ADVERTISEMENT

ಕಂಪಲಾಪುರ ದುರಂತದಲ್ಲಿ 9 ಜನ ಸಾವು

ಪ್ರತ್ಯೇಕ ರಸ್ತೆ ಅಪಘಾತ: 13 ಮಂದಿ ದುರ್ಮರಣ

​ಪ್ರಜಾವಾಣಿ ವಾರ್ತೆ
Published 14 ಮೇ 2014, 19:30 IST
Last Updated 14 ಮೇ 2014, 19:30 IST
ಮೈಸೂರು ಜಿಲ್ಲೆಯ ಪಿರಿಯಾ­ಪಟ್ಟಣ ತಾಲ್ಲೂಕಿನ ಕಂಪಲಾಪುರದ ಬಳಿ ಬುಧವಾರ ರಸ್ತೆ ಅಪಘಾತದಲ್ಲಿ ಟೆಂಪೂ ಟ್ರಾವೆಲರ್‌ ಸಂಪೂರ್ಣ ಜಖಂಗೊಂಡಿದೆ.
ಮೈಸೂರು ಜಿಲ್ಲೆಯ ಪಿರಿಯಾ­ಪಟ್ಟಣ ತಾಲ್ಲೂಕಿನ ಕಂಪಲಾಪುರದ ಬಳಿ ಬುಧವಾರ ರಸ್ತೆ ಅಪಘಾತದಲ್ಲಿ ಟೆಂಪೂ ಟ್ರಾವೆಲರ್‌ ಸಂಪೂರ್ಣ ಜಖಂಗೊಂಡಿದೆ.   

ಬೆಂಗಳೂರು: ರಾಜ್ಯದ ಮೂರು ಕಡೆ ಬುಧವಾರ ನಡೆದ ರಸ್ತೆ ಅಪಘಾತ­ಗಳಲ್ಲಿ 13 ಮಂದಿ ಮೃತಪಟ್ಟಿದ್ದಾರೆ.

ಪಿರಿಯಾಪಟ್ಟಣ ತಾಲ್ಲೂಕಿನ ಕಂಪ­ಲಾಪುರ  ಬಳಿ ನಡೆದ ಅಪಘಾತದಲ್ಲಿ 9 ಮಂದಿ ಮತ್ತು ಮಾನ್ವಿ ತಾಲ್ಲೂಕಿನ ಪೋತ್ನಾಳ ಸಮೀಪ ಬೈಕ್‌ಗೆ  ಲಾರಿ ಡಿಕ್ಕಿಯಾಗಿ ಬೈಕ್‌ನಲ್ಲಿದ್ದ ಮೂವರು ಬಾಲಕರು ಹಾಗೂ ಆನೇಕಲ್‌ ತಾಲ್ಲೂಕಿನ ಅತ್ತಿಬೆಲೆ ಸಮೀಪ ಲಾರಿ ಡಿಕ್ಕಿ ಹೊಡೆದು ಇಬ್ಬರು ಸಾವಿಗೀಡಾದ ಘಟನೆ ಬುಧವಾರ ನಡೆದಿದೆ.

ಪಿರಿಯಾಪಟ್ಟಣ ವರದಿ (ಮೈಸೂರು ಜಿಲ್ಲೆ): ತಾಲ್ಲೂಕಿನ ಕಂಪಲಾಪುರದ ಬಳಿ ಟೆಂಪೊ ಟ್ರಾವೆಲರ್‌ ಮತ್ತು ಸರಕು ಸಾಗಣೆ ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ ಮೂವರು ಮಕ್ಕಳೂ ಸೇರಿದಂತೆ 9 ಮಂದಿ ಮೃತಪಟ್ಟು, 11 ಮಂದಿ ಗಾಯಗೊಂಡ ಘಟನೆ ಬುಧವಾರ ನಸುಕಿನಲ್ಲಿ 5.30ರ ವೇಳೆಗೆ ನಡೆದಿದೆ.

ಮೃತಪಟ್ಟವರನ್ನು ಮಂಗಳೂರು ಸಮೀಪದ ದೇರಳಕಟ್ಟೆ ಗ್ರಾಮದ ನಿವಾಸಿಗಳಾದ ಅಮೀರುದ್ದೀನ್ (55), ಫೌಜಿಯಾ (45), ಮೊಹಮ್ಮದ್‌ ಇಷಾಮ್‌ (2), ಆಸಿಮಾ (60), ರುಕ್ಕಿಯಾ (45), ಟೆಂಪೂ ಟ್ರಾವೆಲರ್‌ ಚಾಲಕ ಫಾರುಕುದ್ದೀನ್ (38), ಜುನೈದ್(28), ಶಫಿದಾ (5), ಮೊಹಮ್ಮದ್‌ ಮುಸ್ತಫಾ(1 ವರ್ಷ 4 ತಿಂಗಳು) ಎಂದು ಗುರುತಿಸ­ಲಾಗಿದೆ.ಮಂಗಳೂರಿನ ಜವಳಿ ವ್ಯಾಪಾರಿ ಅಮೀರುದ್ದೀನ್‌ ಕುಟುಂಬ­ದವರು ಮತ್ತು ಅವರ ಹತ್ತಿರದ ಸಂಬಂಧಿಕರು ಸೇರಿ 20 ಮಂದಿ ಟೆಂಪೊ ಟ್ರಾವೆಲರ್‌­ನಲ್ಲಿ ತಮಿಳುನಾಡಿನ ಪ್ರವಾಸ ಮುಗಿಸಿ ದೇರಳಕಟ್ಟೆಗೆ ಹಿಂದಿರುಗುತ್ತಿದ್ದರು.

