ADVERTISEMENT

ಕರಾವಳಿಗೂ ಅತಂತ್ರಕ್ಕೂ ಬಿಡದ ನಂಟು!

ಅತಂತ್ರ ಸ್ಥಿತಿ ಇದ್ದಾಗಲೆಲ್ಲ ಇಲ್ಲಿ ಬಿಜೆಪಿಯದ್ದೇ ಮುನ್ನಡೆ

​ಪ್ರಜಾವಾಣಿ ವಾರ್ತೆ
Published 16 ಮೇ 2018, 19:30 IST
Last Updated 16 ಮೇ 2018, 19:30 IST
ಕರಾವಳಿಗೂ ಅತಂತ್ರಕ್ಕೂ ಬಿಡದ ನಂಟು!
ಕರಾವಳಿಗೂ ಅತಂತ್ರಕ್ಕೂ ಬಿಡದ ನಂಟು!   

ಮಂಗಳೂರು: ಅತಂತ್ರ ವಿಧಾನಸಭೆಗೂ ಕರಾವಳಿಗೂ ಎಲ್ಲಿಲ್ಲದ ನಂಟು. ರಾಜ್ಯದಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾದ ಎಲ್ಲ ಸಂದರ್ಭಗಳಲ್ಲೂ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಮುನ್ನಡೆ ಸಾಧಿಸುತ್ತದೆ. ಮೂರನೇ ಬಾರಿ ಹೀಗಾಗಿದೆ!

1983ರಲ್ಲಿ ರಾಜ್ಯದಲ್ಲಿ ಅತಂತ್ರ ವಿಧಾನಸಭೆ ಅಸ್ತಿತ್ವಕ್ಕೆ ಬಂದಿತ್ತು. ಆಗ 95 ಸ್ಥಾನಗಳಲ್ಲಿ ಜನತಾ ಪಕ್ಷ, 82 ಸ್ಥಾನಗಳಲ್ಲಿ ಕಾಂಗ್ರೆಸ್ ಮತ್ತು 18 ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದವು. ಬಿಜೆಪಿಗೆ ಆಗ ಎಂಟು ಸ್ಥಾನಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಿಂದಲೇ ದೊರಕಿದ್ದವು.

ಸುಳ್ಯ ಮೀಸಲು ಕ್ಷೇತ್ರದಿಂದ ಬಾಕಿಲ ಹುಕ್ರಪ್ಪ, ಪುತ್ತೂರಿನಿಂದ ಕೆ.ರಾಮ ಭಟ್, ವಿಟ್ಲ ಕ್ಷೇತ್ರದಿಂದ ಎ.ರುಕ್ಮಯ್ಯ ಪೂಜಾರಿ, ಬೆಳ್ತಂಗಡಿಯಿಂದ ಕೆ.ವಸಂತ ಬಂಗೇರ, ಬಂಟ್ವಾಳದಿಂದ ಎನ್‌.ಶಿವ ರಾವ್, ಮಂಗಳೂರು ಕ್ಷೇತ್ರದಿಂದ ವಿ.ಧನಂಜಯ ಕುಮಾರ್, ಉಡುಪಿಯಿಂದ ಡಾ. ವಿ.ಎಸ್‌.ಆಚಾರ್ಯ ಮತ್ತು ಬ್ರಹ್ಮಾವರ ಕ್ಷೇತ್ರದಿಂದ ಬಿ.ಬಿ.ಶೆಟ್ಟಿ ಬಿಜೆಪಿ ಅಭ್ಯರ್ಥಿಗಳಾಗಿ ಗೆಲುವು ಸಾಧಿಸಿದ್ದರು.

ADVERTISEMENT

2004ರಲ್ಲಿ ಮತ್ತೊಮ್ಮೆ ರಾಜ್ಯವು ಅತಂತ್ರ ವಿಧಾನಸಭೆಗೆ ಸಾಕ್ಷಿಯಾಗಿತ್ತು. ಆಗ ಬಿಜೆಪಿ 79, ಕಾಂಗ್ರೆಸ್‌ 65 ಮತ್ತು ಜೆಡಿಎಸ್‌ 58 ಸ್ಥಾನ ಗಳಿಸಿದ್ದವು. ಆ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎಂಟು ಕ್ಷೇತ್ರಗಳ ಪೈಕಿ ಏಳು ಮತ್ತು ಉಡುಪಿ ಜಿಲ್ಲೆಯ ಆರು (ಕ್ಷೇತ್ರ ಪುನರ್ವಿಂಗಡಣೆ ಮುನ್ನ) ಕ್ಷೇತ್ರಗಳ ಪೈಕಿ ನಾಲ್ಕರಲ್ಲಿ ಬಿಜೆಪಿ ಜಯ ಗಳಿಸಿತ್ತು.

