ADVERTISEMENT

ಒನಕೆ ಓಬವ್ವ ಜಯಂತಿ ಆಚರಣೆ, ಪ್ರಾಧಿಕಾರ ರಚನೆಗೆ ಚಿಂತನೆ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2017, 6:19 IST
Last Updated 11 ನವೆಂಬರ್ 2017, 6:19 IST
ಒನಕೆ ಓಬವ್ವ ಜನ್ಮ ದಿನಾಚರಣೆ ಅಂಗವಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಚ್. ಆಂಜನೇಯ ಅವರು ಚಿತ್ರದುರ್ಗದ ಒನಕೆ ಓಬವ್ವ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.
ಒನಕೆ ಓಬವ್ವ ಜನ್ಮ ದಿನಾಚರಣೆ ಅಂಗವಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಚ್. ಆಂಜನೇಯ ಅವರು ಚಿತ್ರದುರ್ಗದ ಒನಕೆ ಓಬವ್ವ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.   

ಚಿತ್ರದುರ್ಗ: ‘ವೀರವನಿತೆ ಒನಕೆ ಓಬವ್ವ ಜನ್ಮದಿನಾಚರಣೆ, ಒನಕೆ ಓಬವ್ವ ಪ್ರಾಧಿಕಾರ ರಚನೆ ಮತ್ತು ಸ್ಮಾರಕ ನಿರ್ಮಾಣದ ಬಗ್ಗೆ ಸರ್ಕಾರದ ಮುಂದೆ ಪ್ರಸ್ತಾವನೆ ಇದೆ. ಆ ಬಗ್ಗೆ ಶೀಘ್ರ ನಿರ್ಧಾರ ಕೈಗೊಳ್ಳುತ್ತೇವೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್. ಆಂಜನೇಯ ತಿಳಿಸಿದರು.

ಒನಕೆ ಓಬವ್ವ ಜನ್ಮ ದಿನದ ಅಂಗವಾಗಿ ಜಿಲ್ಲಾಧಿಕಾರಿ ಕಚೇರಿ ಸಮೀಪ ಇರುವ ಒನಕೆ ಓಬವ್ವ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಓಬವ್ವ ಪ್ರಾಧಿಕಾರ ರಚನೆ ಮತ್ತು ಸ್ಮಾರಕ ನಿರ್ಮಾಣ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರೂ, ಯಾಕೆ ವಿಳಂಬವಾಗುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಈ ಬಗ್ಗೆ ಸರ್ಕಾರದ ಎದುರು ಪ್ರಸ್ತಾವನೆ ಇದೆ. ಜನರ ಅಭಿಪ್ರಾಯ ಸಂಗ್ರಹಿಸಿ, ನಂತರ ನಿರ್ಧಾರ ಕೈಗೊಳ್ಳಲಾಗುತ್ತದೆ’ ಎಂದರು.

ADVERTISEMENT

‘ಕೆ.ಎಚ್. ರಂಗನಾಥ್‌ ಸಚಿವರಾಗಿದ್ದಾಗ ನಮ್ಮ ಸರ್ಕಾರದಿಂದಲೇ ನಗರದಲ್ಲಿ ಓಬವ್ವನ ಪುತ್ಥಳಿ ಸ್ಥಾಪಿಸಿದ್ದೇವೆ. ಆಕೆಯ ಹೆಸರಲ್ಲಿ ಕ್ರೀಡಾಂಗಣ ನಿರ್ಮಿಸಲಾಗಿದೆ. ಈ ಕೆಲಸವೂ ನಮ್ಮ ಸರ್ಕಾರದಿಂದಲೇ ಆಗಲಿದೆ’ ಎಂದು ಭರವಸೆ ನೀಡಿದರು.

ಪರಮೇಶ್ವರ ವಿಶ್ವಾಸಕ್ಕೆ ತೆಗೆದುಕೊಂಡು ಯಾತ್ರೆ: ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ ಅವರು‘ಜನಾಶೀರ್ವಾದ ಯಾತ್ರೆ’ಗೆ ಪಾಲ್ಗೊಳ್ಳುವುದಿಲ್ಲ ಎಂದಿದ್ದಾರಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಪರಮೇಶ್ವರ ಅವರು ಹಾಗೆ ಹೇಳಿಲ್ಲ. ಸರ್ಕಾರ ಆಯೋಜಿಸುವ ಯಾತ್ರೆಗೆ ಪಕ್ಷದ ಅಧ್ಯಕ್ಷನಾಗಿ ಪಾಲ್ಗೊಳ್ಳುವುದು ಸರಿಯಲ್ಲ’ಎಂಬ ಅರ್ಥದಲ್ಲಿ ಹೇಳಿದ್ದಾರೆ. ಮುಂದೆ ಕೂಡ ಪಕ್ಷ ಮತ್ತು ಸರ್ಕಾರ ಜತೆಯಾಗಿ ಸೇರಿ ಯಾತ್ರೆಯಂತಹ ಕಾರ್ಯಕ್ರಮ ರೂಪಿಸುತ್ತೇವೆ. ಜಿ. ಪರಮೇಶ್ವರ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಯಾತ್ರೆ ಆಯೋಜಿಸಲಾಗುತ್ತದೆ. ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ’ ಎಂದರು.

‘ಟಿಪ್ಪು ಜಯಂತಿಯಲ್ಲಿ ಬಿಜೆಪಿ ಶಾಸಕರು ಪಾಲ್ಗೊಂಡಿದ್ದಾರೆ. ಅವರಿಗೆ ಅಭಿನಂದನೆಗಳು. ಟಿಪ್ಪುಕುರಿತು ಆ ಪಕ್ಷದಲ್ಲೂ ಅನೇಕರಿಗೆ ಒಳ್ಳೆ ಅಭಿಪ್ರಾಯವಿದೆ. ಆದರೂ ಓಟಿಗಾಗಿ ಅವರು ನಾಟಕ ಮಾಡುತ್ತಾರೆ. ಅದು ಅವರ ಹೊಟ್ಟೆ ಪಾಡು’ ಎಂದು ವ್ಯಂಗ್ಯವಾಡಿದರು.

‘ಆ ಪಕ್ಷದಲ್ಲೂ ಕೆಲವರಿಗೆ ಟಿಪ್ಪು ಬಗ್ಗೆ ಅಭಿಮಾನವಿದೆ.ಹಿಂದೆಲ್ಲ ಟಿಪ್ಪು ವೇಷ ಹಾಕಿಕೊಂಡು ಪೋಸು ಕೊಟ್ಟಿದ್ದಾರೆ. ಆತ ದೇಶಭಕ್ತ ಎನ್ನುವುದು ಈಗ ಕೆಲವರಿಗೆ ತಡವಾಗಿ ಅರಿವಾಗಿದೆ. ಆದರೂ ರಾಜಕಾರಣ ಹಾಗೆ ಮಾತನಾಡಿಸುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.