ADVERTISEMENT

ಕಲುಷಿತ ನೀರು ಸೇವನೆ: 80 ಜನ ಅಸ್ವಸ್ಥ

​ಪ್ರಜಾವಾಣಿ ವಾರ್ತೆ
Published 24 ಜೂನ್ 2012, 19:30 IST
Last Updated 24 ಜೂನ್ 2012, 19:30 IST
ಕಲುಷಿತ ನೀರು ಸೇವನೆ: 80 ಜನ ಅಸ್ವಸ್ಥ
ಕಲುಷಿತ ನೀರು ಸೇವನೆ: 80 ಜನ ಅಸ್ವಸ್ಥ   

ಬೆಳಗಾವಿ: ತಾಲ್ಲೂಕಿನ ಸಾಂಬ್ರಾ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ 80ಕ್ಕೂ ಹೆಚ್ಚು ಜನರು ಕಳೆದ 24 ಗಂಟೆಗಳಲ್ಲಿ ಅಸ್ವಸ್ಥಗೊಂಡಿರುವ ಘಟನೆ ನಡೆದಿದೆ.ಅಸ್ವಸ್ಥಗೊಂಡವರ ಪೈಕಿ ವಾಂತಿ-ಭೇದಿಯಿಂದ ಬಳಲುತ್ತಿರುವ 22 ಜನರು ಇಲ್ಲಿನ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಾಗ್ದ್ದಿದಾರೆ. ಮತ್ತೆ ಕೆಲವರು ಹೊರ ರೋಗಿ ವಿಭಾಗದಲ್ಲಿ ಔಷಧ ಪಡೆದುಕೊಂಡು ಹೋಗಿದ್ದಾರೆ.

ಗ್ರಾಮದ ಕೊಳವೆ ಬಾವಿ ಹಾಗೂ ಓವರ್ ಹೆಡ್ ಟ್ಯಾಂಕ್ ಕಲುಷಿತಗೊಂಡಿರುವುದರಿಂದ ಇದರ ನೀರನ್ನು ಸೇವಿಸಿದ ಪರಿಣಾಮ ಶನಿವಾರದಿಂದ ಗ್ರಾಮದ ಜನರಲ್ಲಿ ವಾಂತಿ-ಭೇದಿ ಕಾಣಿಸಿಕೊಂಡಿದೆ. ನೋಡ ನೋಡುತ್ತಿದ್ದಂತೆ ಗ್ರಾಮದಲ್ಲಿ  80ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದಾರೆ.

ಕೆಲವರು ಸುತ್ತಮುತ್ತಲಿನ ಖಾಸಗಿ ಆಸ್ಪತ್ರೆಗಳಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದುಕೊಂಡಿದ್ದಾರೆ. ತೀವ್ರವಾಗಿ ವಾಂತಿ-ಭೇದಿಯಿಂದ ಬಳಲುತ್ತಿದ್ದ ಮಹಿಳೆಯರು, ಮಕ್ಕಳು ಸೇರಿದಂತೆ 22 ಜನರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

`ಸಾಂಬ್ರಾ ಗ್ರಾಮದಲ್ಲಿ ಕುಡಿಯುವ ನೀರು ಪೂರೈಸುತ್ತಿದ್ದ ಕೊಳವೆಬಾವಿ ಕಲುಷಿತಗೊಂಡಿದೆ. ಇದರ ನೀರನ್ನು ಕುಡಿದ ಗ್ರಾಮದ ಜನರು ಅಸ್ವಸ್ಥಗೊಂಡಿದ್ದಾರೆ.ತಕ್ಷಣವೇ ಆರೋಗ್ಯ ಇಲಾಖೆಯ ವೈದ್ಯರ ತಂಡವು ಗ್ರಾಮಕ್ಕೆ ಧಾವಿಸಿ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ತೀವ್ರ ವಾಂತಿ-ಭೇದಿಯಿಂದ ಬಳಲುತ್ತಿದ್ದವರಿಗೆ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ~ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಡಿ.ಸಿ. ಮುನ್ನೋಳಿ `ಪ್ರಜಾವಾಣಿ~ಗೆ ತಿಳಿಸಿದರು.

`ಗ್ರಾಮದಲ್ಲಿ ಕುಡಿಯುವ ನೀರಿಗೆ ಪರ್ಯಾಯ ವ್ಯವಸ್ಥೆ ಮಾಡುವಂತೆ ಗ್ರಾಮ ಪಂಚಾಯಿತಿಗೆ ಸೂಚಿಸಲಾಗಿದೆ. ಕಲುಷಿತಗೊಂಡಿರುವ ಕೊಳವೆಬಾವಿ ಹಾಗೂ ಓವರ್‌ಹೆಡ್ ಟ್ಯಾಂಕ್ ಶುದ್ಧಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು~ ಎಂದು ಅವರು ತಿಳಿಸಿದರು.

24 ಮಕ್ಕಳು ಅಸ್ವಸ್ಥ: ಸವದತ್ತಿ ತಾಲ್ಲೂಕಿನ ಚಚಡಿ ಗ್ರಾಮದಲ್ಲಿ ವಿಷಕಾರಿ ಕಾಯಿ ಸೇವಿಸಿದ  24 ಶಾಲಾ ಮಕ್ಕಳು ಅಸ್ವಸ್ಥಗೊಂಡ ಘಟನೆ ಶನಿವಾರ ನಡೆದಿದೆ.ಚಚಡಿ ಗ್ರಾಮದ ದೇವಸ್ಥಾನದ ಬಳಿ ಸಂಜೆ ಆಟವಾಡುತ್ತಿದ್ದ ವೇಳೆ ಶೇಂಗಾದಂತೆ ಕಾಣುತ್ತಿದ್ದ ಜತ್ರೋಟ ಕಾಯಿಯನ್ನು ಮಕ್ಕಳು ಸೇವಿಸಿದ್ದಾರೆ. ಇದರಿಂದಾಗಿ ಮಕ್ಕಳಲ್ಲಿ ವಾಂತಿ-ಭೇದಿ ಕಾಣಿಸಿಕೊಂಡಿದೆ.

ಬೈಲಹೊಂಗಲ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಬಳಿಕ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.