ಹುಬ್ಬಳ್ಳಿ: `ಜ್ಞಾನಪೀಠ ಪುರಸ್ಕಾರಕ್ಕೆ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಚಂದ್ರಶೇಖರ ಕಂಬಾರ ಅವರಿಗಿಂತಲೂ ಎಸ್.ಎಲ್.ಭೈರಪ್ಪ ಹೆಚ್ಚು ಅರ್ಹ ಹಾಗೂ ಶ್ರೇಷ್ಠ ವ್ಯಕ್ತಿಯಾಗಿದ್ದರು~ ಎಂದು ಹಿರಿಯ ಪತ್ರಕರ್ತ ಡಾ. ಪಾಟೀಲ ಪುಟ್ಟಪ್ಪ ಅಭಿಪ್ರಾಯಪಟ್ಟರು.
ಮಂಗಳವಾರ ವರದಿಗಾರರ ಜೊತೆ ಮಾತನಾಡಿದ ಅವರು, `ಯೋಗ್ಯತೆ ಇದ್ದವರಿಗೆ ಪ್ರಶಸ್ತಿ ಬಂದಿದ್ದರೆ ನನಗೂ ಸಂತೋಷವಾಗುತ್ತಿತ್ತು. ಕನ್ನಡ ಸಾಹಿತ್ಯದ್ಲ್ಲಲಿ ಸದ್ಯ ಭೈರಪ್ಪ ಅವರನ್ನು ಹೊರತುಪಡಿಸಿ ಬೇರೆ ಯಾರಿಗೇ ಜ್ಞಾನಪೀಠ ಪ್ರಶಸ್ತಿ ಬಂದರೂ ಅದಕ್ಕೆ ಬೆಲೆ ಇಲ್ಲ~ ಎಂದರು.
`ಭಾರತೀಯ ಸಾಹಿತ್ಯ ಕ್ಷೇತ್ರ ಕಂಡ ಶ್ರೇಷ್ಠ ಕಾದಂಬರಿಕಾರರಲ್ಲಿ ಭೈರಪ್ಪ ಒಬ್ಬರು. ಅವರಿಗೆ ವ್ಯವಸ್ಥಿತವಾಗಿ ಪ್ರಶಸ್ತಿಯನ್ನು ನಿರಾಕರಿಸುತ್ತಾ ಬರಲಾಗಿದೆ. ಈ ಶ್ರೇಷ್ಠ ಬರಹಗಾರನಿಗೆ ಜ್ಞಾನಪೀಠ ಸಿಗದಂತೆ ನೋಡಿಕೊಳ್ಳಲು ದೊಡ್ಡ ಲಾಬಿಯೇ ಕೆಲಸ ಮಾಡುತ್ತಿದೆ~ ಎಂದು ಆಪಾದಿಸಿದರು.
`ಲಾಬಿ ಮಾಡಿ ಪ್ರಶಸ್ತಿ ಪಡೆದರೆ ಅದಕ್ಕೆ ಯಾವ ಬೆಲೆಯೂ ಇಲ್ಲ. ಎಂಟನೇ ಕನ್ನಡಿಗನಿಗೆ ಅತ್ಯುನ್ನತ ಪ್ರಶಸ್ತಿ ಸಿಕ್ಕಿದೆ ಎಂದು ಸಂಭ್ರಮಿಸುವಲ್ಲಿ ಯಾವುದೇ ಅರ್ಥವಿಲ್ಲ. ಅಂಕಿಯಲ್ಲಿ ನನಗೆ ಯಾವುದೇ ವಿಶೇಷ ಮೋಹವಿಲ್ಲ. ಯೋಗ್ಯತೆ ಇದ್ದವರಿಗೆ ಗೌರವ ಸಿಗುವುದು ಮುಖ್ಯ. ಹಾಗಾದಾಗ ಮಾತ್ರವೇ ನನಗೆ ಸಂತೋಷವಾಗುತ್ತದೆ~ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.