ADVERTISEMENT

ಕಟ್ಟಾ ಜಾಮೀನು ಅರ್ಜಿ: ಅ. 17ಕ್ಕೆ ಆದೇಶ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2011, 19:35 IST
Last Updated 7 ಅಕ್ಟೋಬರ್ 2011, 19:35 IST

ಬೆಂಗಳೂರು: ಅನಾರೋಗ್ಯದ ಹಿನ್ನೆಲೆಯಲ್ಲಿ ಜಾಮೀನು ಕೋರಿ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಪೂರ್ಣಗೊಳಿಸಿರುವ ಲೋಕಾಯುಕ್ತ ವಿಶೇಷ ನ್ಯಾಯಾಲಯ, ಅಕ್ಟೋಬರ್ 17ರಂದು ಆದೇಶ ಪ್ರಕಟಿಸಲಿದೆ.

ಈ ಮಧ್ಯೆ ಕಟ್ಟಾ ಆರೋಗ್ಯ ಸ್ಥಿತಿಯ ಕುರಿತು ಈವರೆಗೆ ಸಲ್ಲಿಸಿರುವ ದಾಖಲೆಗಳಲ್ಲಿ `ಕ್ಲಿನಿಕಲ್~ ಸಾಕ್ಷ್ಯವೇ ಇಲ್ಲ ಎಂದು ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ನಿರ್ದೇಶಕರು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ.

`ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ~ (ಲೋಕಾಯುಕ್ತ) ವಿಶೇಷ ನ್ಯಾಯಾಲಯ ಕೆಐಎಡಿಬಿ ಭೂ ಹಗರಣಕ್ಕೆ ಸಂಬಂಧಿಸಿದಂತೆ ಕಟ್ಟಾ ಅವರನ್ನು ಆಗಸ್ಟ್ 8ರಂದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಹೈಕೋರ್ಟ್ ಕೂಡ ಅವರಿಗೆ ಜಾಮೀನು ನೀಡಲು ನಿರಾಕರಿಸಿತ್ತು. ಮತ್ತೆ ವಿಶೇಷ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಿರುವ ಕಟ್ಟಾ, ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯಲು ಜಾಮೀನು ನೀಡುವಂತೆ ಕೋರಿದ್ದಾರೆ.

ಕಟ್ಟಾ ಆರೋಗ್ಯ ಸ್ಥಿತಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿ ವರದಿಯೊಂದನ್ನು ನೀಡುವಂತೆ ನ್ಯಾಯಾಧೀಶ ಎನ್.ಕೆ.ಸುಧೀಂದ್ರ ರಾವ್ ಅವರು ಕಿದ್ವಾಯಿ ನಿರ್ದೇಶಕ ಡಾ.ವಿಜಯಕುಮಾರ್ ಅವರಿಗೆ ಆದೇಶಿಸಿದ್ದರು. ನ್ಯಾಯಾಲಯದ ಆದೇಶದಂತೆ ತಜ್ಞರೊಬ್ಬರ ನೆರವಿನಲ್ಲಿ ಸಿದ್ಧಪಡಿಸಿದ ವರದಿಯನ್ನು ಅವರು ಶುಕ್ರವಾರ ಬೆಳಿಗ್ಗೆ ನ್ಯಾಯಾಲಯಕ್ಕೆ ಸಲ್ಲಿಸಿದರು.

ವಿಜಯಕುಮಾರ್ ಅವರು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದ್ದ ವರದಿಯನ್ನು ವಿಚಾರಣೆ ವೇಳೆ ಪರಿಶೀಲಿಸಿದ ನ್ಯಾಯಾಧೀಶರು, ಈ ಸಂಬಂಧ ಕೆಲ ಪ್ರಶ್ನೆಗಳನ್ನು ಆರೋಪಿಪರ ವಕೀಲರ ಮುಂದಿಟ್ಟರು.