ಸುಳ್ಯ ಮೀಸಲು ಕ್ಷೇತ್ರದಿಂದ ಎಸ್‌.ಅಂಗಾರ, ಪುತ್ತೂರಿನಲ್ಲಿ ಶಕುಂತಳಾ ಟಿ. ಶೆಟ್ಟಿ, ವಿಟ್ಲದಲ್ಲಿ ಪದ್ಮನಾಭ ಕೊಟ್ಟಾರಿ, ಬೆಳ್ತಂಗಡಿಯಲ್ಲಿ ಕೆ.ಪ್ರಭಾಕರ ಬಂಗೇರ, ಬಂಟ್ವಾಳದಲ್ಲಿ ಬಿ.ನಾಗರಾಜ ಶೆಟ್ಟಿ, ಸುರತ್ಕಲ್‌ ಕ್ಷೇತ್ರದಲ್ಲಿ ಜೆ.ಕೃಷ್ಣ ಪಾಲೇಮಾರ್, ಕಾಪುವಿನಲ್ಲಿ ಲಾಲಾಜಿ ಆರ್. ಮೆಂಡನ್‌, ಉಡುಪಿಯಲ್ಲಿ ಕೆ.ರಘುಪತಿ ಭಟ್‌, ಕುಂದಾಪುರದಲ್ಲಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಮತ್ತು ಕಾರ್ಕಳದಲ್ಲಿ ವಿ.ಸುನಿಲ್‌ ಕುಮಾರ್ ಬಿಜೆಪಿಗೆ ಗೆಲುವು ತಂದುಕೊಟ್ಟಿದ್ದರು.

ಈ ಬಾರಿಯ ಚುನಾವಣೆಯಲ್ಲಿ ದಕ್ಷಿಣ ಕನ್ನಡದ ಎಂಟು ಕ್ಷೇತ್ರಗಳ ಪೈಕಿ ಏಳರಲ್ಲಿ ಬಿಜೆಪಿ ಗೆದ್ದಿದೆ. ಸುಳ್ಯದಲ್ಲಿ ಎಸ್‌.ಅಂಗಾರ, ಪುತ್ತೂರಿನಲ್ಲಿ ಸಂಜೀವ ಮಠಂದೂರು, ಬಂಟ್ವಾಳದಲ್ಲಿ ರಾಜೇಶ್ ನಾಯ್ಕ್ ಯು., ಬೆಳ್ತಂಗಡಿಯಲ್ಲಿ ಹರೀಶ್ ಪೂಂಜಾ, ಮಂಗಳೂರು ಉತ್ತರದಲ್ಲಿ ಡಾ. ವೈ.ಭರತ್ ಶೆಟ್ಟಿ, ಮಂಗಳೂರು ದಕ್ಷಿಣದಲ್ಲಿ ಡಿ.ವೇದವ್ಯಾಸ ಕಾಮತ್‌ ಮತ್ತು ಮೂಡುಬಿದಿರೆಯಲ್ಲಿ ಉಮಾನಾಥ ಎ. ಕೋಟ್ಯಾನ್‌ ಬಿಜೆಪಿ ಅಭ್ಯರ್ಥಿಗಳಾಗಿ ಗೆಲುವಿನ ಪತಾಕೆ ಹಾರಿಸಿದ್ದಾರೆ.

ಉಡುಪಿ ಜಿಲ್ಲೆಯ ಉಡುಪಿ ಕ್ಷೇತ್ರದಲ್ಲಿ ಕೆ.ರಘುಪತಿ ಭಟ್‌, ಕಾರ್ಕಳದಲ್ಲಿ ವಿ.ಸುನಿಲ್‌ ಕುಮಾರ್, ಕಾಪುವಿನಲ್ಲಿ ಲಾಲಾಜಿ ಆರ್. ಮೆಂಡನ್, ಕುಂದಾಪುರದಲ್ಲಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಮತ್ತು ಬೈಂದೂರಿನಲ್ಲಿ ಸುಕುಮಾರ ಶೆಟ್ಟಿ ಬಿಜೆಪಿಗೆ ಗೆಲುವು ದಕ್ಕಿಸಿಕೊಟ್ಟಿದ್ದಾರೆ.

ಈ ಚುನಾವಣೆಯಲ್ಲಿ ಎರಡೂ ಜಿಲ್ಲೆಗಳ 13 ಕ್ಷೇತ್ರಗಳ ಪೈಕಿ 12ರಲ್ಲಿ ಗೆಲ್ಲುವ ಮೂಲಕ ಬಿಜೆಪಿ ಭಾರೀ ಮುನ್ನಡೆ ಸಾಧಿಸಿದೆ. ಈ ಬಾರಿಯೂ ರಾಜ್ಯದಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಗಿದೆ. 2008ರಲ್ಲಿ ಬಿಜೆಪಿ ಬಹುಮತ ಪಡೆದಿದ್ದಾಗ ಎರಡೂ ಜಿಲ್ಲೆಗಳಲ್ಲಿ ತಲಾ ನಾಲ್ಕು ಕ್ಷೇತ್ರಗಳಲ್ಲಿ ಆ ಪಕ್ಷಕ್ಕೆ ಗೆಲುವು ದೊರಕಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.