ADVERTISEMENT

ಕಳಂಕಿತರಿಗೂ ‘ರತ್ನಗಂಬಳಿ’!

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2018, 19:30 IST
Last Updated 17 ಏಪ್ರಿಲ್ 2018, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಭ್ರಷ್ಟಾಚಾರ ರಹಿತ ಹಾಗೂ ಪಾರದರ್ಶಕ ಆಡಳಿತ ನೀಡುವುದಾಗಿ ಪ್ರತಿಪಾದಿಸುತ್ತಿರುವ ಮೂರೂ ರಾಜಕೀಯ ಪಕ್ಷಗಳು ಕಳಂಕ ಎದುರಿಸುತ್ತಿರುವ ಕೆಲವರಿಗೆ ವಿಧಾನಸಭೆ ಚುನಾವಣೆಯಲ್ಲಿ ರತ್ನಗಂಬಳಿ ಹಾಸಿವೆ.

ಚುನಾವಣೆಯಲ್ಲಿ ಈ ಪಕ್ಷಗಳ ನೇತೃತ್ವ ವಹಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಮತ್ತು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಕೂಡ ಅಕ್ರಮ ಡಿನೋಟಿಫಿಕೇಶನ್‌ ಆರೋಪಕ್ಕೆ ಗುರಿಯಾಗಿ ವಿಚಾರಣೆ ಎದುರಿಸಿದವರೇ.

ಕಾಂಗ್ರೆಸ್‌ ಮತ್ತು ಬಿಜೆಪಿ ಈಗಾಗಲೇ ಪ್ರಕಟಿಸಿದ ಪಟ್ಟಿಯಲ್ಲಿ, ಕಳಂಕದ ಆರೋಪಕ್ಕೆ ಗುರಿಯಾದ ಡಜನ್‌ಗೂ ಹೆಚ್ಚು ಅಭ್ಯರ್ಥಿಗಳಿದ್ದಾರೆ. ಗೆಲುವು ಒಂದೇ ಮಾನದಂಡವಾಗಿಟ್ಟು ಟಿಕೆಟ್‌ ಹಂಚಿಕೆ ಮಾಡಲಾಗಿದೆ ಎಂದು ಈ ಪಕ್ಷಗಳ ನಾಯಕರು ಈಗ ಸಮರ್ಥನೆ ನೀಡುತ್ತಾರೆ. ಗಂಭೀರ ಆರೋಪಗಳನ್ನು ಎದುರಿಸುತ್ತಿರುವ ಡಿ.ಕೆ. ಶಿವಕುಮಾರ್‌ (ಕನಕಪುರ), ಕೆ.ಜೆ. ಜಾರ್ಜ್‌ (ಸರ್ವಜ್ಞ ನಗರ), ಸಂತೋಷ್‌ ಲಾಡ್‌ (ಕಲಘಟಗಿ), ಅನಿಲ್‌ ಲಾಡ್‌ (ಬಳ್ಳಾರಿ ನಗರ), ಆನಂದ್‌ ಸಿಂಗ್‌ (ವಿಜಯನಗರ) ಮತ್ತು ಬಿ. ನಾಗೇಂದ್ರ (ಬಳ್ಳಾರಿ) ಕಾಂಗ್ರೆಸ್‌ ಅಭ್ಯರ್ಥಿ ಪಟ್ಟಿಯಲ್ಲಿದ್ದಾರೆ. ಈ ಪೈಕಿ, ಸಂತೋಷ್‌ ಲಾಡ್‌, ಅನಿಲ್‌ ಲಾಡ್‌, ನಾಗೇಂದ್ರ ಮತ್ತು ಆನಂದ್‌ ಸಿಂಗ್‌ ಅಕ್ರಮ ಗಣಿಗಾರಿಕೆ ಆರೋಪ ಎದುರಿಸುತ್ತಿದ್ದಾರೆ.

