ADVERTISEMENT

ಕಡತ ಅನುವಾದಕ್ಕೆ ಚೌಕಾಸಿ ಏಕೆ ?

ಅಡ್ವೊಕೇಟ್‌ ಜನರಲ್‌ಗೆ ನ್ಯಾ.ಆರ್.ಎಸ್‌.ಚವಾಣ್‌ ತರಾಟೆ

​ಪ್ರಜಾವಾಣಿ ವಾರ್ತೆ
Published 18 ಜನವರಿ 2016, 19:30 IST
Last Updated 18 ಜನವರಿ 2016, 19:30 IST
ಕಡತ ಅನುವಾದಕ್ಕೆ ಚೌಕಾಸಿ ಏಕೆ ?
ಕಡತ ಅನುವಾದಕ್ಕೆ ಚೌಕಾಸಿ ಏಕೆ ?   

ಬೆಂಗಳೂರು: ಹೈಕೋರ್ಟ್‌ನಲ್ಲಿ ಖಾಲಿ ಇರುವ 9 ಅಧಿಕೃತ ಭಾಷಾಂತರಕಾರರ ಹುದ್ದೆಗಳನ್ನು ಭರ್ತಿ ಮಾಡುವಂತೆ ಹೈಕೋರ್ಟ್‌ ಮೌಖಿಕವಾಗಿ ಆದೇಶಿಸಿದೆ.

‘ತಮ್ಮ ವಿರುದ್ಧ ಸದನದಲ್ಲಿ ಮಂಡಿಸಲಾಗಿರುವ ಪದಚ್ಯುತಿ ನಿರ್ಣಯ ಪ್ರಶ್ನಿಸಿ ಉಪ ಲೋಕಾಯುಕ್ತ ಸುಭಾಷ್‌ ಬಿ ಅಡಿ ಸಲ್ಲಿಸಿರುವ ಅರ್ಜಿ ವಿಚಾರಣೆ ವೇಳೆ ನ್ಯಾಯಮೂರ್ತಿ ಆರ್.ಎಸ್.ಚೌಹಾಣ್‌ ಅವರಿದ್ದ ಏಕಸದಸ್ಯ ಪೀಠ  ಸೋಮವಾರ ಈ ಕುರಿತಂತೆ ಅಡ್ವೊಕೇಟ್‌ ಜನರಲ್ ಎಂ.ಆರ್‌.ನಾಯಕ್‌ ಅವರಿಗೆ ಸೂಚನೆ ನೀಡಿದೆ.

‘ಅರ್ಜಿದಾರರು ಸಲ್ಲಿಸಿರುವ ದಾಖಲೆಗಳಲ್ಲಿ ಕೆಲವು  ಪತ್ರಿಕಾ ವರದಿಗಳನ್ನೂ ಲಗತ್ತಿಸಲಾಗಿದೆ. ಇವುಗಳನ್ನೆಲ್ಲಾ ಅನುವಾದ ಮಾಡಬೇಕಾದ ಅವಶ್ಯಕತೆ ಇಲ್ಲ’ ಎಂದು ಎಂ.ಆರ್‌.ನಾಯಕ್‌ ಹೇಳಿದ ಮಾತಿಗೆ ಚವಾಣ್‌ ಗರಂ ಆದರು.

‘ಹೊರ ರಾಜ್ಯದಿಂದ ಬಂದ ನ್ಯಾಯಮೂರ್ತಿಗಳ ಪೀಠಕ್ಕೆ ಎಲ್ಲ ಕಡತಗಳನ್ನೂ ಇಂಗ್ಲಿಷ್‌ಗೆ ಅನುವಾದ ಮಾಡಿಯೇ ಕೊಡಬೇಕೆಂಬ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳ ಆದೇಶವನ್ನು ನೀವು ಧಿಕ್ಕರಿಸುತ್ತಿದ್ದೀರ’ ಎಂದು  ನಾಯಕ್‌ ಅವರನ್ನು ಎಚ್ಚರಿಸಿದರು.

‘ಏನೆಲ್ಲಾ ಅನುವಾದ ಮಾಡಿಕೊಟ್ಟಿದ್ದೀರಿ. ಉಳಿದ ಇನ್ನೊಂದಿಷ್ಟು ಕಡತಗಳನ್ನು ಅನುವಾದ ಮಾಡಿಕೊಡಲು ಯಾಕೆ ಚೌಕಾಶಿ ಮಾಡುತ್ತಿದ್ದೀರಿ? ವಕೀಲರ ಮೇಲಿನ ಭಾರವನ್ನು ಕಡಿಮೆ ಮಾಡಲು ಪ್ರಯತ್ನಿಸಿ’ ಎಂದು ಸೂಚಿಸಿದರು.

ವಿಚಾರಣೆಯನ್ನು ಇದೇ 21ಕ್ಕೆ ಮುಂದೂಡಲಾಗಿದೆ. ಅರ್ಜಿದಾರರ ಪರ ಹಿರಿಯ ವಕೀಲ ಬಿ.ವಿ.ಆಚಾರ್ಯ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.