ADVERTISEMENT

‘ಐರಾವತ’ ಯೋಜನೆಯಡಿ 209 ಕಾರು ವಿತರಣೆ

​ಪ್ರಜಾವಾಣಿ ವಾರ್ತೆ
Published 30 ಮೇ 2019, 19:45 IST
Last Updated 30 ಮೇ 2019, 19:45 IST
ಎಸ್‌.ಸಿ, ಎಸ್‌.ಟಿ ಪರಿಶಿಷ್ಟ ಜಾತಿ, ಪಂಗಡದ ಫಲಾನುಭವಿಗಳಿಗೆ ‘ಐರಾವತ’ ಯೋಜನೆಯಡಿ ಕಾರುಗಳನ್ನು ವಿತರಿಸಲಾಯಿತು
ಎಸ್‌.ಸಿ, ಎಸ್‌.ಟಿ ಪರಿಶಿಷ್ಟ ಜಾತಿ, ಪಂಗಡದ ಫಲಾನುಭವಿಗಳಿಗೆ ‘ಐರಾವತ’ ಯೋಜನೆಯಡಿ ಕಾರುಗಳನ್ನು ವಿತರಿಸಲಾಯಿತು   

ಬೆಂಗಳೂರು: ಸಮಾಜ ಕಲ್ಯಾಣ ಇಲಾಖೆಯ ‘ಐರಾವತ’ ಯೋಜನೆಯಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ 4,500 ವಾಹನಗಳನ್ನು ವಿತರಿಸಲಾಗುವುದು’ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ತಿಳಿಸಿದರು.

ವಿಧಾನಸೌಧದ ಮುಂಭಾಗದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪರಿಶಿಷ್ಟ ಜಾತಿ, ಪಂಗಡದ 209 ಫಲಾನುಭವಿಗಳಿಗೆ ಈ ಯೋಜನೆಯಡಿ ಕಾರು ವಿತರಿಸಿ ಅವರು ಮಾತನಾಡಿದರು.

‘ಫಲಾನುಭವಿಗಳಿಗೆ ₹ 5 ಲಕ್ಷ ಆರ್ಥಿಕ ನೆರವು ನೀಡಲಾಗುತ್ತಿದ್ದು, ಚಾಲಕರೇ ಮಾಲೀಕರಾಗುವ ಅವಕಾಶ ಒದಗಿಸಲಾಗಿದೆ. ಮೈಸೂರು, ಬೆಳಗಾವಿ, ಕಲಬುರ್ಗಿ, ದಕ್ಷಿಣ ಕನ್ನಡ, ಬಳ್ಳಾರಿ ಮತ್ತು ಧಾರವಾಡ ಜಿಲ್ಲಾ ಕೇಂದ್ರಗಳಲ್ಲಿ ಶೀಘ್ರದಲ್ಲೇ ವಾಹನ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು’ ಎಂದು ಮುಖ್ಯಮಂತ್ರಿ ತಿಳಿಸಿದರು.

ADVERTISEMENT

‘ಒಟ್ಟು ವಿತರಿಸುವ ವಾಹನಗಳ ಪೈಕಿ ಶೇ 10ರಷ್ಟನ್ನು ಮಹಿಳೆಯರಿಗೆ ನೀಡಲಾಗುವುದು. ಈ ಯೋಜನೆಗೆ ₹ 225 ಕೋಟಿ ವೆಚ್ಚ ಮಾಡಲಾಗುವುದು’ ಎಂದರು.

‘ಫಲಾನುಭವಿಗಳಿಗೆ ಓಲಾ, ಉಬರ್‌ ಸಂಸ್ಥೆಗಳ ಸಹಯೋಗದಲ್ಲಿ ತರಬೇತಿ ಹಾಗೂ ಮಾರುಕಟ್ಟೆ ದೊರಕಿಸಿಕೊಡಲು ಕೂಡಾ ಸಹಾಯ ಮಾಡಲಾಗುವುದು. ಫಲಾನುಭವಿಗಳು ವಾಹನಗಳ ಮೂಲಕ ದುಡಿಮೆ ಜೊತೆಗೆ ಲಾಭ ಗಳಿಸುವಂತಾಗಬೇಕು. ಫಲಾನುಭವಿಗಳು ಶಿಸ್ತುಬದ್ಧ ಜೀವನ ಅಳವಡಿಸಿಕೊಂಡು ಪ್ರಾಮಾಣಿಕರಾಗಿ ನಡೆದುಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಪರಿಶಿಷ್ಠ ಜಾತಿ, ಪಂಗಡದ ನಿರುದ್ಯೋಗಿ ಯುವಕ, ಯುವತಿಯರನ್ನು ಉದ್ಯೋಗಶೀಲರನ್ನಾಗಿಸುವ ಉದ್ದೇಶದಿಂದ ಸಾಮಾಜಿಕ ಉದ್ಯಮಶೀಲ ಅಭಿವೃದ್ಧಿ ಯೋಜನೆಯಡಿ ಅಂಬೇಡ್ಕರ್ ಅಭಿವೃದ್ಧಿ ನಿಗಮ, ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡದ ಅಭಿವೃದ್ಧಿ ನಿಗಮ, ಕರ್ನಾಟಕ ಬೋವಿ ಅಭಿವೃದ್ಧಿ ನಿಗಮ, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ, ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮಗಳ ಮೂಲಕ ಐರಾವತ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ.

ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ, ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ನಾರಾಯಣಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.