ADVERTISEMENT

ಕಮಲ ಪಕ್ಷದ ಅಭ್ಯರ್ಥಿ ಪಟ್ಟಿಯಲ್ಲೂ ಸಾಕಷ್ಟು ಸಂಖ್ಯೆಯಲ್ಲಿ ಕಳಂಕಿತರಿದ್ದಾರೆ. ಈ ಪೈಕಿ ಕಟ್ಟಾ ಸುಬ್ರಹ್ಮಣ್ಯ ನಾಯ್ಡು (ಶಿವಾಜಿನಗರ), ಎಸ್‌.ಎನ್‌. ಕೃಷ್ಣಯ್ಯ ಶೆಟ್ಟಿ (ಮಾಲೂರು), ಮುರುಗೇಶ ನಿರಾಣಿ (ಬೀಳಗಿ), ಹರತಾಳು ಹಾಲಪ್ಪ (ಸಾಗರ) ಮತ್ತು ಎಂ.ಪಿ. ರೇಣುಕಾಚಾರ್ಯ (ಹೊನ್ನಾಳಿ) ಪ್ರಮುಖರು. ಅಕ್ರಮ ಡಿನೋಟಿಫಿಕೇಶನ್‌ ಹಾಗೂ ಗಂಭೀರ ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಕಟ್ಟಾ ಹಾಗೂ ಶೆಟ್ಟಿ ಅವರು ಲೋಕಾಯುಕ್ತದಿಂದ ವಿಚಾರಣೆಗೆ ಒಳಗಾಗಿದ್ದರು. ಅಲ್ಲದೆ, ಜೈಲುವಾಸ ಅನುಭವಿಸಿದ್ದರು. ಬಿಜೆಪಿ ಆಡಳಿತದ ಅವಧಿಯಲ್ಲಿ ನಡೆದ ಅಕ್ರಮ ಡಿನೋಟಿಫಿಕೇಶನ್‌ ಪ್ರಕರಣದಲ್ಲಿ ನಿರಾಣಿ ವಿರುದ್ಧ ಆರೋಪಗಳಿವೆ.

ಗಣಿ ಅಕ್ರಮದ ಬಗ್ಗೆ ತನಿಖೆ ನಡೆಸಿದ್ದ ಲೋಕಾಯುಕ್ತ ವರದಿಯಲ್ಲಿ ಸುರೇಶ ಬಾಬು (ಕಂಪ್ಲಿ) ಹೆಸರಿತ್ತು. ಗಣಿ ಅಕ್ರಮದ ಆರೋಪದಲ್ಲಿ ಜೈಲು ಸೇರಿದ್ದ ಜಿ. ಜನಾರ್ದನ ರೆಡ್ಡಿ ಅವರಿಗೆ ಜಾಮೀನು ಕೊಡಿಸಲು ನ್ಯಾಯಮೂರ್ತಿಗಳಿಗೆ ಲಂಚ ನೀಡಿದ ಪ್ರಕರಣದಲ್ಲಿ ಜಿ. ಸೋಮಶೇಖರ ರೆಡ್ಡಿ (ಬಳ್ಳಾರಿ ನಗರ) ಆರೋಪಿಯಾಗಿದ್ದರು.

ಜೆಡಿಎಸ್‌ನ ಜಿ.ಟಿ. ದೇವೇಗೌಡ (ಚಾಮುಂಡೇಶ್ವರಿ), ಕೆ. ಗೋಪಾಲಯ್ಯ (ಮಹಾಲಕ್ಷ್ಮಿ ಲೇಔಟ್‌), ಮಂಜುನಾಥ ಗೌಡ (ತೀರ್ಥಹಳ್ಳಿ) ಭ್ರಷ್ಟಾಚಾರ ಮತ್ತು ಗಂಭೀರ ಕ್ರಿಮಿನಲ್‌ ಪ್ರಕರಣದ ಆರೋಪ ಎದುರಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.