ADVERTISEMENT

ಕನಸಿನ ತೋಟದಲ್ಲೇ ಮಣ್ಣಾದ ರಾಕೇಶ್‌

ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಹರಿದು ಬಂದ ಜನಸಾಗರ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2016, 19:31 IST
Last Updated 1 ಆಗಸ್ಟ್ 2016, 19:31 IST
ರಾಕೇಶ್‌ ಅಂತಿಮ ದರ್ಶನದಲ್ಲಿ ಕೇಂದ್ರ ಸಚಿವ ಸದಾನಂದಗೌಡ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಂತೈಸುವ ವೇಳೆ ದುಃಖಿತರಾದರು
ರಾಕೇಶ್‌ ಅಂತಿಮ ದರ್ಶನದಲ್ಲಿ ಕೇಂದ್ರ ಸಚಿವ ಸದಾನಂದಗೌಡ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಂತೈಸುವ ವೇಳೆ ದುಃಖಿತರಾದರು   

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹಿರಿಯ ಪುತ್ರ ರಾಕೇಶ್ ಸಿದ್ದರಾಮಯ್ಯ ಅಂತ್ಯಕ್ರಿಯೆ ಎಚ್‌.ಡಿ.ಕೋಟೆ ರಸ್ತೆ ಬಳಿ ಇರುವ ಟಿ.ಕಾಟೂರು ಗ್ರಾಮದ ತೋಟದ ಮನೆಯಲ್ಲಿ ಸೋಮವಾರ ಸಂಜೆ 5.30ಕ್ಕೆ ನೆರವೇರಿತು.

ಪೋಷಕರು, ಸಹೋದರ, ಪತ್ನಿ, ಬಂಧುಗಳು ಹಾಗೂ ಆಪ್ತರ ಸಮ್ಮುಖದಲ್ಲಿ ಕಾಗಿನೆಲೆ ಕನಕಗುರು ಪೀಠದ ನಿರಂಜನಾನಂದಪುರಿ ಸ್ವಾಮೀಜಿ ಹಾಲುಮತ ಸಮಾಜದ ಸಂಪ್ರದಾಯದಂತೆ ಅಂತಿಮ ವಿಧಿವಿಧಾನ ನಡೆಸಿಕೊಟ್ಟರು.

ರಾಕೇಶ್‌ ಪುತ್ರ ಧವನ್‌ ಅಂತ್ಯಕ್ರಿಯೆ ನೆರವೇರಿಸಿದರು. ಬಿಳಿ ಪಂಚೆ ಧರಿಸಿ ಮಡಿಕೆ ಹೊತ್ತು ಮೂರು ಸುತ್ತು ತಿರುಗಿದರು. ಬಳಿಕ ಅಪ್ಪನನ್ನು ಇರಿಸಿದ್ದ ಗುಂಡಿಗೆ ಮಣ್ಣು ಹಾಕಿದರು.

ವಿಧಿವಿಧಾನ ನಡೆಯುವಾಗ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತು. ಆಪ್ತರ ಕಣ್ಣಾಲಿಗಳು ಆರ್ದ್ರವಾಗಿ ತುಂಬಿಕೊಂಡವು. ಸಿದ್ದರಾಮಯ್ಯ ಬಿಕ್ಕಳಿಸಿ ಅತ್ತರು.

ಅವರಿಗೆ ಬಂಧುಗಳು ಸಾಂತ್ವನ ಹೇಳುತ್ತಿದ್ದ ದೃಶ್ಯ ಕರುಳು ಹಿಂಡುವಂತಿತ್ತು. ಅದನ್ನು ನೋಡಿ ಸುತ್ತಮುತ್ತ ಇದ್ದವರೂ ಕಂಬನಿ ಮಿಡಿದರು. ಸೋದರ ಡಾ.ಯತೀಂದ್ರ ಅವರು ದುಃಖದಲ್ಲಿ ಮುಳುಗಿದ್ದರು.

