ADVERTISEMENT

ಕಲ್ಲಿದ್ದಲು ಪೂರೈಕೆ ಸುಗಮ

​ಪ್ರಜಾವಾಣಿ ವಾರ್ತೆ
Published 4 ಜನವರಿ 2012, 19:30 IST
Last Updated 4 ಜನವರಿ 2012, 19:30 IST
ಕಲ್ಲಿದ್ದಲು ಪೂರೈಕೆ ಸುಗಮ
ಕಲ್ಲಿದ್ದಲು ಪೂರೈಕೆ ಸುಗಮ   

ರಾಯಚೂರು: ಒಡಿಶಾದ ಮಹಾನದಿ ಕಲ್ಲಿದ್ದಲು ಗಣಿ ಇರುವ ಪ್ರದೇಶದಲ್ಲಿ ಮಳೆಯಾಗಿ ಕಲ್ಲಿದ್ದಲು ಉತ್ಪಾದನೆ ಕುಸಿತ ಆಗಿದ್ದರಿಂದ ಆರ್‌ಟಿಪಿಎಸ್‌ಗೆ ಕಲ್ಲಿದ್ದಲು ಪೂರೈಕೆಗೆ ಸಮಸ್ಯೆಯಾಗಿತ್ತು. ಈಗ ಕ್ರಮೇಣ ಕಲ್ಲಿದ್ದಲು ಪೂರೈಕೆ ಆಗುತ್ತಿದ್ದು ಸ್ಥಗಿತಗೊಳಿಸಿದ್ದ ಆರ್‌ಟಿಪಿಎಸ್‌ನ 2 ಮತ್ತು 8ನೇ ಘಟಕಗಳಲ್ಲಿ 2ನೇ ಘಟಕವನ್ನು ಮಂಗಳವಾರ ಆರಂಭಿಸಲಾಗಿದೆ ಎಂದು ಕರ್ನಾಟಕ ವಿದ್ಯುತ್ ನಿಗಮದ ವ್ಯವಸ್ಥಾಪಕ ನಿರ್ದೇಶಕ ಯೋಗೇಂದ್ರ ತ್ರಿಪಾಠಿ ತಿಳಿಸಿದರು.

ಬುಧವಾರ ಸಮೀಪದ ಶಕ್ತಿನಗರದಲ್ಲಿರುವ ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರ (ಆರ್‌ಟಿಪಿಎಸ್) ಭೇಟಿಗೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಮಹಾನದಿ ಕಲ್ಲಿದ್ದಲು ಗಣಿ ಇರುವ ಪ್ರದೇಶಲ್ಲಿ ಸತತ ಮೂರು ತಿಂಗಳು ಮಳೆ ಆಗಿದೆ. ಇದು ಕಲ್ಲಿದ್ದಲು ಉತ್ಪಾದನೆಯಲ್ಲಿ ಕುಸಿತ ಕಾಣಲು ಕಾರಣವಾಗಿದೆ. ಈಗ ಪರಿಸ್ಥಿತಿ ಸುಧಾರಿಸಿದೆ ಎಂದು ಹೇಳಿದರು.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶೇ 30ರಷ್ಟು ಹೆಚ್ಚು ವಿದ್ಯುತ್ ಉತ್ಪಾದನೆ ಆರ್‌ಟಿಪಿಎಸ್‌ನಿಂದ ಆಗಿದೆ.
 
ಆರ್‌ಟಿಪಿಎಸ್‌ನ 1 ಮತ್ತು 2 ನೇ ಘಟಕಗಳು ಹಳೆಯದಾಗಿವೆ. ಇವುಗಳ ದುರಸ್ತಿ ಕಾರ್ಯ ಕೈಗೊಂಡರೆ ಪೂರ್ಣಗೊಳ್ಳಲು ಕನಿಷ್ಠ 9ರಿಂದ 12 ತಿಂಗಳು ಬೇಕು. ಸದ್ಯ ಎರಡು ಘಟಕದಿಂದ 420  ಮೆಗಾವಾಟ್ ವಿದ್ಯುತ್ ಉತ್ಪಾದನೆ ಆಗುತ್ತದೆ.
 
ಈಗ ವಿದ್ಯುತ್ ಸಮಸ್ಯೆ ರಾಜ್ಯ ಎದುರಿಸುತ್ತಿದೆ. ಈ ಸ್ಥಿತಿಯಲ್ಲಿ ದುರಸ್ತಿ ಕಾರ್ಯ ಕೈಗೊಂಡರೆ ತೊಂದರೆ ಆಗಲಿದೆ. ಮುಂಬರುವ ದಿನಗಳಲ್ಲಿ ಪ್ಯಾಕೇಜ್ ರೂಪಿಸಿ ಹಂತ ಹಂತವಾಗಿ ದುರಸ್ತಿ ಕಾರ್ಯ ಕೈಗೊಳ್ಳಲಾಗುವುದು ಎಂದು ವಿವರಿಸಿದರು.

