸ್.ನಾರಿಮನ್ ಗುರುವಾರ ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್ ಜಲಾಶಯಕ್ಕೆ ಭೇಟಿ ನೀಡಿದ್ದರು. ಕಾವೇರಿ ನೀರಾವರಿ ನಿಗಮದ ಮುಖ್ಯ ಎಂಜಿನಿಯರ್ ಶಿವಶಂಕರ್ ಇದ್ದಾರೆ -ಪ್ರಜಾವಾಣಿ ಚಿತ್ರ   

ಶ್ರೀರಂಗಪಟ್ಟಣ:  2007ರ ಕಾವೇರಿ ನ್ಯಾಯಮಂಡಳಿ ಐತೀರ್ಪು ಆಧರಿಸಿ ಅಧಿಸೂಚನೆ ಹೊರಬಿದ್ದರೆ ಅದರಿಂದ ಕರ್ನಾಟಕಕ್ಕೆ ಯಾವುದೇ ನಷ್ಟ ಇಲ್ಲ ಎಂದು ಕಾವೇರಿ ನದಿನೀರು ಹಂಚಿಕೆ ಸಂಬಂಧ ರಾಜ್ಯದ ಪರ ಸುಪ್ರೀಂಕೋರ್ಟ್‌ನಲ್ಲಿ ವಾದ ಮಂಡಿಸುತ್ತಿರುವ ಹಿರಿಯ ವಕೀಲ ಫಾಲಿ ಎಸ್.ನಾರಿಮನ್ ಅಭಿಪ್ರಾಯಪಟ್ಟರು.ಕೆಆರ್‌ಎಸ್‌ಗೆ ಗುರುವಾರ ಭೇಟಿ ನೀಡಿ, ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ಜತೆ ಜಲಾಶಯ ವೀಕ್ಷಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದರು.

ಕಾವೇರಿ ನ್ಯಾಯಮಂಡಳಿಯ ಐತೀರ್ಪು ಆಧರಿಸಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದರೆ ಅದು ರಾಜ್ಯದ ಹಿತಾಸಕ್ತಿಗೆ ವಿರುದ್ಧವಾಗಿರುತ್ತದೆ ಎನ್ನಲಾಗದು. ಒಂದು ವೇಳೆ ಕರ್ನಾಟಕದ ಪಾಲಿಗೆ ಅಧಿಸೂಚನೆ ಮಾರಕ ಎನಿಸಿದರೆ ಮೇಲ್ಮನವಿ ಸಲ್ಲಿಸಲು ಅವಕಾಶ ಇರುತ್ತದೆ. ಕರ್ನಾಟಕ ಮಾತ್ರವಲ್ಲ, ಕಾವೇರಿ ಕೊಳ್ಳದ ಯಾವುದೇ ರಾಜ್ಯ ಮೇಲ್ಮನವಿ ಸಲ್ಲಿಸಬಹುದು. ಹಾಗಾಗಿ ಅಧಿಸೂಚನೆ ಹೊರಬಿದ್ದರೆ ರಾಜ್ಯದ ರೈತರು ಪ್ರತಿಭಟನೆಯ ಹಾದಿ ಹಿಡಿಯುವ ಅಗತ್ಯ ಇಲ್ಲ. ಕಾನೂನುಬದ್ಧ ಹೋರಾಟದ ಮೂಲಕವೇ ನ್ಯಾಯ ಪಡೆದುಕೊಳ್ಳಲು ಅವಕಾಶ ಇದೆ ಎಂದು ಹೇಳಿದರು.

ಕಾವೇರಿ ನದಿ ನೀರು ಹಂಚಿಕೆ ವಿಷಯದಲ್ಲಿ ಕರ್ನಾಟಕ ಸರ್ಕಾರ ಎಲ್ಲ ರೀತಿಯ ಸಹಕಾರ ನೀಡುತ್ತಿದೆ. ನ್ಯಾಯಾಲಯದಲ್ಲಿ ವಾದ ಮಂಡಿಸಲು ಪೂರಕವಾದ ದಾಖಲೆ ನೀಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.`ಕಾವೇರಿ ಕುಟುಂಬ'ದ ಅಧ್ಯಕ್ಷ ಪ್ರೊ.ಕೆ.ಸಿ.ಬಸವರಾಜು, ಸದಸ್ಯರಾದ ಸುನಂದಾ ಜಯರಾಂ, ಬಡಗಲಪುರ ನಾಗೇಂದ್ರ, ಬಿ.ಬಿ.ಸುಬ್ಬಯ್ಯ, ಅತ್ತಹಳ್ಳಿ ನಾಗರಾಜು, ಎಚ್.ಕೆ.ಕೇಶವಮೂರ್ತಿ ಅವರು ನಾರಿಮನ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು.

ಭೇಟಿಯ ನಂತರ ಮಾತನಾಡಿದ ಸುನಂದಾ ಜಯರಾಂ, ಎರಡೂ ರಾಜ್ಯಗಳ ರೈತರು ಪರಸ್ಪರ ಮಾತುಕತೆ ಮೂಲಕ ಕಾವೇರಿ ವಿವಾದ ಇತ್ಯರ್ಥ ಪಡಿಸಿಕೊಳ್ಳಬೇಕು ಎಂಬುದು ನಾರಿಮನ್ ಅವರ ಅಭಿಪ್ರಾಯ ಕೂಡ ಆಗಿದೆ. ಈ ದಿಸೆಯಲ್ಲಿ ತಮಿಳುನಾಡು ರೈತ ಮುಖಂಡರ ಜತೆ ಚರ್ಚಿಸಿ ವಿವಾದ ಇತ್ಯರ್ಥಕ್ಕೆ ಅಗತ್ಯವಾದ ಎಲ್ಲ ಪ್ರಯತ್ನ ಮಾಡುತ್ತೇವೆ ಎಂದರು.ಕಾವೇರಿ ನೀರಾವರಿ ನಿಗಮದ ಮುಖ್ಯ ಎಂಜಿನಿಯರ್ ಶಿವಶಂಕರ್, ಅಧೀಕ್ಷಕ ಎಂಜಿನಿಯರ್ ಶಂಕರೇಗೌಡ, ಕಾರ್ಯಪಾಲಕ ಎಂಜಿನಿಯರ್ ವಿಜಯಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.