ಬೆಂಗಳೂರು: ಸರ್ಕಾರಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಿ.ಉಮೇಶ್ ಅವರು ಇಂಗ್ಲಿಷ್‌ನಲ್ಲಿ ಬರೆದ ಪತ್ರವನ್ನು ಓದದೇ ಹಿಂದಿರುಗಿಸಿರುವ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಪರಮೇಶ್ ಪಾಂಡೆ, ‘ಇಂಗ್ಲಿಷ್‌ನಲ್ಲಿ ಪತ್ರ ವ್ಯವಹಾರ ನಡೆಸಿದ್ದೇಕೆ’ ಎಂಬುದರ ಕುರಿತು ಸಮಜಾಯಿಷಿಯನ್ನೂ ಕೇಳಿದ್ದಾರೆ.
ಕನ್ನಡಿಗರೇ ಆಗಿರುವ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳ ಈ ಧೋರಣೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ‘ಮುಖ್ಯಮಂತ್ರಿ’ ಚಂದ್ರು ಅವರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ‘ಉಮೇಶ್ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಒತ್ತಾಯವನ್ನೂ ಮಾಡಿದ್ದಾರೆ.
‘ರಾಜ್ಯ ಸರ್ಕಾರದ ಎಲ್ಲ ಪತ್ರ ವ್ಯವಹಾರವನ್ನು ಸಂಪೂರ್ಣವಾಗಿ ಕನ್ನಡದಲ್ಲೇ ಮಾಡಬೇಕು’ ಎಂಬ ನಿಯಮ ಇದೆ. ಉಮೇಶ್ ಅವರು ಜನವರಿ 6ರಂದು ಪಾಂಡೆ ಅವರಿಗೆ ಇಂಗ್ಲಿಷ್‌ನಲ್ಲಿ ಪತ್ರ ಬರೆದು ತಮ್ಮ ನೇತೃತ್ವದಲ್ಲಿ ರಚಿಸಿರುವ ಸಮಿತಿಗಳ ಸಭೆ ನಿಯಮಿತವಾಗಿ ನಡೆಯುತ್ತಿಲ್ಲ ಎಂದು ದೂರಿದ್ದರು.
ಆ ಪತ್ರಕ್ಕೆ ಜ. 18ರಂದು ಪ್ರತಿಕ್ರಿಯಿಸಿರುವ ಮೂಲತಃ ಉತ್ತರ ಪ್ರದೇಶದ ಪಾಂಡೆ, ‘ನೀವು ಕಳುಹಿಸಿದ ಪತ್ರ ಇಂಗ್ಲಿಷ್‌ನಲ್ಲಿದೆ. ಕನ್ನಡದಲ್ಲೇ ವ್ಯವಹಾರ ನಡೆಸಬೇಕು ಎನ್ನುವುದು ನಿಮಗೆ ಗೊತ್ತಿದ್ದರೂ ಇಂಗ್ಲಿಷ್‌ನಲ್ಲಿ ಬರೆದಿದ್ದೇಕೆ ಎಂದು ಪ್ರಶ್ನಿಸಿದ್ದಾರೆ. ‘ನಿಮ್ಮ ಈ ವರ್ತನೆ ಕುರಿತಂತೆ ಸಮಜಾಯಿಷಿ ನೀಡಬೇಕು’ ಎಂದು ಸೂಚಿಸಿ, ಪತ್ರವನ್ನು ವಾಪಸು ಕಳುಹಿಸಿ ಕೊಟ್ಟಿದ್ದಾರೆ.
ಉಮೇಶ್ ಅವರ ವರ್ತನೆಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ‘ಮುಖ್ಯಮಂತ್ರಿ’ ಚಂದ್ರು ಖಂಡಿಸಿದ್ದಾರೆ. ‘ರಾಜ್ಯದಲ್ಲಿ ಕನ್ನಡವೇ ಆಡಳಿತ ಭಾಷೆಯಾಗಿದ್ದರೂ ಉಮೇಶ್ ಅವರು ಇಂಗ್ಲಿಷ್ ವ್ಯಾಮೋಹದಿಂದ ಹೊರಬಾರದೇ ಇರುವುದು ವಿಪರ್ಯಾಸದ ಸಂಗತಿ’ ಎಂದು ಕಿಡಿಕಾರಿದ್ದಾರೆ.
ಕನ್ನಡಿಗರ ಅಸಡ್ಡೆ: ‘ರಾಜ್ಯ ಸರ್ಕಾರದಲ್ಲಿ ಸೇವೆ ಸಲ್ಲಿಸುತ್ತಿರುವ ಅನ್ಯ ಭಾಷಿಕ ಐಎಎಸ್ ಅಧಿಕಾರಿಗಳು ಕನ್ನಡ ಅನುಷ್ಠಾನಗೊಳಿಸಲು ಬದ್ಧತೆ ತೋರುತ್ತಿದ್ದು, ಕನ್ನಡ ಭಾಷಿಕ ಅಧಿಕಾರಿಯಾದ ಉಮೇಶ್ ಅಸಡ್ಡೆ ತೋರಿದ್ದಾರೆ. ಅವರಿಗೆ ಇನ್ನೂ ಮನ ಪರಿವರ್ತನೆ ಆಗದಿರುವುದು ವಿಷಾದದ ವಿಚಾರ’ ಎಂದು ಹೇಳಿದ್ದಾರೆ.
‘ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹುದ್ದೆಯಲ್ಲಿದ್ದರೂ ಉಮೇಶ್ ಅವರು ಕನ್ನಡವನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡುತ್ತಿರುವುದು ನೋವು ತಂದಿದೆ’ ಎಂದಿರುವ ‘ಮುಖ್ಯಮಂತ್ರಿ’ ಚಂದ್ರು, ‘ಉಮೇಶ್ ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು’ ಎಂದು ಸಿದ್ದರಾಮಯ್ಯ ಅವರನ್ನುಒತ್ತಾಯಿಸಿದ್ದಾರೆ.
ಪಾಂಡೆಗೆ ಧನ್ಯವಾದ: ಉಮೇಶ್ ಅವರ ಇಂಗ್ಲಿಷ್ ಪತ್ರ ಓದದೇ ವಾಪಸ್ ಕಳಿಸಿರುವುದಕ್ಕೆ ‘ಮುಖ್ಯಮಂತ್ರಿ’ ಚಂದ್ರು ಅವರು ಪಾಂಡೆ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ. ‘ಪಾಂಡೆ ಕನ್ನಡ ಪ್ರೇಮವನ್ನೂ ಕರ್ತವ್ಯ ಪ್ರಜ್ಞೆಯನ್ನೂ ಮೆರೆದಿದ್ದಾರೆ’ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.