ADVERTISEMENT

ಕಡೂರು: ತರಳಬಾಳು ಹುಣ್ಣಿಮೆ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 30 ಜನವರಿ 2012, 19:30 IST
Last Updated 30 ಜನವರಿ 2012, 19:30 IST
ಕಡೂರು: ತರಳಬಾಳು ಹುಣ್ಣಿಮೆ ಮಹೋತ್ಸವ
ಕಡೂರು: ತರಳಬಾಳು ಹುಣ್ಣಿಮೆ ಮಹೋತ್ಸವ   

ಕಡೂರು:  ಎಲ್ಲೆಲ್ಲೂ ಹಾರಾಡುವ `ಶಿವ~ ಲಾಂಛನದ ಕೇಸರಿ ಬಾವುಟಗಳು, ದಾರಿಯುದ್ದಕ್ಕೂ ಸ್ವಾಗತ ಕಮಾನುಗಳು, ಮಠದ ಆನೆಯ ಗಂಭೀರ ನಡೆಯ ಮಧ್ಯೆ ಸಿರಿಗೆರೆ ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ  ಅವರನ್ನು ಪಟ್ಟಣದ ನಾಗರಿಕರು ಸೋಮವಾರ ಭವ್ಯವಾಗಿ ಸ್ವಾಗತಿಸಿದರು.

ಪಟ್ಟಣಕ್ಕೆ ಸಾವಿರಾರು ಭಕ್ತರ ಜತೆ ಆಗಮಿಸಿದ ಹುಣ್ಣಿಮೆ ಮಹೋತ್ಸವದ ಕೇಂದ್ರಬಿಂದು ಸಿರಿಗೆರೆ ಸ್ವಾಮೀಜಿ  ಅವರನ್ನು ತರಳಬಾಳು ಹುಣ್ಣಿಮೆ ಆಚರಣಾ ಸಮಿತಿ ಸದಸ್ಯರು ಮತ್ತು ಭಕ್ತರು ಪಟ್ಟಣದ ವೇದಾವತಿ ಬಾಲಿಕಾ ಪ್ರೌಢಶಾಲೆ ಬಳಿ ಭಕ್ತಿ-ಗೌರವಗಳೊಂದಿಗೆ ಬರಮಾಡಿಕೊಂಡರು.

ನಂತರ ಸ್ವಾಮೀಜಿ ಅವರನ್ನು ನಾಲ್ಕು ಕುದುರೆಗಳ ಸಾರೋಟಿನಲ್ಲಿ ಸ್ವಾಮೀಜಿ  ಅವಯನ್ನು ಕುಳ್ಳಿರಿಸಿ ಬಿ.ಎಚ್.ರಸ್ತೆ ಮುಖಾಂತರ ಮೆರವಣಿಗೆಯಲ್ಲಿ ಬಸವೇಶ್ವರ ವೃತ್ತದ ಬಳಿಗೆ ಕರೆ ತರಲಾಯಿತು. ಮಹಿಳೆಯರ ವೀರಗಾಸೆ ಕುಣಿತ, ತಟ್ಟೀರಾಯ, ನಾಸಿಕ್ ಬ್ಯಾಂಡ್, ಛತ್ರಿ, ಚಾಮರಗಳು, ನೂರಾರು ಯುವಕರ ಬೈಕ್‌ಗಳ ಆರ್ಭಟ, ಪಟಾಕಿಗಳ ಸದ್ದಿನ ನಡುವೆ ಮೆರವಣಿಗೆಯ ಸಡಗರ ಇಮ್ಮಡಿಸಿತ್ತು. ಮೆರವಣಿಗೆ ಮಾರ್ಗದಲ್ಲಿ ತಳಿರು ತೋರಣ, ಬಾಳೆಕಂದುಗಳೊಂದಿಗೆ ಪಟ್ಟಣವನ್ನು ಸಿಂಗರಿಸಲಾಗಿತ್ತು.

ಬಸವೇಶ್ವರ ವೃತ್ತದಲ್ಲಿ ವಿಶಾಲ ಚಾರಿಟಬಲ್ ಟ್ರಸ್ಟ್ ಮೂಲಕ ನಿರ್ಮಿಸಿರುವ ಬಸವೇಶ್ವರರ ಪುತ್ಥಳಿಯನ್ನು ಯಳನಾಡು ಸ್ವಾಮೀಜಿ ಜತೆ ಸಿರಿಗೆರೆ ಸ್ವಾಮೀಜಿ ಅನಾವರಣಗೊಳಿಸಿದರು.

ದಾವಣಗೆರೆ, ಚಿತ್ರದುರ್ಗ, ಹಾವೇರಿ, ಬಳ್ಳಾರಿ, ಚಿಕ್ಕಮಗಳೂರು ಕಡೆಯಿಂದ ಭಕ್ತರ ಸಾಗರವೇ ಪಟ್ಟಣಕ್ಕೆ ಹರಿದು ಬಂದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.