ADVERTISEMENT

ಕನ್ನಡ ಸಾಹಿತ್ಯ ಪರಿಷತ್ತು; ದತ್ತಿ ಸ್ಪರ್ಧೆಗಳ ಪ್ರಶಸ್ತಿಗಳು ಪ್ರಕಟ

​ಪ್ರಜಾವಾಣಿ ವಾರ್ತೆ
Published 8 ಜೂನ್ 2015, 19:30 IST
Last Updated 8 ಜೂನ್ 2015, 19:30 IST

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು 2014ನೇ ಸಾಲಿನ ವಿವಿಧ ದತ್ತಿ ಸ್ಪರ್ಧೆಗಳ ಪುಸ್ತಕ ಪ್ರಶಸ್ತಿಗಳನ್ನು ಪ್ರಕಟಿಸಿದೆ.
ಪರಿಷತ್ತಿನಲ್ಲಿ ಇತ್ತೀಚೆಗೆ ನಡೆದ ಪ್ರಶಸ್ತಿ ಆಯ್ಕೆ ಸಮಿತಿ ಸಭೆಯಲ್ಲಿ ವಿವಿಧ ದತ್ತಿ ಸ್ಪರ್ಧೆಗಳ ವಿಜೇತರ ಹೆಸರನ್ನು ಆಯ್ಕೆ ಮಾಡಲಾಗಿದೆ ಎಂದು  ಪ್ರಕಟಣೆ ತಿಳಿಸಿದೆ.

ಲೇಖಕ ಡಾ.ಎಸ್‌.ಡಿ.ಶೆಟ್ಟಿ ಅವರ ‘ಶ್ರೀ ಸ್ವಾದಿ ದಿಗಂಬರ ಜೈನ ಸಂಸ್ಥಾನ ಮಠ ಪರಿಚಯ’ ಕೃತಿಯು ಹೊಳಲ್ಕೆರೆ ಪದ್ಮಾವತಮ್ಮ ಶ್ರೀಪಾಲಶೆಟ್ಟಿ ಡಾ.ಮದನಕೇಸರಿ ಜೈನ್‌ ದತ್ತಿ ಪ್ರಶಸ್ತಿಗೆ ಭಾಜನವಾಗಿದೆ. ಈ ಪ್ರಶಸ್ತಿಯು ₹ 7,500 ನಗದು ಪುರಸ್ಕಾರ ಒಳಗೊಂಡಿದೆ.

ಕಾದಂಬರಿ ಪ್ರಕಾರಕ್ಕೆ ನೀಡುವ ವಸುದೇವ ಭೂಪಾಲಂ ದತ್ತಿ ಪ್ರಶಸ್ತಿಗೆ ಚೀಮನಹಳ್ಳಿ ರಮೇಶಬಾಬು ಅವರ ‘ಹದ’ ಹಾಗೂ ಬೀಳಗಿ ಪ್ರಥಮ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸವಿನೆನಪಿನ ದತ್ತಿ ಪ್ರಶಸ್ತಿಗೆ ಲಕ್ಷ್ಮಣ ಬಾದಾಮಿ ಅವರ ‘ಮನುಷ್ಯರು ಬೇಕಾಗಿದ್ದಾರೆ’ ಕೃತಿ ಆಯ್ಕೆಯಾಗಿವೆ. ಈ ಪ್ರಶಸ್ತಿಗಳು ತಲಾ ₹ 5,000 ನಗದು ಬಹುಮಾನ ಒಳಗೊಂಡಿವೆ.

ಸಣ್ಣಕತೆ ಪ್ರಕಾರಕ್ಕೆ ನೀಡುವ ವಸುದೇವ ಭೂಪಾಲಂ ದತ್ತಿ ಪ್ರಶಸ್ತಿಗೆ (₹ 3,000 ನಗದು)  ಟಿ.ಕೆ.ತ್ಯಾಗರಾಜ್‌ ಅವರ ‘ಭಾವಭಿತ್ತಿಯ ಚಿತ್ರಗಳು’ ಎಂಬ ಸಂಕಲನ, ಮಕ್ಕಳ ಸಾಹಿತ್ಯ ಕೃತಿಗೆ ನೀಡುವ ಅದೇ ಹೆಸರಿನ ಪ್ರಶಸ್ತಿಗೆ (₹ 2,000 ನಗದು) ಡಾ.ಟಿ.ಗೋವಿಂದರಾಜು ಅವರ ‘ಥೈ.. ತಕ.. ಥೈ!!’ ಹಾಗೂ ಅನುವಾದಿತ, ವೈಚಾರಿಕ ಲೇಖನಗಳಿಗೆ ನೀಡುವ ಅದೇ ಹೆಸರಿನ ಪ್ರಶಸ್ತಿಗೆ (₹ 2,000 ನಗದು) ಪಾರ್ವತಿ ಜಿ.ಐತಾಳ್‌ ಅವರ ‘ಉಪನಿಷತ್ ಚಿಂತನೆ’ ಕೃತಿ ಆಯ್ಕೆಯಾಗಿವೆ.

ಸಾರಂಗಿ ವೆಂಕಟರಾಮಯ್ಯ ಶ್ರೀನಿವಾಸರಾವ್‌ ದತ್ತಿ ಪ್ರಶಸ್ತಿ- ಹ.ಸ. ಬ್ಯಾಕೋಡ ಅವರ ‘ಆಪರೇಷನ್ ಆನೆಮಲೆ’ ಕೃತಿ, ಪಳಕಳ ಸೀತಾರಾಮಭಟ್ಟ ದತ್ತಿ ಪುರಸ್ಕಾರಕ್ಕೆ ಎ.ಕೆ.ರಾಮೇಶ್ವರ ಅವರ ‘ಬೆಳಗುತ್ತಿರುವ ಭಾರತ’ ಕೃತಿ ಆಯ್ಕೆಯಾಗಿವೆ. ಈ ಪ್ರಶಸ್ತಿಗಳು ತಲಾ ₹ 2000 ನಗದು ಬಹುಮಾನ ಒಳಗೊಂಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.