ADVERTISEMENT

ಐಪಿಎಸ್‌ ಅಧಿಕಾರಿಗಳ ವಿರುದ್ಧ ಪತ್ರ

ನಿಯಮ ಉಲ್ಲಂಘನೆ: ಮುಖ್ಯಮಂತ್ರಿ, ಮುಖ್ಯ ಕಾರ್ಯದರ್ಶಿಗೆ ವಿವರಣೆ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2018, 20:31 IST
Last Updated 14 ಮಾರ್ಚ್ 2018, 20:31 IST

ಮಂಡ್ಯ: ಐಪಿಎಸ್‌ ಅಧಿಕಾರಿಗಳ ಅಧಿಕಾರ ದುರುಪಯೋಗ, ಜಾತೀಯತೆ, ಅದಕ್ಷತೆ, ಪ್ರಾಮಾಣಿಕತೆ ಕೊರತೆ ಖಂಡಿಸಿ ‘ರಾಜ್ಯ ಸಶಸ್ತ್ರ ಮೀಸಲು ಪಡೆಗಳ ಪೊಲೀಸ್‌ ಸಿಬ್ಬಂದಿ ಸಂಘ’ದ ಅಧ್ಯಕ್ಷರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ ಅವರಿಗೆ ಸೋಮವಾರ ಪತ್ರ ಬರೆದಿದ್ದಾರೆ.

ನೋಂದಣಿ ಮಾಡಿಸದ ಹಾಗೂ ಸರ್ಕಾರದ ಮಾನ್ಯತೆ ಪಡೆಯದ ಸಂಘ ಎಂದು ತಿಳಿಸಿರುವ ಅಧ್ಯಕ್ಷರು ನಾಲ್ಕು ಪುಟಗಳ ಪತ್ರ ಬರೆದಿದ್ದಾರೆ. ರಾಜ್ಯದಲ್ಲಿ ಐಪಿಎಸ್‌ ಅಧಿಕಾರಿಗಳ ದುರಾಡಳಿತ ನಿರಂತರವಾಗಿ ನಡೆದಿದೆ. ನಿಯಮದ ಪ್ರಕಾರ ಅಧಿಕಾರಿಗಳು ಮೂವರು ಆರ್ಡರ್ಲಿಗಳನ್ನು ನೇಮಕ ಮಾಡಿಕೊಳ್ಳಲು ಅವಕಾಶವಿದೆ. ಆದರೆ, ಈಗ 20ಕ್ಕೂ ಹೆಚ್ಚು ಸಿಬ್ಬಂದಿಯನ್ನು ಆರ್ಡರ್ಲಿಯಾಗಿ ನೇಮಕ ಮಾಡಿಕೊಂಡಿದ್ದಾರೆ. ವೈಯಕ್ತಿಕ ಕೆಲಸ ಮಾಡಿಸಿಕೊಳ್ಳುವ ಮೂಲಕ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಮನೆ ಒರೆಸುವುದು, ಶೌಚಾಲಯ ತೊಳೆಸುವುದು, ಮಕ್ಕಳನ್ನು ಆಡಿಸುವುದು, ಮುಸುರೆ ತೊಳೆಸುವ ಕೆಲಸಕ್ಕೆ ಪೊಲೀಸ್‌ ಸಿಬ್ಬಂದಿಯನ್ನು ಬಳಸಿಕೊಳ್ಳುತ್ತಿದ್ದಾರೆ. ಅಧಿಕಾರಿಯೊಬ್ಬರು ಮಳವಳ್ಳಿ ತಾಲ್ಲೂಕಿನಲ್ಲಿ ತಮ್ಮ ತೋಟದ ಮನೆ ಕಾಯಲು ಪೊಲೀಸ್‌ ಸಿಬ್ಬಂದಿಯನ್ನು ಬಳಸಿಕೊಂಡಿದ್ದಾರೆ ಎಂದು ಪತ್ರದಲ್ಲಿ ದೂರಿದ್ದಾರೆ.

ಜಾತೀಯತೆ: ಐಪಿಎಸ್‌ ಅಧಿಕಾರಿಗಳು ಕೆಳಗಿನ ಸಿಬ್ಬಂದಿಯನ್ನು ಅವರ ಜಾತಿಯ ಆಧಾರದ ಮೇಲೆ ನಡೆಸಿಕೊಳ್ಳುತ್ತಿದ್ದಾರೆ. ತಮಗೆ ಇಷ್ಟವಿಲ್ಲದ ಜಾತಿಯ ಸಿಬ್ಬಂದಿಯನ್ನು ಪದೇ ಪದೇ ಶಿಕ್ಷಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ತಮ್ಮ ಜಾತಿಯವರನ್ನು ಎಷ್ಟೇ ದೊಡ್ಡ ತಪ್ಪು ಮಾಡಿದ್ದರೂ ಅವರನ್ನು ಧಾರಾಳವಾಗಿ ಕ್ಷಮಿಸುತ್ತಿದ್ದು ಅವರಿಗೆ ಬಡ್ತಿ ನೀಡುತ್ತಿದ್ದಾರೆ. ಅನ್ಯ ಜಾತಿ ಸಿಬ್ಬಂದಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ದೂರಿದ್ದಾರೆ.

