ಬೆಂಗಳೂರು: ರಾಜ್ಯ ನಾಟಕ ಅಕಾಡೆಮಿ ಆಯೋಜಿಸಲು ಉದ್ದೇಶಿಸಿರುವ, ಸಾಹಿತಿ ಡಾ. ಚಂದ್ರಶೇಖರ ಕಂಬಾರರ ಸರಣಿ ನಾಟಕ ಕಾರ್ಯಕ್ರಮ ವೀಕ್ಷಿಸಲು ರಂಗಾಸಕ್ತರು ಇನ್ನೂ ಕೆಲವು ಕಾಲ ಕಾಯಬೇಕು. ಈ ಕಾರ್ಯಕ್ರಮಕ್ಕೆ ಅಗತ್ಯವಿರುವ ಹಣವನ್ನು ರಾಜ್ಯ ಬಜೆಟ್ ಮಂಡನೆಯಾದ ನಂತರ ಬಿಡುಗಡೆ ಮಾಡಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಾಟಕ ಅಕಾಡೆಮಿಗೆ ತಿಳಿಸಿದೆ.
`ಬಜೆಟ್ ಮಂಡನೆ ಆಗುವವರೆಗೆ ನಾಟಕೋತ್ಸವಕ್ಕೆ ಅಗತ್ಯ ಹಣ ನೀಡಲು ಆಗದು ಎಂದು ಇಲಾಖೆ ಹೇಳಿದೆ. ಅಲ್ಲದೆ, ಉತ್ತರ ಕರ್ನಾಟಕದಲ್ಲಿ ಹೆಚ್ಚಿನ ಕಾರ್ಯಕ್ರಮ ಆಯೋಜಿಸಬೇಕು ಎಂಬ ಸೂಚನೆಯೂ ಇಲಾಖೆಯಿಂದ ಬಂದಿದೆ~ ಎಂದು ಅಕಾಡೆಮಿ ಅಧ್ಯಕ್ಷೆ ಮಾಲತಿ ಸುಧೀರ್ `ಪ್ರಜಾವಾಣಿ~ಗೆ ಮಾಹಿತಿ ನೀಡಿದರು. ಕಂಬಾರರ ಒಟ್ಟು 17 ನಾಟಕಗಳ ಪೈಕಿ 8 ನಾಟಕಗಳನ್ನು ಈ ಉತ್ಸವಕ್ಕೆ ಆಯ್ಕೆ ಮಾಡಲಾಗಿದೆ. ರಾಜ್ಯದಾದ್ಯಂತ ಒಟ್ಟು 15 ನಾಟಕ ತಂಡಗಳನ್ನು ಗುರುತಿಸಿ, ಜಿಲ್ಲಾ ಕೇಂದ್ರಗಳಲ್ಲಿ ಒಂದು ಅಥವಾ ಎರಡು ದಿನ ಪ್ರದರ್ಶನ ನೀಡುವುದು ಅಕಾಡೆಮಿಯ ಉದ್ದೇಶ. ಯೋಜನೆಗೆ ರೂ 55 ಲಕ್ಷ ಹಣ ಬೇಕು ಎಂದು ಅಕಾಡೆಮಿ ಅಂದಾಜಿಸಿದೆ.
`ಮೊದಲು ಆಯ್ಕೆ ಮಾಡಲಾಗಿದ್ದ 8 ನಾಟಕಗಳ ಪೈಕಿ ಒಂದೆರಡು ನಾಟಕಗಳನ್ನು ಕೈಬಿಡಬೇಕಾಗಿ ಬರಬಹುದು. ಅಲ್ಲದೆ, ಬಜೆಟ್ ಮಂಡನೆಯ ಬಳಿಕ ಅಕಾಡೆಮಿಗೆ ಸದಸ್ಯರ ನೇಮಕಾತಿಯೂ ಆಗಬಹುದು ಎಂಬ ವಿಶ್ವಾಸವಿದೆ. ಆಗ ಸದಸ್ಯರಿಗೆ ನಾಟಕೋತ್ಸವದ ಪ್ರದೇಶವಾರು ಉಸ್ತುವಾರಿ ವಹಿಸಲಾಗುವುದು~ ಎಂದರು. ಅಂದುಕೊಂಡಂತೆ ಆಗಿದ್ದರೆ ನಾಟಕೋತ್ಸವ ಕಂಬಾರರ ಹುಟ್ಟೂರು ಬೆಳಗಾವಿ ಜಿಲ್ಲೆಯ ಘೋಡಗೇರಿಯಲ್ಲಿ ಶಿವರಾತ್ರಿಯಂದೇ ಉದ್ಘಾಟನೆಯಾಗಬೇಕಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.