ADVERTISEMENT

ಕಬಿನಿ: ನಾಲೆಯ ಬದಲು ನದಿಗೆ ನೀರು

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2012, 18:40 IST
Last Updated 2 ಆಗಸ್ಟ್ 2012, 18:40 IST

ಮೈಸೂರು: ಸಾವಿರಾರು ಎಕರೆ ಭೂಮಿಗೆ ನೀರುಣಿಸುವ ಕಬಿನಿ ನಾಲೆಗೆ ನೀರು ಬಿಡದ ನೀರಾವರಿ ಇಲಾಖೆ ಕಪಿಲಾ ನದಿಗೆ ನೀರು ಹರಿಸಿರುವುದು ರೈತರಲ್ಲಿ ಆಕ್ರೋಶ ಉಂಟುಮಾಡಿದೆ.

ಜಿಲ್ಲೆಯಲ್ಲಿ ಬರ ಪರಿಸ್ಥಿತಿ ತಲೆದೂರಿದ್ದು, ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಬೆಳೆಗಳು ಹಾಳಾಗುತ್ತಿದ್ದು, ಮಳೆಗಾಗಿ ರೈತರು ಮುಗಿಲು ನೋಡುವ ಪರಿಸ್ಥಿತಿ ಉಂಟಾಗಿದೆ. ಕಬಿನಿ ಅಚ್ಚುಕಟ್ಟು ಪ್ರದೇಶದಲ್ಲಿ ಜನ, ಜನಾವಾರುಗಳಿಗೂ ಕುಡಿಯುವ ನೀರಿಗೆ ತತ್ವಾರವಾಗಿದೆ. ಜಿಲ್ಲೆಯ ಎಲ್ಲ ನಾಲೆಗಳಿಗೂ ನೀರು ಹರಿಸಬೇಕು ಎಂದು ರೈತರು ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದ್ದರು. ಈಗ ನಾಲೆಯ ಬದಲು ನದಿಗೆ ನೀರು ಬಿಡಲಾಗಿದೆ.
`ನದಿಗೆ ಬಿಡುವ ನೀರನ್ನೇ ನಾಲೆಗೆ ಹರಿಸಿದ್ದರೆ ಜಾನುವಾರುಗಳಿಗೆ ಕುಡಿಯಲಿಕ್ಕೆ ನೀರಾದರೂ ಲಭ್ಯವಾಗುತ್ತಿತ್ತು~ ಎಂದು ರೈತ ಮುಖಂಡ ಗುರುಲಿಂಗೇಗೌಡ, ಸಾಲುಂಡಿ ಜಯಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.

ಕಬಿನಿ ಹಾಗೂ ಹುಲ್ಲಳ್ಳಿ ನಾಲೆಯ ಭಾಗದ ರೈತರಿಗೆ ಕಳೆದ ಎರಡು ಬೆಳೆಗಳಿಗೆ ನೀರು ಬಿಟ್ಟಿಲ್ಲ.  ಮುಂಗಾರು ಕೈ ಕೊಟ್ಟ ಹಿನ್ನೆಲೆಯಲ್ಲಿ ಕೆರೆ, ಕಟ್ಟೆಗಳು ಒಣಗಿದ್ದು, ಜಾನುವಾರುಗಳನ್ನು ಸಕಾಲು ಸಾಧ್ಯವಾಗುತ್ತಿಲ್ಲ.

ಜಾನುವಾರುಗಳಿಗೆ ಮೇವಿಲ್ಲದೆ ರೈತರು ಅಕ್ಷರಶಃ ಪರದಾಡುತ್ತಿದ್ದಾರೆ.  ಕೆಲವು ರೈತರು ಪಟ್ಟಣಗಳಿಗೆ ವಲಸೆ ಹೋಗುತ್ತಿದ್ದು, ಅಲ್ಲಿಯೂ ಕೆಲಸ ಸಿಗದೆ ಹಿಂತಿರುಗಿತ್ತಿರುವುದು ಸಾಮಾನ್ಯವಾಗಿದೆ. `ಇಂತಹ ಪರಿಸ್ಥಿತಿಯಲ್ಲಿ ನಾಲೆಗೆ ನೀರು ಬಿಟ್ಟರೆ ನಮಗೆ ಉಪಯೋಗವಾಗುತ್ತದೆ. ಆದರೆ ನೀರಾವರಿ ಇಲಾಖೆ ಅಧಿಕಾರಿಗಳು ಮಳೆಯಾಗುವ ವರೆಗೆ ನೀರು ಬಿಡುವುದಿಲ್ಲ ಎನ್ನುತ್ತಿದ್ದಾರೆ. ನಮ್ಮ ಕಷ್ಟ ಯಾರಿಗೆ ಹೇಳಬೇಕು~ ಎಂದು ಅಳಲು ತೋಡಿಕೊಳ್ಳುತ್ತಾರೆ ರೈತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.