ಸೆಪ್ಟೆಂಬರ್- ಅಕ್ಟೋಬರ್ ತಿಂಗಳಲ್ಲಿ ಸಿಂಗರೇಣಿ ಕಲ್ಲಿದ್ದಲು ಗಣಿ ಕಾರ್ಮಿಕರು ತೆಲಂಗಾಣ ಹೋರಾಟಕ್ಕೆ ಬೆಂಬಲಿಸಿ ಪ್ರತಿಭಟನೆ ನಡೆಸಿದ್ದರಿಂದ ಸುಮಾರು ಒಂದುವರೆ ತಿಂಗಳು ಕಲ್ಲಿದ್ದಲು ಕೊರತೆ ಎದುರಿಸಬೇಕಾಯಿತು. ಈಗ ಆ ಗಣಿಯಿಂದ ಕಲ್ಲಿದ್ದಲು ಪೂರೈಕೆ ಆಗುತ್ತಿದೆ. 

ಕಲ್ಲಿದ್ದಲು ಗಣಿ ಕಂಪೆನಿಗಳೊಂದಿಗೆ ಮಾಡಿಕೊಂಡ ಒಪ್ಪಂದ ಪ್ರಕಾರ ವೆಸ್ಟ್ ಕೋಲ್ ಮೈನಿಂಗ್( ಡಬ್ಲ್ಯುಸಿಎಲ್) ಕಂಪೆನಿಯಿಂದ ಶೇ 100 ರಷ್ಟು, ಮಹಾನದಿ ಕಲ್ಲಿದ್ದಲು ಗಣಿ (ಎಂಸಿಎಲ್) ಕಂಪೆನಿಯಿಂದ ಶೇ 64ರಷ್ಟು ಕಲ್ಲಿದ್ದಲು ಪೂರೈಕೆ ಆಗಿದೆ. ಆದರೆ, ಸಿಂಗರೇಣಿ ಕಲ್ಲಿದ್ದಲು ಗಣಿ (ಎಸ್‌ಸಿಎಲ್)ಯಿಂದ ಒಪ್ಪಂದದ ಪ್ರಕಾರ ಕಲ್ಲಿದ್ದಲು ಪೂರೈಕೆ ಆಗಿಲ್ಲ ಎಂದು ಹೇಳಿದರು.

ಯರಮರಸ್ ಶಾಖೋತ್ಪನ್ನ ವಿದ್ಯುತ್ ಸ್ಥಾವರ (ವೈಟಿಪಿಎಸ್) ನಿರ್ಮಾಣ ಕಾರ್ಯ ಶೀಘ್ರ ಆರಂಭಗೊಳ್ಳಲಿದೆ. ಇನ್ನೂ ಸ್ವಲ್ಪ ಭೂಮಿಯ ಅಗತ್ಯ ಇದೆ. 2014ರ ಹೊತ್ತಿಗೆ ವಿದ್ಯುತ್ ಉತ್ಪಾದನೆ ಆರಂಭಿಸುವ ಉದ್ದೇಶವಿದೆ.

ಸುರಕ್ಷತಾ ಕ್ರಮಗಳು, ತಾಂತ್ರಿಕ ಮುನ್ನೆಚ್ಚರಿಕೆ ಕ್ರಮಗಳು ಸೇರಿದಂತೆ ಹಲವು ಸಂಗತಿಗಳ ಬಗ್ಗೆ ಬಿಎಚ್‌ಇಎಲ್ ಕಂಪೆನಿಯೊಂದಿಗೆ ಚರ್ಚೆ ನಡೆಸಲಾಗುತ್ತಿದೆ. ಯಾಪಲದಿನ್ನಿ ಹತ್ತಿರ ನಿರ್ಮಿಸಿದ ಸೋಲಾರ ಘಟಕವನ್ನು ಶೀಘ್ರ ಆರಂಭಿಸಲಾಗುವುದು ಎಂದು ತಿಳಿಸಿದರು.

ಹಣದ ಕೊರತೆ ಇಲ್ಲ: ಕರ್ನಾಟಕ ವಿದ್ಯುತ್ ನಿಗಮಕ್ಕೆ ಯಾವುದೇ ರೀತಿ ಹಣದ ಕೊರತೆ ಇಲ್ಲ. ಆರ್‌ಟಿಪಿಎಸ್‌ಗೆ  ಕಲ್ಲಿದ್ದಲು ಕೊರತೆ ಸಮಸ್ಯೆ ಆಗಲು ಸರ್ಕಾರ ಕಲ್ಲಿದ್ದಲು ಗಣಿ ಕಂಪೆನಿಗಳಿಗೆ ಹಣ ಪಾವತಿಸದೇ ಇರುವುದೇ ಕಾರಣ ಎಂಬುದು ಸುಳ್ಳು. ಕಲ್ಲಿದ್ದಲು ಖರೀದಿಗೆ ಹಣದ ಕೊರತೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಕರ್ನಾಟಕ ವಿದ್ಯುತ್ ನಿಗಮಕ್ಕೆ(ಕೆಪಿಸಿಗೆ) ಕರ್ನಾಟಕ ವಿದ್ಯುತ್‌ಚ್ಛಕ್ತಿ ಸರಬರಾಜು ನಿಗಮ (ಕೆಪಿಟಿಸಿಎಲ್) 6 ಸಾವಿರ ಕೋಟಿ ರೂಪಾಯಿ ಬಾಕಿ ಇದೆ. ಇನ್ನೂ ಪಾವತಿ ಆಗಿಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.