ADVERTISEMENT

ಒಡೆದ ಬ್ಯಾರೇಜ್: ಅಪಾರ ಬೆಳೆ ನಷ್ಟ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2011, 19:30 IST
Last Updated 4 ನವೆಂಬರ್ 2011, 19:30 IST
ಒಡೆದ ಬ್ಯಾರೇಜ್: ಅಪಾರ ಬೆಳೆ ನಷ್ಟ
ಒಡೆದ ಬ್ಯಾರೇಜ್: ಅಪಾರ ಬೆಳೆ ನಷ್ಟ   

ಮದ್ದೂರು:  ತಾಲ್ಲೂಕಿನಲ್ಲಿ ಎರಡು ದಿನಗಳಿಂದ ಬೀಳುತ್ತಿರುವ ಭಾರಿ ಮಳೆಯಿಂದಾಗಿ ಶಿಂಷಾ ನದಿಯಲ್ಲಿ ನೀರಿನ ಪ್ರವಾಹ ಹೆಚ್ಚಿದೆ. ವೈದ್ಯನಾಥಪುರದ ಬಳಿ ಇರುವ ಬಾಣಂಜಿಪಂತ್ ಬ್ಯಾರೇಜ್ ಶುಕ್ರವಾರ ಒಡೆದು ಹತ್ತಾರು ಎಕರೆಯಲ್ಲಿನ ಬೆಳೆ ಕೊಚ್ಚಿಹೋಗಿ ರೂ.20 ಲಕ್ಷಕ್ಕೂ ಹೆಚ್ಚು ನಷ್ಟ ಸಂಭವಿಸಿದೆ.

ಕೆ.ಹೊನ್ನಲಗೆರೆಯ ಕೆರೆಗೆ ನೀರು ಉಣಿಸಲು ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಬಾಣಂಜಿಪಂತ್ ಏತ ನೀರಾವರಿ ಯೋಜನೆಗಾಗಿ ಈ ಕಿರು ಅಣೆಕಟ್ಟನ್ನು ಕಟ್ಟಲಾಗಿತ್ತು. ಕಳಪೆ ಕಾಮಗಾರಿಯಿಂದಾಗಿ ಈ ಬ್ಯಾರೇಜ್ ಉದ್ಘಾಟನೆಗೆ ಮುನ್ನವೇ ಕುಸಿದು ಬಿದ್ದಿತ್ತು. ಒಂದು ವರ್ಷದ ಹಿಂದೆ ಎರಡನೇ ಬಾರಿ ಒಡೆದು ಹತ್ತಾರು ಎಕರೆ ಕೃಷಿ ಭೂಮಿ ಮುಳುಗಡೆಯಾಗಿತ್ತು.
 
ಈ ಹಿನ್ನೆಲೆಯಲ್ಲಿ ಕಾವೇರಿ ನೀರಾವರಿ ನಿಗಮವು ಕಳೆದ ಆರು ತಿಂಗಳಿಂದ ಬ್ಯಾರೇಜ್ ದುರಸ್ತಿಗೆ ಮುಂದಾಗಿತ್ತು. ದುರಸ್ತಿಗಾಗಿ ನದಿಯ ನೀರಿಗೆ ಅಡ್ಡಲಾಗಿ ತಾತ್ಕಾಲಿಕ ಮರಳು ಮೂಟೆಗಳಿಂದ ತಡೆಗೋಡೆ ನಿರ್ಮಿಸಲಾಗಿತ್ತು. ಆದರೆ ಎರಡು ತಿಂಗಳಿಂದ ಕಾಮಗಾರಿ ಸ್ಥಗಿತಗೊಳಿಸಲಾಗಿತ್ತು.

ಎರಡು ದಿನಗಳಿಂದ ಶಿಂಷಾ ನದಿ ವ್ಯಾಪ್ತಿಯ ಪ್ರದೇಶದಲ್ಲಿ ಬಿದ್ದ ಭಾರಿ ಮಳೆಯಿಂದಾಗಿ ಪ್ರವಾಹ ಹೆಚ್ಚಾಗಿ ಮೂರನೇ ಬಾರಿಗೆ ಬ್ಯಾರೇಜ್ ಒಡೆದಿದೆ. ಇದರಿಂದ ನದಿ ಪಕ್ಕದ ರೈತರಾದ ನಂದೀಶ್, ಗೌರಮ್ಮ, ನಿಂಗಯ್ಯ, ಜಯರಾಂ, ಶಿವರಾಂ, ನಾಗರಾಜು ಅವರಿಗೆ ಸೇರಿದ ನೂರಕ್ಕೂ ಹೆಚ್ಚು ತೆಂಗಿನ ಮರಗಳು ಧರೆಗುರುಳಿವೆ. ಹತ್ತಾರು ಎಕರೆ ಪ್ರದೇಶದಲ್ಲಿದ್ದ ಬಾಳೆ, ಕಬ್ಬು, ಭತ್ತದ ಬೆಳೆ ನಾಶವಾಗಿದೆ.

ಇದೀಗ ನದಿಯಲ್ಲಿ ನೀರಿನ ಪ್ರವಾಹ ಹೆಚ್ಚಿದ್ದು, ಇನ್ನಷ್ಟು ಕೃಷಿ ಭೂಮಿ ಮುಳುಗಡೆಯಾಗುವ ಸಾಧ್ಯತೆ ಇದೆ. ನೀರಾವರಿ ನಿಗಮ ಕೂಡಲೇ ಕ್ರಮ ಕೈಗೊಂಡು ಬ್ಯಾರೇಜ್ ದುರಸ್ತಿಗೆ ಮುಂದಾಗುವ ಮೂಲಕ ರೈತರಿಗೆ ಆಗುತ್ತಿರುವ ನಷ್ಟವನ್ನು ತಪ್ಪಿಸಬೇಕೆಂದು ವೈದ್ಯನಾಥಪುರ ವ್ಯಾಪ್ತಿಯ ರೈತರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.