ADVERTISEMENT

ಗುಪ್ತಚರ ಇಲಾಖೆಯಲ್ಲಿ ಗಣ್ಯರ ಬೆಂಗಾವಲಿಗಾಗಿ 35–45 ವರ್ಷ ವಯಸ್ಸಿನ ಸಿಬ್ಬಂದಿಯನ್ನು ನೇಮಕ ಮಾಡದೆ ನಿವೃತ್ತಿಯ ಅಂಚಿನಲ್ಲಿರುವ ಸಿಬ್ಬಂದಿಯನ್ನು ನೇಮಕ ಮಾಡುತ್ತಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ. ತನಿಖೆಯಲ್ಲಿ ಸಾಕ್ಷ್ಯಾಧಾರ ನಾಶಪಡಿಸುವ ಉದ್ದೇಶದಿಂದ ಈ ರೀತಿ ನೇಮಕ ಮಾಡಿಕೊಳ್ಳುತ್ತಿದ್ದಾರೆ. ಐಪಿಎಸ್‌ ಅಧಿಕಾರಿಗಳು ಗೂಂಡಾಗಳಂತೆ ವರ್ತಿಸುತ್ತಿದ್ದು,ಅಮಾಯಕರ ಮೇಲೆ ದರ್ಪ ತೋರುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ದೂರಿನ ಪ್ರತಿಗೆ ಅಧ್ಯಕ್ಷರು ಸಹಿ ಮಾಡಿದ್ದಾರೆ. ಆದರೆ, ಅವರ ಹೆಸರು ಸ್ಪಷ್ಟವಾಗಿ ಕಾಣಿಸುವುದಿಲ್ಲ. ಪತ್ರವನ್ನು ಮಂಡ್ಯದ ಅಂಚೆ ಕಚೇರಿಯಿಂದ ನೋಂದಣಿ ಅಂಚೆ ಮೂಲಕ ಕಳುಹಿಸಿದ್ದಾರೆ.

‘ಪೊಲೀಸ್‌ ಇಲಾಖೆಯಲ್ಲಿ ಸಿಬ್ಬಂದಿ ಸಂಘ ಕಟ್ಟಿಕೊಳ್ಳಲು ಯಾವುದೇ ಹಕ್ಕು ಇಲ್ಲ. ಜಿಲ್ಲಾ ಸಶಸ್ತ್ರ ಮೀಸಲು ಪಡೆಯಲ್ಲಿ ಯಾವ ಸಂಘಗಳೂ ಇಲ್ಲ. ಪತ್ರ ಬರೆದಿರುವ ಬಗ್ಗೆ ನಮಗೆ ಮಾಹಿತಿಯೂ ಇಲ್ಲ’ ಎಂದು ಜಿಲ್ಲಾ ಸಶಸ್ತ್ರ ಪಡೆಯ ಇನ್‌ಸ್ಪೆಕ್ಟರ್‌ ಸತೀಶ್‌ ತಿಳಿಸಿದರು.

ಎಸ್ಪಿ ಜಿ.ರಾಧಿಕಾ ವಿರುದ್ಧ ಆಕ್ರೋಶ: ಮಂಡ್ಯ ಜಿಲ್ಲೆಯ ಪೊಲೀಸ್‌ ವರಿಷ್ಠಾಧಿಕಾರಿ ಜಿ.ರಾಧಿಕಾ ಅವರು ಪೊಲೀಸ್‌ ಸಿಬ್ಬಂದಿಯನ್ನು ಕೀಳಾಗಿ ಕಾಣುತ್ತಿದ್ದು ‘ಲೇಬರ್ಸ್’ ಎಂದು
ಕರೆಯುತ್ತಿದ್ದಾರೆ. ಚಿನ್ನಾಭರಣ ಕಳ್ಳತನ ಪ್ರಕರಣ ಭೇದಿಸಿದಾಗ ಅವರು ಆಭರಣಗಳ ಪಾಲು ಕೇಳುತ್ತಿದ್ದಾರೆ. ತಮ್ಮ ಮನೆಯಲ್ಲಿ 30ಕ್ಕೂ ಹೆಚ್ಚು ಸಿಬ್ಬಂದಿಯನ್ನು ಆರ್ಡರ್ಲಿಗಳಾಗಿ ನೇಮಕ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ಪಡೆಯಲು ಎಸ್ಪಿ ರಾಧಿಕಾ ಅವರಿಗೆ ಕರೆ ಮಾಡಿದಾಗ ಅವರ ಮೊಬೈಲ್‌ ಫೋನ್‌ ಸ್ಥಗಿತಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.