ಬೆಂಗಳೂರು: 15ನೇ ಲೋಕಸಭೆಯ ಅಧಿವೇಶನದಲ್ಲಿ ಮೂವರು ಸದಸ್ಯರು ಕನ್ನಡದಲ್ಲಿ ಮಾತನಾಡಿದ್ದಾರೆ.
ಎನ್.ಚೆಲುವರಾಯಸ್ವಾಮಿ, ಪ್ರಹ್ಲಾದ ಜೋಶಿ ಹಾಗೂ ಜಿ.ಎಂ.ಸಿದ್ದೇಶ್ವರ ಅವರೇ ಈ ಸದಸ್ಯರು.
2011ರಲ್ಲಿ ಕೇಂದ್ರ ಬಜೆಟ್ ಕುರಿತಂತೆ ಹಾಗೂ ಬೆಲೆ ಏರಿಕೆ, ಹಣದುಬ್ಬರದ ಬಗ್ಗೆ ಚೆಲುವರಾಯಸ್ವಾಮಿ ಕನ್ನಡದಲ್ಲಿಯೇ ಬೇಡಿಕೆಗಳನ್ನು ಮಂಡಿಸಿದ್ದರು. ಅಲ್ಲದೆ ಅವರು 2012ರ ಹಣಕಾಸು ಮಸೂದೆ ಕುರಿತಂತೆ ಕೂಡ ಕನ್ನಡದಲ್ಲಿ ಮಾತನಾಡಿದ್ದರು.
ಜೋಶಿ ಅವರು ವಿಶ್ವ ಕನ್ನಡ ಸಮ್ಮೇಳನದ ಬಗ್ಗೆ ಅಧಿವೇಶನದಲ್ಲಿ ಕನ್ನಡದಲ್ಲಿ ಮಾತನಾಡಿದ್ದರು. 2011ರ ರೈಲ್ವೆ ಬಜೆಟ್ ಮೇಲೆ ಸಿದ್ದೇಶ್ವರ ಅವರು ಕನ್ನಡದಲ್ಲಿ ಮಾತನಾಡಿದ್ದರು.
ಬೆಂಗಳೂರಿನ ರಿಜೋರ್ಸ್ ಸಂಶೋಧನಾ ಪ್ರತಿಷ್ಠಾನದ ಅಧ್ಯಯನ ಈ ಅಂಶಗಳನ್ನು ಬಹಿರಂಗಗೊಳಿಸಿದೆ.
ಭಾಷೆ ಬಗ್ಗೆ: ಕನ್ನಡದ ಬಗ್ಗೆ ಹಲವಾರು ಸದಸ್ಯರು ಮಾತನಾಡಿದ್ದಾರೆ. ಕನ್ನಡದ ಉಪ ಭಾಷೆಯಾದ ತುಳು ಬಗ್ಗೆ
ಕೂಡ ಅಧಿವೇಶನದಲ್ಲಿ ಚರ್ಚೆ ನಡೆದಿದೆ. ಬೇರೆ ರಾಜ್ಯದ ಸದಸ್ಯರೂ ಕೂಡ ಕನ್ನಡದ ಬಗ್ಗೆ ಮಾತನಾಡಿದ್ದಾರೆ.
ವಿಶ್ವನಾಥ ಕತ್ತಿ, ನಳಿನ್‌ಕುಮಾರ್ ಕಟೀಲ್, ಶಿವರಾಮ ಗೌಡ ಅವರು ಕನ್ನಡ ಶಾಸ್ತ್ರೀಯ ಭಾಷೆಯ ಅತ್ಯುನ್ನತ ಕೇಂದ್ರ ಮೈಸೂರಿನಲ್ಲಿ ಸ್ಥಾಪನೆಯಾಗಬೇಕು ಎಂದು ಒತ್ತಾಯಿಸಿದ್ದರು. ಪಿ.ಸಿ.ಗದ್ದಿಗೌಡರ್ ಅವರು 11ನೇ ಶತಮಾನದ ಇತಿಹಾಸ ಹಾಗೂ ಕನ್ನಡ ಮತ್ತು ತೆಲುಗು ಕಾವ್ಯಗಳ ಬಗ್ಗೆ ಸಂಶೋಧನೆಯಾಗಬೇಕು ಎಂದು ಒತ್ತಾಯಿಸಿದ್ದರು. ಎಷ್ಟೇ ಜನರು ಪರೀಕ್ಷೆಗೆ ಕುಳಿತಿದ್ದರೂ ಕನ್ನಡದಲ್ಲಿಯೇ ಯುಪಿಎಸ್‌ಸಿ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು ಎಂದು ನಳಿನ್‌ಕುಮಾರ್ ಕಟೀಲ್ ಆಗ್ರಹಿಸಿದ್ದರು.
ಹೊರ ರಾಜ್ಯಗಳ ಸದಸ್ಯರಾದ ಪ್ರಭಾಕರ ಪೊನ್ನಮ್, ಕಾವೂರಿ ಸಾಂಬಶಿವರಾವ್, ಪಿ.ಲಿಂಗಂ, ತಥಾಗತ ಸತ್ಪತಿ ಅವರು ಅಧಿವೇಶನದಲ್ಲಿ ಕನ್ನಡದ ಬಗ್ಗೆ ಮಾತನಾಡಿದ್ದಾರೆ.
