ADVERTISEMENT

ಐಷಾರಾಮಿ ಹೋಟೆಲ್‌ ರೆಸಾರ್ಟ್‌ಗೆ ಭರಪೂರ ಹಣ

​ಪ್ರಜಾವಾಣಿ ವಾರ್ತೆ
Published 18 ಮೇ 2018, 19:30 IST
Last Updated 18 ಮೇ 2018, 19:30 IST
ಐಷಾರಾಮಿ ಹೋಟೆಲ್‌ ರೆಸಾರ್ಟ್‌ಗೆ ಭರಪೂರ ಹಣ
ಐಷಾರಾಮಿ ಹೋಟೆಲ್‌ ರೆಸಾರ್ಟ್‌ಗೆ ಭರಪೂರ ಹಣ   

ಬೆಂಗಳೂರು: ರಾಜಕೀಯ ಪಕ್ಷಗಳಲ್ಲಿ ‘ಅಧಿಕಾರ’ಕ್ಕಾಗಿ ತಿಕ್ಕಾಟ, ‘ಗದ್ದುಗೆ’ಗಾಗಿ ಗುದ್ದಾಟ ಉಂಟಾದ ಸಂದರ್ಭದಲ್ಲೆಲ್ಲಾ ಐಷಾರಾಮಿ ಹೋಟೆಲ್‌ಗಳು ಮತ್ತು ರೆಸಾರ್ಟ್‌ಗಳು ರಾಜಕಾರಣಿಗಳಿಗೆ ಆಶ್ರಯ ತಾಣಗಳಾಗುತ್ತಿವೆ.

ಪಕ್ಷಗಳು ತಮ್ಮ ಶಾಸಕರನ್ನು ‘ರಕ್ಷಿಸಿ’ ಇಟ್ಟುಕೊಳ್ಳಲು ಹೋಟೆಲ್‌ಗಳು ಮತ್ತು ರೆಸಾರ್ಟ್‌ಗಳ ಮೊರೆ ಹೋಗುತ್ತವೆ. ಶಾಸಕರ ಬಾಹ್ಯ ಸಂಪರ್ಕಗಳನ್ನು ನಿರ್ಬಂಧಿಸಿ, ಅದರ ಬದಲು ಅವರಿಗೆ ಮೋಜು, ಮಸ್ತಿ ಕಲ್ಪಿಸಿ ಸ್ವಚ್ಛಂದವಾಗಿರುವಂತೆ ಮಾಡಲು ರಾಜಕೀಯ ನಾಯಕರು ಈ ಜಾಗಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.

ಇಂತಹ ರಾಜಕೀಯ ಪಲ್ಲಟಗಳು ಇತ್ತೀಚಿನ ದಿನಗಳಲ್ಲಿ ಹೋಟೆಲ್‌ ಉದ್ಯಮ ಮತ್ತು ಸಾರಿಗೆ ವಲಯಕ್ಕೆ ಭರಪೂರ ಲಾಭ ತಂದು ಕೊಡುತ್ತಿವೆ. ರಿಯಾಯಿತಿ ದರದಲ್ಲಿ ವಾಸ್ತವ್ಯ ಭಾಗ್ಯ ಕಲ್ಪಿಸುವ ಆಫರ್‌ ನೀಡಿ ಹೋಟೆಲ್‌, ರೆಸಾರ್ಟ್‌ಗಳು ರಾಜಕಾರಣಿಗಳನ್ನು ತಮ್ಮತ್ತ ಸೆಳೆಯುವ ತಂತ್ರಗಾರಿಕೆಯನ್ನೂ ರೂಪಿಸಿವೆ!

ADVERTISEMENT

80ರ ದಶಕದಲ್ಲಿ ಆರಂಭಗೊಂಡು ನಿನ್ನೆ–ಮೊನ್ನೆಯವರೆಗೆ ನಡೆದ ‘ರೆಸಾರ್ಟ್‌ ಪಾಲಿಟಿಕ್ಸ್‌’ಗೆ ನಗರದ ಹೊರವಲಯದ ಕೆಲವು ರೆಸಾರ್ಟ್‌ಗಳು ವೇದಿಕೆಯಾಗಿವೆ. ಈ ಹಿಂದೆ, ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಬಿ.ಎಸ್‌. ಯಡಿಯೂರಪ್ಪ, ‘ಗೋಲ್ಡನ್‌ ಪಾಮ್‌’ ರೆಸಾರ್ಟ್‌ಗೆ ಶಾಸಕರನ್ನು ಕರೆದೊಯ್ದಿದ್ದರು. ಸದ್ಯ ಈ ರೆಸಾರ್ಟ್‌ನಲ್ಲಿ ಕೊಠಡಿಗೆ ದಿನವೊಂದಕ್ಕೆ ₹ 2,000 (ತೆರಿಗೆ ಬಿಟ್ಟು) ಬಾಡಿಗೆ ಇದೆ. ರಾಜಕೀಯ ಮುಖಂಡರು, ಶಾಸಕರು ಸೇರಿ ಕನಿಷ್ಠ 40ರಿಂದ 60 ಮಂದಿ 3–4 ದಿನ ವಾಸ್ತವ್ಯ ಹೂಡಿದರೆ ಲಕ್ಷಾಂತರ ರೂಪಾಯಿ ಬಿಲ್‌ ಆಗುತ್ತದೆ.

