ಕುಮಟಾ (ಉ.ಕ ಜಿಲ್ಲೆ): ವಿದೇಶಿ ಬ್ಯಾಂಕುಗಳಲ್ಲಿ ಇರುವ ಕಪ್ಪು ಹಣವನ್ನು ವಾಪಸ್ ತರಲು ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ಶ್ವೇತಪತ್ರ ಹೊರಡಿಸುವಂತೆ ಆಗ್ರಹಿಸಿ ಚಳಿಗಾಲದ ಸಂಸತ್ ಅಧಿವೇಶನದಲ್ಲಿ ತಮ್ಮ ಪಕ್ಷ ಹೋರಾಟ ನಡೆಲಿದೆ ಎಂದು ಬಿಜೆಪಿ ನಾಯಕ ಎಲ್.ಕೆ.ಅಡ್ವಾಣಿ ಮಂಗಳವಾರ ಘೋಷಿಸಿದರು.
`ಜನ ಚೇತನ~ ಯಾತ್ರೆಯ ಅಂಗವಾಗಿ ಇಲ್ಲಿನ ಮಹಾತ್ಮಾ ಗಾಂಧಿ ಮೈದಾನದಲ್ಲಿ ಏರ್ಪಡಿಸಿದ್ದ ಬೃಹತ್ ಸಾರ್ವಜನಿಕ ಸಭೆಯಲ್ಲಿ ಅವರು ಕೇಂದ್ರ ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಪ್ರಧಾನಿ ಅಧ್ಯಕ್ಷತೆಯಲ್ಲಿ ಈಚೆಗೆ ನಡೆದ ರಾಜ್ಯಪಾಲರ ಸಭೆ ಕುರಿತು ಪ್ರಸ್ತಾಪಿಸಿದ ಅಡ್ವಾಣಿ `ರಾಜ್ಯಪಾಲರ ಸಭೆಯಲ್ಲಿ ಮಾತನಾಡಿರುವ ಪ್ರಧಾನಿ ಭ್ರಷ್ಟಾಚಾರದ ಕುರಿತು ಚಿಂತನೆ ನಡೆಸುವ ಕಾಲ ಈಗ ಬಂದಿದೆ ಎಂದಿದ್ದಾರೆ; ಅಂದರೆ ಇದುವರೆಗೆ ಆ ಕಾಲ ಬಂದಿರಲಿಲ್ಲವೇ~ ಎಂದು ವ್ಯಂಗ್ಯವಾಡಿದರು.
ವಿದೇಶಿ ಬ್ಯಾಂಕುಗಳಲ್ಲಿರುವ ಕಪ್ಪುಹಣವನ್ನು ಮರಳಿ ತರಲು ಕೇಂದ್ರ ಸರ್ಕಾರ ಮಾಡಿರುವ ಯತ್ನದ ಬಗ್ಗೆ ಶ್ವೇತಪತ್ರ ಹೊರಡಿಸಬೇಕು ಹಾಗೂ ಕಪ್ಪು ಹಣ ಇಟ್ಟವರ ಹೆಸರುಗಳನ್ನು ಬಹಿರಂಗಗೊಳಿಸಬೇಕು ಎಂಬ ಅಂಶಗಳೇ ಮುಂದಿನ ಅಧಿವೇಶನದ ಹೋರಾಟ ವಿಷಯಗಳು ಎಂದು ಅವರು ತಿಳಿಸಿದರು.
ಒಟ್ಟಿಗೆ ಸಾಧ್ವವಿಲ್ಲ: ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸರ್ಕಾರ ಮತ್ತು ಭ್ರಷ್ಟಾಚಾರ ಹೊಂದಿಕೊಂಡು ಹೋಗಲು ಸಾಧ್ಯವಿಲ್ಲ. ಹೋಗಬಾರದು. ಹೀಗೆ ಭ್ರಷ್ಟಾಚಾರದೊಂದಿಗೆ ಸರ್ಕಾರ ಹೊಂದಿಕೊಂಡರೆ ದೇಶ ಬಡವಾಗುತ್ತದೆ. ಈಗ ಆಗಿರುವುದೇ ಅದು ಎಂದು ವಿಶ್ಲೇಷಿಸಿದರು.
`ಹಾಗೆಯೇ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ವಂಶಪಾರಂಪರ‌್ಯ ಮತ್ತು ಜನತಂತ್ರ ಕೂಡ ಒಟ್ಟಿಗೆ ಸಾಗಬಾರದು. ಈ ದೇಶವನ್ನು ಈಗ ಆಳುತ್ತಿರುವ ಕಾಂಗ್ರೆಸ್ ಪಕ್ಷದಲ್ಲಿ ಇದೂ ನಡೆಯುತ್ತಿದೆ. ಕಾಂಗ್ರೆಸ್ ಸ್ವಾತಂತ್ರ್ಯದ ಉದ್ದೇಶವನ್ನು ಈಡೇರಿಸುವಲ್ಲಿ ವಿಫಲವಾಗಿದೆ. ಹೀಗಾದರೆ ನಾವು ಉದ್ಧಾರ ಆಗುವುದಿಲ್ಲ~ ಎಂದರು.
ಭ್ರಷ್ಟಾಚಾರ ತೊಲಗಿಸುತ್ತೇವೆ, ಕಪ್ಪು ಹಣ ಮರಳಿ ತರುತ್ತೇವೆ ಹಾಗೂ ಹೊಸ ಭಾರತ ಕಟ್ಟುತ್ತೇವೆ ಎಂಬ ಘೋಷಣೆಗಳನ್ನು ಅವರು ಜನರೊಂದಿಗೆ ಕೂಗಿದರು. ಆದರೆ ಕರ್ನಾಟಕದ ಭ್ರಷ್ಟಾಚಾರ ವಿಷಯವನ್ನು ಅವರು ಪ್ರಸ್ತಾಪಿಸಲಿಲ್ಲ.
ಕನ್ನಡಕ್ಕೆ ನಮನ: ರಾಜ್ಯೋತ್ಸವ ದಿನವಾಗಿದ್ದರಿಂದ, ವೇದಿಕೆಗೆ ಬರುವ ಮುನ್ನ ಮೈದಾನದಲ್ಲಿದ್ದ ಧ್ವಜಕಂಬದಲ್ಲಿ ಕನ್ನಡ ಧ್ವಜಾರೋಹಣ ಮಾಡಿದ ಅಡ್ವಾಣಿ, `ಕನ್ನಡದ ಬಂಧು-ಭಗಿನಿಯರಿಗೆ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು~ ಎಂದು ಕನ್ನಡದಲ್ಲಿ ಹೇಳಿ ನಂತರ ಹಿಂದಿಯಲ್ಲಿ ಭಾಷಣ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.