ADVERTISEMENT

ಒಂಬತ್ತು ಜನಕ್ಕೆ ಎರಡೇ ಪ್ಯಾಕೆಟ್

ಸಾವಿನ ಅಂಚಿನಿಂದ ಬದುಕಿ ಬಂದವರು

​ಪ್ರಜಾವಾಣಿ ವಾರ್ತೆ
Published 22 ಜೂನ್ 2013, 19:59 IST
Last Updated 22 ಜೂನ್ 2013, 19:59 IST

ಕಾರವಾರ: `ಸೇನಾಪಡೆಯವರು ಹೆಲಿಕಾಪ್ಟರ್‌ನಿಂದ ಎಸೆಯುವ ಆಹಾರದ ಪ್ಯಾಕೆಟ್‌ಗಳು ನೊಂದ ಸಂತ್ರಸ್ತರ ಕೈ ಸೇರುವ ಮೊದಲೇ ಅವುಗಳನ್ನು ಸ್ಥಳೀಯರು ಆಯ್ದುಕೊಂಡು ಯಾತ್ರಾರ್ಥಿಗಳಿಗೆ ಮಾರಾಟ ಮಾಡುವುದು,  ಸಿಕ್ಕಿದ್ದನ್ನೇ ಹಂಚಿಕೊಂಡು ತಿನ್ನಬೇಕಾದ ಪರಿಸ್ಥಿತಿ. ನಮಗೆ ಸಿಕ್ಕ ಎರಡೇ ಆಹಾರದ ಪ್ಯಾಕೆಟುಗಳನ್ನು 9 ಜನರು ಎರಡು ದಿನ ತಿಂದೆವು'.

ಚಾರ್‌ಧಾಮ್ ಯಾತ್ರೆಗೆ ಹೋಗಿ ಪ್ರವಾಹದಲ್ಲಿ ಸಿಕ್ಕು ಪಾರಾಗಿ ತವರಿಗೆ ಮರಳುತ್ತಿರುವ ಜಿಲ್ಲೆಯ ಒಂಬತ್ತು ಜನ ಯಾತ್ರಾರ್ಥಿಗಳ ತಂಡದಲ್ಲಿರುವ ಭಟ್ಕಳ ತಾಲ್ಲೂಕು ಸಂಪನ್ಮೂಲ ಕೇಂದ್ರದ ಸಂಯೋಜಕ ವಿ.ಡಿ.ಮೊಗೇರ ಅಲ್ಲಿಯ ಪರಿಸ್ಥಿತಿಯನ್ನು ವಿವರಿಸಿದರು.
ಹರಿದ್ವಾರದ ಮೂಲಕ ದೆಹಲಿಗೆ ಬಂದು ತವರಿಗೆ ಮರಳುತ್ತಿರುವ ಮೊಗೇರ ದೂರವಾಣಿ ಮೂಲಕ  `ಪ್ರಜಾವಾಣಿ'ಯೊಂದಿಗೆ ಮಾತನಾಡಿದರು.

`ನಾವು ಗೌರಿಕುಂಡ್‌ಗೆ ಬರುವಾಗ ಮಳೆ ಆರಂಭವಾಯಿತು. ಗೌರಿಕುಂಡ್ ಮತ್ತು ಸೋನ್‌ಪ್ರಯಾಗ್ ಮಧ್ಯೆ ಮೋನ್‌ಘಾಟಿಯಾ ಎಂಬಲ್ಲಿ ನಾವು ಸಿಕ್ಕಿಹಾಕಿಕೊಂಡೆವು. ಅದು ಪರ್ವತ ಪ್ರದೇಶವಾದ್ದರಿಂದ  ಸ್ವಲ್ಪ ಕಾಲ ಅಲ್ಲಿಯೇ ಇದ್ದ ಸಣ್ಣ ಗುಡಿಸಲಿನಲ್ಲಿ ಆಶ್ರಯ ಪಡೆದೆವು. ಆ ಪ್ರದೇಶದಲ್ಲಿ ಭೂಕುಸಿತದ ಶಬ್ದ ದೊಡ್ಡದಾಗಿ ಕೇಳಿಸುತ್ತಿತ್ತು. ನಾವಿರುವ ಸ್ಥಳ ಸುರಕ್ಷಿತವಲ್ಲ ಎನ್ನುವುದು ಗಮನಕ್ಕೆ ಬಂದ ನಂತರ ಅಲ್ಲಿಂದ ಮತ್ತಷ್ಟು ಎತ್ತರಕ್ಕೆ ಹೋಗಿ ನೆಲೆಸಿದೆವು. ಆಹಾರವಿಲ್ಲದೆ ಅಲ್ಲಿಯೇ ಮೂರು ದಿನ ಕಳೆದೇವು' ಆತಂಕದ ಕ್ಷಣಗಳನ್ನು  ನೆನಪಿಸಿಕೊಂಡರು.

`ಅದೂ ಸುರಕ್ಷಿತ ಸ್ಥಳವಲ್ಲ ಎನ್ನುವುದನ್ನು ಗಮನಕ್ಕೆ ಬಂದ ನಂತರ ಅಲ್ಲಿಂದ ಕಾಲುದಾರಿಯಲ್ಲಿ ಸೋನ್‌ಪ್ರಯಾಗಕ್ಕೆ ಬಂದು ಗುಪ್ತಕಾಶಿಯ ಮೂಲಕ ಪರ್ವತ ಪ್ರದೇಶದಿಂದ ಕೆಳಗೆ ಬಂದಾಗ ಸಾವಿನ ಅಂಚಿಗೆ ಹೋಗಿ ಬದುಕಿ ಬಂದ ಅನುಭವವಾಯಿತು' ಎಂದು ಭಯಾನಕ ಸ್ಥಿತಿಯನ್ನು ಹೇಳಿದರು.

ಗುಪ್ತಕಾಶಿಯಿಂದ ಹರಿದ್ವಾರಕ್ಕೆ ಬಂದು ಅಲ್ಲಿಂದ ದೆಹಲಿ ಮೂಲಕ ವಿಶೇಷ ರೈಲಿನಲ್ಲಿ ಭಾನುವಾರ ಗೋವಾ ಸೇರಲಿದ್ದಾರೆ. ಗೋವಾದಿಂದ ಹೊನ್ನಾವರಕ್ಕೆ ಕರೆತರಲು ರೈಲು ನಿಲ್ದಾಣದಲ್ಲಿ ವಾಹನ ಸಜ್ಜಾಗಿ ನಿಂತಿದೆ. ಈ ತಂಡದಲ್ಲಿ ಮೊಗೇರ ಜೊತೆಗೆ ಜಗದೀಶ ಪಾಂಡುರಂಗ ಮೇಸ್ತ, ಕೃಷ್ಣಕುಮಾರ ಲಕ್ಷ್ಮಣ ಶೆಟ್, ಪ್ರಹ್ಲಾದ್ ವಿಠ್ಠಲ ಭಟ್, ಕೃಷ್ಣ ಪರಮೇಶ್ವರ ಮಿರಾಶಿ, ತಿಮ್ಮಯ್ಯ ಪರಮೇಶ್ವರ ಮಿರಾಶಿ,  ರಾಘವೇಂದ್ರ ಸುರೇಶ ಭಟ್, ನಿತಿನ್ ರಾಮದಾಸ ಶೇಟ್, ಸೂರಜ್ ಸುರೇಶ ಶಾನಭಾಗ ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.