ಬೆಂಗಳೂರು: ‘ಸಂಜು ವೆಡ್ಸ್ ಗೀತಾ’ ತಮ್ಮ ಕೊನೆ ಚಿತ್ರಗಳಲ್ಲಿ ಒಂದಾಗಲಿದೆ ಎಂದು ಹೇಳುವ ಮೂಲಕ ಖ್ಯಾತ ನಟಿ ರಮ್ಯಾ ತಾವು ಸಿನಿಮಾ ನಟನೆಯಿಂದ ದೂರವಾಗುವ ನಿರ್ಣಯವನ್ನು ಸ್ಪಷ್ಟಪಡಿಸಿದ್ದಾರೆ.‘ಸಂಜು ವೆಡ್ಸ್ ಗೀತಾ’ ಚಿತ್ರದ ಪತ್ರಿಕಾಗೋಷ್ಠಿಗೆ ಶುಕ್ರವಾರ ದುಗುಡದಿಂದಲೇ ಬಂದ ಅವರು ಮೈಕ್ ಕೈಗೆ ಬಂದ ತಕ್ಷಣ ಗದ್ಗದಿತರಾದರು. ‘ಉದ್ಯಮದ ಬಗ್ಗೆ ನನಗೆ ಗೌರವ ಇದೆ’ ಎನ್ನುತ್ತಾ ಕಣ್ಣೀರು ಸುರಿಸಿದರು.
‘ಒಂಟಿ ಹೆಣ್ಣಿಗೆ ಸಹಕರಿಸುವವರು ಇಲ್ಲಿ ಯಾರೂ ಇಲ್ಲ. ನನ್ನ ಮತ್ತು ನಿರ್ಮಾಪಕ ಗಣೇಶ್ ಅವರ ನಡುವಿನ ಬಿಕ್ಕಟ್ಟನ್ನು ಹಿರಿಯ ನಟ ಅಂಬರೀಷ್ ಚರ್ಚಿಸಿ ತೀರ್ಮಾನಿಸುವುದಾಗಿ ಹೇಳಿದ್ದಾರೆ. ಆ ಬಗ್ಗೆ ಕೆಟ್ಟದಾಗಿ ಮಾತನಾಡಿ ಚಿತ್ರಕ್ಕೆ ಪ್ರಚಾರ ಕೊಡಲು ನನಗೆ ಇಷ್ಟವಿಲ್ಲ. ಮುಂದೆ ಚಿತ್ರರಂಗದಲ್ಲಿ ಮುಂದುವರಿಯುವ ಬಗ್ಗೆ ಅಂಬರೀಷ್ ಏನು ಹೇಳುವರೋ ಅದನ್ನು ಕೇಳಿಕೊಂಡೇ ತೀರ್ಮಾನಿಸುವೆ’ ಎನ್ನುವ ಮೂಲಕ ಚಿತ್ರರಂಗಕ್ಕೆ ವಿದಾಯ ಹೇಳುವ ತಮ್ಮ ನಿರ್ಧಾರ ಅಚಲವಾದದ್ದೇನೂ ಅಲ್ಲ ಎಂಬುದನ್ನು ಪರೋಕ್ಷವಾಗಿ ತಿಳಿಸಿದರು.
‘ನನ್ನನ್ನು ಯಾರು ದೂರ ಮಾಡಿದರೂ ಅಭಿಮಾನಿಗಳು ಜೊತೆಗಿದ್ದಾರೆ ಎಂದುಕೊಂಡಷ್ಟೇ ಟ್ವಿಟ್ಟರ್‌ನಲ್ಲಿ ಚಿತ್ರರಂಗದಿಂದ ನಿವೃತ್ತಳಾಗುವ ನಿರ್ಧಾರ ಪ್ರಕಟಿಸಿದೆ. ಮದುವೆಯಾಗಬೇಕೆಂಬ ಕಾರಣಕ್ಕೆ ಸಿನಿಮಾ ತೊರೆಯುತ್ತಿಲ್ಲ. ನಾನು ಎಷ್ಟೇ ಸಹಾಯ ಮಾಡಿದರೂ ಯಾರೂ...’ ಎನ್ನುತ್ತಾ ಬಿಕ್ಕಿದ ಅವರು, ನಿರ್ಮಾಪಕ ಮುನಿರತ್ನ ತಮಗೆ ಸಮಾಧಾನದ ಮಾತು ಹೇಳಿದ್ದನ್ನು ಸ್ಮರಿಸಿದರು.
‘ನನ್ನನ್ನು ಕನ್ನಡದ ದ್ರೋಹಿ ಎಂದರು. ನಾನೇನು ಅಂಥ ತಪ್ಪು ಮಾಡಿದ್ದು? ಉದ್ಯಮಕ್ಕೆ ನಾನು ಏನೂ ಮಾಡಿಲ್ಲವೇ’ ಎಂದು ಪ್ರಶ್ನಿಸಿ ರಮ್ಯಾ ಹೊರನಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.