`ಈವರೆಗೂ ಲಭ್ಯವಿರುವ ವೈದ್ಯಕೀಯ ದಾಖಲೆಗಳು ಅಪೂರ್ಣ ಮತ್ತು ಅಸಮರ್ಪಕವಾಗಿವೆ. ವೈದ್ಯಕೀಯ ದಾಖಲೆಗಳಲ್ಲಿ ಕ್ಲಿನಿಕಲ್ ಸಾಕ್ಷ್ಯವೇ ಇಲ್ಲ. ಇತ್ತೀಚೆಗೆ ನಡೆಸಿರುವ ಪಿಇಟಿ-ಸಿಟಿ ಸ್ಕ್ಯಾನಿಂಗ್ ವರದಿ ಕಟ್ಟಾ ಅವರಿಗೆ ಕ್ಯಾನ್ಸರ್ ಮರುಕಳಿಸಿದೆ ಎಂಬ ಸೂಚನೆ ನೀಡಿದೆ. ಆದರೆ, ಅದರ ಆಧಾರದಲ್ಲೇ ಪೂರ್ಣ ನಿರ್ಧಾರಕ್ಕೆ ಬರಲಾಗದು. ಮೊದಲು `ಲಿಂಪ್ ನೋಡ್ ಬಯಾಪ್ಸಿ~ (ಮಾಂಸದ ತುಣುಕಿನ ಪರೀಕ್ಷೆ) ನಡೆಸಿ ಕ್ಯಾನ್ಸರ್ ಮರುಕಳಿಸಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಮರುಕಳಿಸಿದ್ದಲ್ಲಿ `ಬೋನ್ ಮ್ಯಾರೋ ಆಸ್ಪಿರೇಷನ್ ಬಯಾಪ್ಸಿ~ (ಅಸ್ಥಿಮಜ್ಜೆ ಪರೀಕ್ಷೆ) ಮೂಲಕ ಕ್ಯಾನ್ಸರ್‌ನ ಹಂತವನ್ನು ದೃಢಪಡಿಸಿಕೊಳ್ಳಬೇಕು~ ಎಂದು ಕಿದ್ವಾಯಿ ನಿರ್ದೇಶಕರು ವರದಿಯಲ್ಲಿ ಉಲ್ಲೇಖಿಸಿದ್ದಾರೆ.

`ಲಿಂಫೋಮಾ ಕ್ಯಾನ್ಸರ್ ಮರುಕಳಿಸಿದ್ದಲ್ಲಿ ಸೂಕ್ತ ಕೀಮೋಥೆರಪಿಯ ಮೂಲಕವೇ ಚಿಕಿತ್ಸೆ ನೀಡಬೇಕು. ಸಂಬಂಧಿಸಿದ ಚಿಕಿತ್ಸಾ ಸೌಲಭ್ಯ ಬೆಂಗಳೂರಿನ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಿದೆ~ ಎಂದು ಡಾ.ವಿಜಯಕುಮಾರ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಮುಂಬೈನಲ್ಲಿ ಚಿಕಿತ್ಸೆಗೆ ಮನವಿ:  ಕಿದ್ವಾಯಿ ನಿರ್ದೇಶಕರ ವರದಿಯಲ್ಲಿನ ಅಂಶಗಳನ್ನು ತಿಳಿದ ಬಳಿಕ ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಚಕಿತ್ಸೆ ಪಡೆಯಲು ಅವಕಾಶ ನೀಡುವಂತೆ ಕಟ್ಟಾ ಪರ ವಕೀಲರು ಮನವಿ ಮಾಡಿದರು. 2004ರಲ್ಲಿ ತಮ್ಮ ಕಕ್ಷಿದಾರರು ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಅಲ್ಲಿನ ವೈದ್ಯರಿಗೆ ರೋಗಿಯ ಬಗ್ಗೆ ಮಾಹಿತಿ ಇದೆ. ರೋಗಿಗೆ ಆಸ್ಪತ್ರೆಯ ಬಗ್ಗೆ ನಂಬಿಕೆ ಇದೆ. ಈ ಕಾರಣಕ್ಕಾಗಿ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಅನುಮತಿ ನೀಡಬೇಕು ಎಂದು ಕೋರಿದರು.

