ADVERTISEMENT

`ಕಣ್ಣುಮುಚ್ಚಿ ಪಕ್ಷಾಂತರಿಗಳ ಸೇರ್ಪಡೆ ಇಲ್ಲ'

​ಪ್ರಜಾವಾಣಿ ವಾರ್ತೆ
Published 9 ಜನವರಿ 2013, 19:59 IST
Last Updated 9 ಜನವರಿ 2013, 19:59 IST
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಮತ್ತು ಇತರ ಮುಖಂಡರು `ಕಾಂಗ್ರೆಸ್ ನಡಿಗೆ- ಕೃಷ್ಣೆಯ ಕಡೆಗೆ' ಅಂಗವಾಗಿ ಹಮ್ಮಿಕೊಂಡಿರುವ ಪಾದಯಾತ್ರೆಯನ್ನು ಕೊಪ್ಪಳ ತಾಲ್ಲೂಕಿನ ಟಣಕನಕಲ್ಲು ಗ್ರಾಮದಿಂದ ಬುಧವಾರ ಮುಂದುವರಿಸಿದರು
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಮತ್ತು ಇತರ ಮುಖಂಡರು `ಕಾಂಗ್ರೆಸ್ ನಡಿಗೆ- ಕೃಷ್ಣೆಯ ಕಡೆಗೆ' ಅಂಗವಾಗಿ ಹಮ್ಮಿಕೊಂಡಿರುವ ಪಾದಯಾತ್ರೆಯನ್ನು ಕೊಪ್ಪಳ ತಾಲ್ಲೂಕಿನ ಟಣಕನಕಲ್ಲು ಗ್ರಾಮದಿಂದ ಬುಧವಾರ ಮುಂದುವರಿಸಿದರು   

ಕೊಪ್ಪಳ: ಪಕ್ಷವು ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂಬ ಸಂದೇಶ ಹೋಗುತ್ತಿದೆ. ಹೀಗಾಗಿ ಬಿಜೆಪಿ ಹಾಗೂ ಜೆಡಿಎಸ್‌ನ ಶಾಸಕರು ಪಕ್ಷ ಸೇರಲು ತುದಿಗಾಲಿನಲ್ಲಿ ನಿಂತಿದ್ದಾರೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ  ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಹೇಳಿದರು.

`ಕಾಂಗ್ರೆಸ್ ನಡಿಗೆ- ಕೃಷ್ಣೆಯ ಕಡೆಗೆ' ಅಂಗವಾಗಿ ಮೂರನೇ ದಿನದ ಪಾದಯಾತ್ರೆಯನ್ನು ತಾಲ್ಲೂಕಿನ ಟಣಕನಕಲ್ಲು ಗ್ರಾಮದಿಂದ ಬುಧವಾರ ಆರಂಭಿಸುವ ಮುನ್ನ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಪಕ್ಷವನ್ನು ಸೇರಲು ಬಿಜೆಪಿ ಮತ್ತು ಜೆಡಿಎಸ್‌ನ ಹಲವಾರು ಶಾಸಕರು, ಮುಖಂಡರು ಇಚ್ಛೆ ವ್ಯಕ್ತಪಡಿಸಿದ್ದಾರೆ. ಅವರ ಈ ಇಚ್ಛೆಯನ್ನು ಪಕ್ಷವು ಪರಿಗಣಿಸಿದೆ. ಪಕ್ಷ ಸೇರಲು ಬಯಸುವವರ ಕುರಿತು ಸೂಕ್ಷ್ಮವಾಗಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಹೇಳಿದರು.

ಇವೆರಡು ಪಕ್ಷಗಳ ಯಾವ ನಾಯಕರನ್ನು ಕಾಂಗ್ರೆಸ್‌ಗೆ ಸೇರಿಸಿಕೊಳ್ಳಬೇಕು, ಸೇರಿಸಿಕೊಳ್ಳಬಾರದು ಎಂಬ ಬಗ್ಗೆ ಬ್ಲಾಕ್, ಜಿಲ್ಲಾ ಹಂತದ ಮುಖಂಡರ ಹಾಗೂ ಕಾರ್ಯಕರ್ತರ ಅಭಿಪ್ರಾಯಗಳನ್ನು ಸಹ ಸಂಗ್ರಹಿಸಲಾಗುತ್ತಿದೆ. ಕಣ್ಮುಚ್ಚಿಕೊಂಡು ಇತರ ಪಕ್ಷಗಳ ನಾಯಕರನ್ನು ಪಕ್ಷಕ್ಕೆ ಬರ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಸಮ್ಮಿಶ್ರ ಸರ್ಕಾರಗಳಿಂದ ರಾಜ್ಯದ ಅಭಿವೃದ್ಧಿ ಅಸಾಧ್ಯ. ಸಮ್ಮಿಶ್ರ ಸರ್ಕಾರದಿಂದ ಗೊಂದಲವೇ ಹೆಚ್ಚು. ಹೀಗಾಗಿ ಪಕ್ಷವು ಸಮ್ಮಿಶ್ರ ಸರ್ಕಾರಕ್ಕೆ ಒತ್ತು ನೀಡುವುದಿಲ್ಲ. ಅಲ್ಲದೇ, ಈ ಬಾರಿ ನಿಚ್ಚಳ ಬಹುಮತ ಪಡೆಯುವ ಮೂಲಕ ಕಾಂಗ್ರೆಸ್ ಸರ್ಕಾರ ರಚನೆ ಮಾಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.