ಗ್ಯಾಸ್ ಸಿಲಿಂಡರುಗಳನ್ನು ತುಂಬಿ­ಕೊಂಡು ಮಡಿಕೇರಿಯಿಂದ ಮೈಸೂರು ಕಡೆಗೆ ಹೋಗುತ್ತಿದ್ದ ಲಾರಿ ಮತ್ತು ಟೆಂಪೊ ಟ್ರಾವೆಲರ್‌ ನಡುವೆ ಮುಖಾ­ಮುಖಿ ಡಿಕ್ಕಿ ಸಂಭವಿಸಿದೆ.

ಅಪಘಾತದಲ್ಲಿ ಜೀನತ್‌, ರಾಜಿಯಾ, ಬಸ್ಸುರಾ, ಸಾಜಿಯಾ, ಸನ್ನಿ, ಮೊಹಮ್ಮದ್, ಆಯಿಷಾ, ಬಿ.ಎಚ್‌. ಮೊಹಮ್ಮದ್‌ ಸೇರಿ 10 ಮಂದಿ ಗಾಯಗೊಂಡಿದ್ದಾರೆ. ಅವರನ್ನು ಮೈಸೂರಿನ ಅಪೊಲೊ ಆಸ್ಪತ್ರೆಗೆ ಸೇರಿಸ­ಲಾಗಿದೆ. ಗಾಯಗೊಂಡ ಮಹ್ಮದ್ ಇಕ್ಬಾಲ್‌ಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಮಂಗಳೂರಿನ ಆಸ್ಪತ್ರೆಗೆ ಕಳುಹಿಸ­ಲಾಗಿದೆ. ಲಾರಿ ಚಾಲಕ ಶೇಷಪ್ಪಗೌಡ ಸಹ   ಗಾಯ­ಗೊಂಡಿದ್ದಾರೆ.

ಆಂಬುಲನ್ಸ್‌ಗೆ ಪರದಾಟ: ಅಪಘಾತ­ದಲ್ಲಿ ಗಾಯ­ಗೊಂಡ­ವರನ್ನು ಮೈಸೂರಿಗೆ ಸಾಗಿಸಲು ಆಂಬುಲ­ನ್ಸ್‌­ಗಾಗಿ ಪರದಾಡಬೇಕಾಯಿತು. ಪಟ್ಟಣದಲ್ಲಿ ಇದ್ದ ಆಂಬುಲನ್ಸ್ ಬೀಗ ಆಸ್ಪತ್ರೆಯ ವ್ಯವಸ್ಥಾಪಕ ನಾಗೇಶ್ ಬಳಿ ಇತ್ತು. ಅವರು ಮೈಸೂರಿಗೆ ತೆರಳಿದ್ದ ಕಾರಣ ಸಕಾಲಕ್ಕೆ ಆಂಬುಲನ್ಸ್ ದೊರಕಲಿಲ್ಲ.

ಶವ ಪರೀಕ್ಷೆಯ ನಂತರ ಮೃತದೇಹ­ಗಳನ್ನು ಪಟ್ಟಣದ ಮಲಬಾರ್ ಮಸೀದಿಗೆ ತಂದು ಧಾರ್ಮಿಕ ವಿಧಿ–ವಿಧಾನಗಳನ್ನು ನೆರವೇರಿಸಲಾಯಿತು. ನಂತರ ಆಂಬುಲನ್ಸ್‌ ಮೂಲಕ ಮೃತದೇಹಗಳನ್ನು ದೇರಳಕಟ್ಟೆಗೆ ಕೊಂಡೊಯ್ಯಲಾಯಿತು.

ಆನೇಕಲ್‌ ವರದಿ: ತಾಲ್ಲೂಕಿನ ಬಿದರಗುಪ್ಪೆ ಬಳಿ ಬುಧವಾರ ಸಂಭವಿಸಿದ ಸರಣಿ ಅಪಘಾತದಲ್ಲಿ ಇಬ್ಬರು ಮೃತಪಟ್ಟು ಆರಕ್ಕೂ ಹೆಚ್ಚು ಜನರು ಗಾಯ­ಗೊಂಡಿ­ದ್ದಾರೆ. ಮೃತರನ್ನು ಅತ್ತಿಬೆಲೆಯ ನಿವಾಸಿ­ಗಳಾದ ಪಾಪರೆಡ್ಡಿ (55) ಮತ್ತು ಜೂಜು­ವಾಡಿಯ ಜನಾರ್ದನ್‌ (30) ಎಂದು ಗುರುತಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.