‘ಭಂಡಾರ ಸಂಸ್ಕೃತಿಯಂತೆ ಪಾರ್ಥಿವ ಶರೀರಕ್ಕೆ ಅರಿಸಿನ ಸ್ನಾನ ಮಾಡಿಸಲಾಯಿತು. ತಾಮ್ರದ ತಗಡಿನಲ್ಲಿ ಮಂತ್ರಾಕ್ಷರ ಬರೆದು ಅಷ್ಟದಿಕ್ಕುಗಳಲ್ಲಿ ಇಡಲಾಯಿತು. ಅದರ ಮೇಲೆ ದೀಪ ಇರಿಸಲಾಯಿತು. ವಿಧಿವಿಧಾನ ಪ್ರಕ್ರಿಯೆಯಲ್ಲಿ ನಾಲ್ವರು ಪುರೋಹಿತರು ಪಾಲ್ಗೊಂಡಿದ್ದರು’ ಎಂದು ಕಾಗಿನೆಲೆ ಪೀಠದ ಮೈಸೂರು ಘಟಕದ ಶಿವಾನಂದಪುರಿ ಸ್ವಾಮೀಜಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಶೋಕಸಾಗರ: ಅಂಗಾಂಗ ವೈಫಲ್ಯದಿಂದ ಶನಿವಾರ ಬೆಲ್ಜಿಯಂನ ಬ್ರಸೆಲ್ಸ್‌ನಲ್ಲಿ ನಿಧನರಾಗಿದ್ದ ರಾಕೇಶ್‌ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕಾಗಿ ವಸ್ತುಪ್ರದರ್ಶನ ಪ್ರಾಧಿಕಾರದ ಆವರಣಕ್ಕೆ ತರುತ್ತಿದ್ದಂತೆ ಅಭಿಮಾನಿಗಳು ಹಾಗೂ ಆಪ್ತರು ಶೋಕ ಸಾಗರದಲ್ಲಿ ಮುಳುಗಿದರು.

ಮಧ್ಯಾಹ್ನ 12.45ರಿಂದ 2.30ರ ವರೆಗೆ ಸಹಸ್ರಾರು ಮಂದಿ ಅಂತಿಮ ನಮನ ಸಲ್ಲಿಸಿದರು. ಅಂತಿಮ ದರ್ಶನಕ್ಕೆ ಬರುವವರಿಗೆ ಪ್ರತ್ಯೇಕ ಪ್ರವೇಶ ದ್ವಾರದ ವ್ಯವಸ್ಥೆ ಮಾಡಲಾಗಿತ್ತು. ಮಕ್ಕಳು, ಮಹಿಳೆಯರು, ವಯೋವೃದ್ಧರು ಸರತಿ ಸಾಲಿನಲ್ಲಿ ಬಂದು ಅಂತಿಮ ದರ್ಶನ ಪಡೆದರು. ಜನ ಹೆಚ್ಚಾಗುತ್ತಿದ್ದಂತೆ ನೂಕುನುಗ್ಗಲು ಉಂಟಾಯಿತು.

ಪಾರ್ಥಿವ ಶರೀರ ಇರಿಸಿದ್ದ ವೇದಿಕೆಯಲ್ಲಿ ಸಿದ್ದರಾಮಯ್ಯ ಸುಮಾರು ಒಂದೂವರೆ ಗಂಟೆ ನಿಂತಿದ್ದರು. ಆಗಾಗ ಟವೆಲ್‌ನಲ್ಲಿ ಕಣ್ಣೀರು ಒರೆಸಿಕೊಂಡು, ಜನರತ್ತ ಕೈಬೀಸಿ ದುಃಖವನ್ನು ಅದುಮಿಟ್ಟುಕೊಳ್ಳಲು ಪ್ರಯತ್ನಿಸುತ್ತಿದ್ದರು. ಅಂತಿಮ ದರ್ಶನ ಪಡೆದವರು ಅವರ ಕೈಹಿಡಿದು ಸಾಂತ್ವನ ಹೇಳುತ್ತಿದ್ದ ದೃಶ್ಯ ಕಂಡುಬಂತು. ಪಕ್ಕದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ, ಲೋಕೋಪಯೋಗಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ನಿಂತಿದ್ದರು.

ಸಚಿವ ಸಂಪುಟದ ಬಹುತೇಕ ಸಚಿವರು ಅಂತಿಮ ನಮನ ಸಲ್ಲಿಸಿದರು. ಸಂಸದರು, ಶಾಸಕರು, ವಿವಿಧ ಪಕ್ಷಗಳ ಮುಖಂಡರು, ಸಾಹಿತಿಗಳು, ಉದ್ಯಮಿಗಳು, ಸ್ವಾಮೀಜಿಗಳು ಶ್ರದ್ಧಾಂಜಲಿ ಅರ್ಪಿಸಿದರು.