ವಿಚಾರಣೆಯನ್ನು ಪೂರ್ಣಗೊಳಿಸಿದ ನ್ಯಾಯಾಧೀಶರು, ಅ. 17ಕ್ಕೆ ಆದೇಶ ಪ್ರಕಟಿಸುವುದಾಗಿ ತಿಳಿಸಿದರು.

ADVERTISEMENT

ಬೇಗ ಆದೇಶ ನೀಡುವಂತೆ ಅರ್ಜಿದಾರರ ಪರ ವಕೀಲರು ಕೋರಿದಾಗ, ತುರ್ತು ಸಂದರ್ಭ ಇದ್ದರೆ ಪೊಲೀಸ್ ರಕ್ಷಣೆಯಲ್ಲಿ ಚಿಕಿತ್ಸೆಗೆ ಆದೇಶ ನೀಡುವುದಾಗಿ ಹೇಳಿದರು. ಆದರೆ, ಕಟ್ಟಾ ಪರ ವಕೀಲರು ಅಂತಹ ಅನಿವಾರ್ಯ ಇಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಅಳಿಯನಿಗೆ ತರಾಟೆ
ನ್ಯಾಯಾಲಯದ ವಿಚಾರಣೆಯ ವೇಳೆ ನೇರವಾಗಿ ನ್ಯಾಯಾಧೀಶರ ಜೊತೆ ಸಂಭಾಷಣೆ ನಡೆಸಲು ಯತ್ನಿಸಿದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರ ಅಳಿಯ ಡಾ.ಸೂರಿರಾಜು ಅವರನ್ನು ನ್ಯಾಯಾಧೀಶರು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಘಟನೆ ವಿಶೇಷ ನ್ಯಾಯಾಲಯದಲ್ಲಿ ನಡೆಯಿತು.

ಜಾಮೀನು ಅರ್ಜಿಯ ವಿಚಾರಣೆಯ ಅಂತ್ಯದಲ್ಲಿ ಚಿಕಿತ್ಸೆಗೆ ಸಂಬಂಧಿಸಿದಂತೆ ಮುಂದಿನ ಯೋಚನೆಗಳ ಬಗ್ಗೆ ಆರೋಪಿಪರ ವಕೀಲರನ್ನು ನ್ಯಾಯಾಧೀಶರು ಪ್ರಶ್ನಿಸಿದರು.

ಆಗ ನ್ಯಾಯಾಲಯದಲ್ಲಿ ಹಾಜರಿದ್ದ ಸೂರಿರಾಜು, ಮಾವನ ಬಗ್ಗೆ ತಾವೇ ವಿವರಣೆ ನೀಡಲು ಮುಂದಾದರು. ತಕ್ಷಣವೇ ಗರಂ ಆದ ನ್ಯಾಯಾಧೀಶ ಎನ್.ಕೆ.ಸುಧೀಂದ್ರ ರಾವ್, ಸೂರಿರಾಜು ಅವರಿಗೆ ಬೆವರಿಳಿಸಿದರು.

`ಯಾರು ನೀವು? ನ್ಯಾಯಾಲಯಕ್ಕೆ ನೇರವಾಗಿ ವಿವರಣೆ ನೀಡಲು ನಿಮಗೆ ಎಷ್ಟು ಧೈರ್ಯವಿದೆ? ವಕೀಲರಲ್ಲದವರು ಹೇಳಿಕೆ ನೀಡುವುದನ್ನು ನಾನು ಬೆಂಬಲಿಸುವುದಿಲ್ಲ~ ಎಂದು ನ್ಯಾಯಾಧೀಶರು ಗುಡುಗಿದರು.

ಆಗ ಸೂರಿರಾಜು ಗಡಗಡ ನಡುಗುತ್ತಿದ್ದರು. ಕೊನೆಗೆ ಅವರಿಂದ ಮಾಹಿತಿ ಪಡೆದು ನ್ಯಾಯಾಲಯಕ್ಕೆ ವಿವರಿಸುವಂತೆ ವಕೀಲರಿಗೆ ನ್ಯಾಯಾಧೀಶರು ಸೂಚಿಸಿದರು. ಅದರಂತೆ ವಕೀಲರು ವಿವರಣೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.