ADVERTISEMENT

ಐವರು ಗಣ್ಯರಿಗೆ ಗೌರವ ಡಾಕ್ಟರೇಟ್ ಪ್ರದಾನ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2011, 19:30 IST
Last Updated 10 ಏಪ್ರಿಲ್ 2011, 19:30 IST
ಐವರು ಗಣ್ಯರಿಗೆ ಗೌರವ ಡಾಕ್ಟರೇಟ್ ಪ್ರದಾನ
ಐವರು ಗಣ್ಯರಿಗೆ ಗೌರವ ಡಾಕ್ಟರೇಟ್ ಪ್ರದಾನ   

ಮೈಸೂರು: ದಿ.ನಾಲ್ವಡಿ ಕೃಷ್ಣರಾಜ ಒಡೆಯರ್, ಕೇಂದ್ರ ಕಾನೂನು ಸಚಿವ ಎಂ.ವೀರಪ್ಪ ಮೊಯಿಲಿ, ನಾರಾಯಣ ಹೃದಯಾಲಯದ ವ್ಯವಸ್ಥಾಪಕ ನಿರ್ದೇಶಕ ಡಾ.ದೇವಿ ಪ್ರಸಾದ್ ಶೆಟ್ಟಿ, ಪಿಇಎಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ. ಎಂ.ಆರ್.ದೊರೆಸ್ವಾಮಿ ಅವರಿಗೆ ಭಾನುವಾರ ನಡೆದ ಮೈಸೂರು ವಿಶ್ವವಿದ್ಯಾನಿಲಯದ 91ನೇ ಘಟಿಕೋತ್ಸವದಲ್ಲಿ ಉನ್ನತ ಶಿಕ್ಷಣ ಸಚಿವ ಹಾಗೂ ವಿಶ್ವವಿದ್ಯಾಲಯದ ಸಮಕುಲಾಧಿಪತಿ  ಡಾ.ವಿ.ಎಸ್.ಆಚಾರ್ಯ ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು.

ಅಂತಾರಾಷ್ಟ್ರೀಯ ಖ್ಯಾತಿಯ ಸರೋದ್ ವಾದಕ ರಾಜೀವ್ ತಾರಾನಾಥ್ ಅವರಿಗೆ ಅನುಪಸ್ಥಿತಿಯಲ್ಲಿ ಗೌರವ ಡಾಕ್ಟರೇಟ್ ನೀಡಲಾಯಿತು. ರಾಜ್ಯಪಾಲ ಹಾಗೂ ಕುಲಾಧಿಪತಿ ಹಂಸರಾಜ್ ಭಾರದ್ವಾಜ್ ಅವರು ಘಟಿಕೋತ್ಸವಕ್ಕೆ ಗೈರು ಹಾಜರಾಗಿದ್ದರು. ಘಟಿಕೋತ್ಸವದಲ್ಲಿ ಒಟ್ಟು 283 ಪದಕಗಳು ಮತ್ತು 152 ಬಹುಮಾನಗಳನ್ನು 182 ಅಭ್ಯರ್ಥಿಗಳಿಗೆ ವಿತರಿಸಲಾಯಿತು. 133 ವಿದ್ಯಾರ್ಥಿಗಳಿಗೆ ಪಿಎಚ್‌ಡಿ, ಪದವಿ ಮತ್ತು ಸ್ನಾತಕೋತ್ತರ ಪದವಿ ಸೇರಿದಂತೆ ಒಟ್ಟು 17,753 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.

ಶಿಕ್ಷಣ ಸಚಿವ ಹಾಜರು, ರಾಜ್ಯಪಾಲ ಗೈರು: ಈ ಹಿಂದೆ ನಡೆದ ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯ, ಗುಲ್ಬರ್ಗಾ ವಿ.ವಿ, ಬೆಂಗಳೂರು ವಿ.ವಿ ಹಾಗೂ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಘಟಿಕೋತ್ಸವ ಸಮಾರಂಭದಲ್ಲಿ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಹಾಜರಾಗಿ ಪದವಿ ಪ್ರದಾನ ಮಾಡಿದ್ದರು. ಆದರೆ, ಉನ್ನತ ಶಿಕ್ಷಣ ಸಚಿವ ಡಾ.ವಿ.ಆಚಾರ್ಯ ಗೈರುಹಾಜರಾಗಿದ್ದರು. ಇದರಿಂದಾಗಿ ರಾಜ್ಯಪಾಲರು ಮತ್ತು ಉನ್ನತ ಶಿಕ್ಷಣ ಸಚಿವರ ನಡುವಿನ ಮುನಿಸು ಹಾಗೂ ಭಿನ್ನಾಭಿಪ್ರಾಯ ಇನ್ನೂ ಶಮನವಾಗಿಲ್ಲ ಎಂಬುದಕ್ಕೆ ಮೈಸೂರು ವಿ.ವಿ. ಘಟಿಕೋತ್ಸವ ಸಾಕ್ಷಿಯಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.