ಸ್ವಗ್ರಾಮದಲ್ಲಿ ನೀರವ ಮೌನ: ಸ್ವಗ್ರಾಮ ಸಿದ್ದರಾಮನಹುಂಡಿಯಲ್ಲಿ ದುಃಖ ಮಡುಗಟ್ಟಿತ್ತು. ಇಡೀ ಗ್ರಾಮದಲ್ಲಿ ನೀರವ ಮೌನ. ತಮ್ಮ ಸಮಸ್ಯೆಗಳಿಗೆ ಸದಾ ಸ್ಪಂದಿಸುತ್ತಿದ್ದ ಹುಡುಗನನ್ನು ಕಳೆದುಕೊಂಡ ಗ್ರಾಮಸ್ಥರು ಶೋಕಸಾಗರದಲ್ಲಿ ಮುಳುಗಿದ್ದರು. ಕೆಲ ದಿನಗಳ ಹಿಂದೆಯಷ್ಟೇ 39ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ರಾಕೇಶ್‌ ಈಗ ತಮ್ಮೊಡನಿಲ್ಲ ಎಂದು ಗೆಳೆಯರು ದುಃಖಿಸುತ್ತಿದ್ದರು.

ಪಾರ್ಥಿವ ಶರೀರದ ದರ್ಶನ ಪಡೆಯಲು ಹೆಚ್ಚಿನವರು ಮೈಸೂರಿಗೆ ಬಂದಿದ್ದರು. ಅಪ್ಪ ಪ್ರತಿನಿಧಿಸುವ ವರುಣಾ ವಿಧಾನಸಭಾ ಕ್ಷೇತ್ರದ ಗ್ರಾಮಗಳಿಗೆ ತೆರಳಿ ಸಾರ್ವಜನಿಕರ ಕುಂದು– ಕೊರತೆಗಳನ್ನು ರಾಕೇಶ್‌ ಆಲಿಸುತ್ತಿದ್ದರು. ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದರು.
*
ತೋಟದಲ್ಲೇ ಚಿರನಿದ್ರೆ
ಮೈಸೂರಿನಿಂದ 15 ಕಿ.ಮೀ ದೂರದಲ್ಲಿರುವ ಟಿ.ಕಾಟೂರು ಗ್ರಾಮದ ತೋಟದಲ್ಲಿ ರಾಕೇಶ್‌ ಸಿದ್ದರಾಮಯ್ಯ ಚಿರನಿದ್ರೆಗೆ ಜಾರಿದರು. ಇದು ಅವರ ಕನಸಿನ ತೋಟ. ಕಳೆದ ವರ್ಷವಷ್ಟೇ ಗೃಹ ಪ್ರವೇಶ ನಡೆದಿತ್ತು. ರಾಕೇಶ್‌ ಮುಂದೆ ನಿಂತು ಈ ಮನೆ ಕಟ್ಟಿಸಿದ್ದರು. ಈ ತೋಟದಲ್ಲಿ ಈಜುಕೊಳ, ವಾಯುವಿಹಾರ ಪಥ, ಹಣ್ಣಿನ ಗಿಡ, ತೆಂಗಿನ ಮರಗಳು ಇವೆ.
*
ಮುಖ್ಯಾಂಶಗಳು
* ಪಾರ್ಥಿವ ಶರೀರ ಹೊತ್ತು ಬೆಳಿಗ್ಗೆ 11.10ಕ್ಕೆ ಮೈಸೂರು ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ವಿಶೇಷ ವಿಮಾನ

* 12.45ಕ್ಕೆ ವಸ್ತುಪ್ರದರ್ಶನ ಪ್ರಾಧಿಕಾರ ಆವರಣ ತಲುಪಿದ ಪಾರ್ಥಿವ ಶರೀರ
* ಒಂದೂಮುಕ್ಕಾಲು ಗಂಟೆ ಅಂತಿಮ ದರ್ಶನಕ್ಕೆ ಅವಕಾಶ
* ಮಧ್ಯಾಹ್ನ 2.30ಕ್ಕೆ ಟಿ.ಕಾಟೂರಿನ ತೋಟದ ಮನೆಗೆ ರವಾನೆ
* ಸಂಜೆ 5.30ಕ್ಕೆ ಅಂತ್ಯಸಂಸ್ಕಾರ ನಡೆಸಿಕೊಟ್ಟ ಪುತ್ರ ಧವನ್‌
* ಅಂತಿಮ ಸಂಸ್ಕಾರಕ್ಕೆ ಹತ್ತಿರದ ಸಂಬಂಧಿಗಳು, ಆಪ್ತರಿಗೆ ಮಾತ್ರ ಪ್ರವೇಶ

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.