ಆದರೆ, ಇತ್ತೀಚಿನ ವರ್ಷಗಳಲ್ಲಿ ಈ ರೀತಿಯ ರಾಜಕೀಯ ಚಟುವಟಿಕೆಗೆ ಬಿಡದಿಯಲ್ಲಿರುವ ಈಗಲ್‌ಟನ್‌ ರೆಸಾರ್ಟ್‌ ಹೆಚ್ಚು ‘ಆಪ್ತ’ ತಾಣವೆಂದು ಗುರುತಿಸಿಕೊಂಡಿದೆ. ರಾಜ್ಯದವರಿಗಷ್ಟೇ ಅಲ್ಲ, ಹೊರ ರಾಜ್ಯದವರಿಗೂ (ಇತ್ತೀಚೆಗೆ ಗುಜರಾತಿನ ಕಾಂಗ್ರೆಸ್‌ ಶಾಸಕರು ವಾಸ್ತವ್ಯ ಹೂಡಿದ್ದರು) ಈ ರೆಸಾರ್ಟ್‌ ಹೆಚ್ಚು ‘ಸುರಕ್ಷಿತ’ ಎಂಬ ಭಾವನೆ ಬಂದಿದೆ. ಇಲ್ಲಿ ಸದ್ಯ, ದಿನವೊಂದಕ್ಕೆ ₹ 5,500 (ತೆರಿಗೆ ಹೊರತುಪಡಿಸಿ) ಬಾಡಿಗೆ ಇದೆ. 3–4 ದಿನಗಳಲ್ಲಿ ಲಕ್ಷಾಂತರ ಹಣವನ್ನು ಈ ರೆಸಾರ್ಟ್‌ಗಳು ಗಳಿಸುತ್ತಿವೆ.

‘ಬಂಡವಾಳ’ ಹೂಡುವವರು ಯಾರು?

ಒಂದೆರಡು ದಿನ ಅಥವಾ ವಾರಗಟ್ಟಲೇ ‘ತಾತ್ಕಾಲಿಕ ರಾಜಕೀಯ ನೆಲೆ’ ಕಲ್ಪಿಸುವ ವ್ಯವಸ್ಥೆಗೆ ‘ಬಂಡವಾಳ’ ಹೂಡುವವರು ಯಾರು ಎಂಬುದು ಅನೇಕ ಬಾರಿ ಬಯಲಿಗೆ ಬರುವುದೇ ಇಲ್ಲ.

ಮುಖ್ಯಮಂತ್ರಿ ಅಥವಾ ನಾಯಕನಾಗುವ ಉಮೇದು ಇರುವವರು ಇಂತಹ ಖರ್ಚುಗಳನ್ನು ನೋಡಿಕೊಳ್ಳುತ್ತಾರೆ. ಹೆಚ್ಚಿನ ಬಾರಿ ತಮ್ಮ ಆಪ್ತರಾದ ಉದ್ಯಮಿಗಳು ಅಥವಾ ಗುತ್ತಿಗೆದಾರರಿಗೆ ಈ ಜವಾಬ್ದಾರಿಯನ್ನು ವಹಿಸಲಾಗುತ್ತದೆ. ಬೇರೆ ರಾಜ್ಯಗಳಿಗೆ ಕರೆದೊಯ್ದಾಗ ಆತಿಥ್ಯದ ಹೊಣೆಯನ್ನು ಅಲ್ಲಿರುವ ಸರ್ಕಾರದ ಮುಖ್ಯಸ್ಥರು ನಿಭಾಯಿಸುವುದೂ ಉಂಟು. ರಾಜಕೀಯ ಆಶ್ರಯ ನೀಡುವ ಕಾರಣಕ್ಕೆ ರೆಸಾರ್ಟ್ ಮಾಲೀಕರು ರಿಯಾಯಿತಿ ದರದಲ್ಲಿ ಊಟ–ವಸತಿ ವ್ಯವಸ್ಥೆ ಮಾಡುತ್ತಾರೆ ಎಂದು ರಾಜಕೀಯ ಪಕ್ಷದ ನಾಯಕರೊಬ್ಬರು ಹೇಳಿದರು.

ಹೋಟೆಲ್ ಖರ್ಚಿನ ಜತೆಗೆ, ವಿಮಾನ ಪ್ರಯಾಣ, ಶಾಸಕರನ್ನು ಸುಪರ್ದಿಯಲ್ಲಿಟ್ಟುಕೊಳ್ಳಲು ಖಾಸಗಿ ಭದ್ರತಾ ವ್ಯವಸ್ಥೆ ಮಾಡುವುದಕ್ಕೂ ಹೆಚ್ಚಿನ ಹಣ ಬೇಕಾಗುತ್ತದೆ. ಸರ್ಕಾರ ಉಳಿಸಿಕೊಳ್ಳುವ ಅಥವಾ ಸರ್ಕಾರ ರಚಿಸುವ ಹುಮ್ಮಸ್ಸಿನಲ್ಲಿ ಇರುವವರು ಈ ರೀತಿಯ ‘ಬಂಡವಾಳ’ ಹೂಡುತ್ತಾರೆ ಎಂದೂ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.