ತುಳು ಭಾಷೆಗೂ ಶಾಸ್ತ್ರೀಯ ಭಾಷೆಯ ಸ್ಥಾನ ನೀಡಬೇಕು ಎಂದು ಅನಂತಕುಮಾರ್ ಅವರು ಒತ್ತಾಯಿಸಿದ್ದರು. ಆದರೆ ಅಂತಹ ಪ್ರಸ್ತಾವ ಸರ್ಕಾರ ಮುಂದೆ ಇಲ್ಲ ಎಂಬ ಉತ್ತರ ಅವರಿಗೆ ದೊರಕಿತ್ತು.
ಸಂವಿಧಾನದ 8ನೇ ಪರಿಚ್ಛೇದದಲ್ಲಿ ತುಳು ಭಾಷೆಯನ್ನು ಸೇರಿಸಬೇಕುಎಂದು ನಳಿನ್‌ಕುಮಾರ್ ಒತ್ತಾಯಿಸಿದ್ದರು. ಇದೇ ವಿಷಯದ ಬಗ್ಗೆ ಕಾಸರಗೋಡು ಸದಸ್ಯ ಪಿ.ಕರುಣಾಕರನ್ ಅವರೂ ಮಾತನಾಡಿದ್ದರು.
ಒಟ್ಟಾರೆಯಾಗಿ ಕಳೆದ ಐದು ವರ್ಷದ ಅಧಿವೇಶನವನ್ನು ಪರಿಶೀಲಿಸಿದಾಗ ಭಾಷಾ ವಿಷಯಗಳ ಬಗ್ಗೆ ಚರ್ಚೆ ನಡೆಸುವುದು ಲೋಕಸಭಾ ಸದಸ್ಯರಿಗೆ ಮುಖ್ಯವಾಗಿರಲಿಲ್ಲ ಎಂದು ವರದಿ ಹೇಳಿದೆ.
ಬಂಗಾಲಿ, ಒಡಿಯಾ, ಮರಾಠಿ ಭಾಷೆಗಳ ಬಗ್ಗೆ ಒಮ್ಮೆಯೂ ಚರ್ಚೆಯಾಗಿಲ್ಲ. ಕನ್ನಡ, ಛತ್ತೀಸಗಡಿ, ಇಂಗ್ಲಿಷ್, ಹಿಂದಿ, ತುಳು, ತೆಲುಗು, ತಮಿಳು, ಗುಜರಾತಿ, ಮಲೆಯಾಳಿ, ಸಂಸ್ಕೃತ, ಸಂತಾಲಿ, ಉರ್ದು ಭಾಷೆಗಳ ಬಗ್ಗೆ ಚರ್ಚೆಗಳು ನಡೆದಿವೆ.
ಆದರೆ ಸಂಗೀತ, ಸಂಸ್ಕೃತಿ, ಸಾಹಿತ್ಯ ಮತ್ತು ಅವುಗಳ ಬೆಳವಣಿಗೆಗಳ ಬಗ್ಗೆ ಒಮ್ಮೆಯೂ ಚರ್ಚೆಯಾಗಿಲ್ಲ. ಭಾಷೆಯ ಬಗ್ಗೆ ಪ್ರಸ್ತಾಪವಾದರೂ ಅವುಗಳ ನಿಜವಾದ ಸಮಸ್ಯೆಗಳ ಬಗ್ಗೆ ಪರಿಣಾಮಕಾರಿ ಚರ್ಚೆಯಾಗಿಲ್ಲ ಎಂದು ವರದಿ ಹೇಳಿದೆ.
ಕನ್ನಡದ ಬಗ್ಗೆ ಹಲವಾರು ಸದಸ್ಯರು ಅಧಿವೇಶನದಲ್ಲಿ ಪ್ರಶ್ನೆಯನ್ನು ಕೇಳಿದ್ದಾರೆ. ಅವುಗಳಲ್ಲಿ ಬಹುತೇಕ ಪ್ರಶ್ನೆಗಳು ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡುವುದರ ಕುರಿತಾಗಿಯೇ ಇದ್ದವು.
ಕನ್ನಡದ ಬಗ್ಗೆ ಬಿಜೆಪಿ ಸದಸ್ಯರು ಮಾತ್ರ ಪ್ರಶ್ನೆಯನ್ನು ಕೇಳಿದ್ದರು. ವಿಶ್ವನಾಥ ಕತ್ತಿ ಅವರು 4,
ಶಿವರಾಮ ಗೌಡ 3, ಪಿ.ಸಿ.ಗದ್ದಿಗೌಡರ 2, ಡಿ.ಬಿ.ಚಂದ್ರೇಗೌಡ, ನಳಿನ್‌ಕುಮಾರ್ ಕಟೀಲ್, ಜಿ.ಎಂ.ಸಿದ್ದೇಶ್ವರ, ಪ್ರಹ್ಲಾದ ಜೋಶಿ ತಲಾ ಒಂದು ಪ್ರಶ್ನೆಯನ್ನು ಕೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.