ADVERTISEMENT

ಕವಿಯ ಮನ ಅರಿಯುವುದು ಮುಖ್ಯ: ಶ್ಯಾಮಲಾ ಜಿ. ಭಾವೆ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2012, 19:30 IST
Last Updated 12 ಫೆಬ್ರುವರಿ 2012, 19:30 IST
ಕವಿಯ ಮನ ಅರಿಯುವುದು ಮುಖ್ಯ: ಶ್ಯಾಮಲಾ ಜಿ. ಭಾವೆ
ಕವಿಯ ಮನ ಅರಿಯುವುದು ಮುಖ್ಯ: ಶ್ಯಾಮಲಾ ಜಿ. ಭಾವೆ   

ದಾವಣಗೆರೆ: ಸುಗಮ ಸಂಗೀತದಲ್ಲಿ ಕಾವ್ಯ-ಭಾವಕ್ಕೆ ಅಗ್ರ ಸ್ಥಾನವಿದ್ದು, ಕವನ ಗಾಯನವಾಗಬೇಕಾದರೆ ಸಂಗೀತಗಾರರು ಕವಿಯ ಮನ ಹಾಗೂ ಕಾವ್ಯದ ವಿಶಿಷ್ಟ ಸ್ವರೂಪವನ್ನು ಅರಿತುಕೊಳ್ಳುವ ಪ್ರಯತ್ನ ಮಾಡಬೇಕು ಎಂದು ಉಭಯಗಾನ ವಿದುಷಿ ಡಾ.ಶ್ಯಾಮಲಾ ಜಿ. ಭಾವೆ ಕಿವಿಮಾತು ಹೇಳಿದರು.

ಕರ್ನಾಟಕ ಸುಗಮ ಸಂಗೀತ ಪರಿಷತ್ತು ಹಾಗೂ ಜಿಲ್ಲಾಡಳಿತದ ವತಿಯಿಂದ ಭಾನುವಾರ ನಗರದಲ್ಲಿ ಹಮ್ಮಿಕೊಂಡಿದ್ದ 9ನೇ ಸುಗಮ ಸಂಗೀತ ಸಮ್ಮೇಳನ `ಗೀತೋತ್ಸವ-2012~ದಲ್ಲಿ ಅಧ್ಯಕ್ಷೀಯ ನುಡಿಯಲ್ಲಿ ತಮ್ಮ ಅಭಿಪ್ರಾಯ ಬಿಚ್ಚಿಟ್ಟರು.

ಸುಗಮ ಸಂಗೀತದ ಗಾಯಕರು ಇಂದು ಧ್ವನಿದಾನದ ಗುಣಮಟ್ಟದಲ್ಲಿ ಬಹಳಷ್ಟು ಸಾಧಿಸಬೇಕಿದೆ. ಶಾಸ್ತ್ರೀಯ ಸಂಗೀತ ಕಲಿಯದಿದ್ದರೂ ಶಾಸ್ತ್ರೀಯ ಪರಂಪರೆಯ ಮುಖ್ಯ ಭಾಗವಾಗಿರುವ ಸ್ವರ, ಲಯ, ತಾಳಗಳ ಅಭ್ಯಾಸ, ರಾಗ-ಭಾವಗಳ ಅರಿವು, ಧ್ವನಿ ಸಂವರ್ಧನೆಯ ಕಲ್ಪನೆ ಹಾಗೂ ಶ್ರವಣ-ಮನನ ಪ್ರಕ್ರಿಯೆ ಬೇಕು. ಸಂಗೀತ ಸುಗಮವಾಗಲು ಇದೆಲ್ಲ ಬೇಕು. ಗಾಯನದಲ್ಲಿ ವಾದ್ಯವೃಂದದ ಅಬ್ಬರ ಹೆಚ್ಚಾಗದಂತೆ ಎಚ್ಚರ ವಹಿಸಬೇಕೆಂದು ಸಲಹೆ ನೀಡಿದರು.

ಕನ್ನಡ ಸುಗಮ ಸಂಗೀತಕ್ಕೆ 6 ದಶಕ ಸಂದಿದೆ. 60 ವರ್ಷಗಳಲ್ಲಿ ಸುಗಮ ಸಂಗೀತದ ಸೊಂಪಾದ ಬೆಳೆ ತೆಗೆಯಲಾಗಿದೆ. ಕನ್ನಡದ ಕವಿಗಳ ಮಹತ್ತರವಾದ ಪರಂಪರೆ ಕನ್ನಡ ಸಂಗೀತಗಾರರಿಗೆ ದೊಡ್ಡ ಭಂಡಾರವನ್ನೇ ಕೊಟ್ಟಿದೆ. ಕಾವ್ಯದ ಪ್ರಮಾಣದ ದೃಷ್ಟಿಯಲ್ಲೂ ಅದು ಮಹಾ ಸಾಗರವಾಗಿದೆ. ಆದರೆ, ಈ ಕವಿತೆಗಳು ಸುಗಮ ಸಂಗೀತವಾಗಿ ಹೊರಹೊಮ್ಮಬೇಕಾದರೆ ಇನ್ನಷ್ಟು ದೂರ ಸಾಗಬೇಕಿದೆ ಎಂದರು.

ಹಿರಿಯ ಕವಿ ಚನ್ನವೀರ ಕಣವಿ ಸಮ್ಮೇಳನ ಉದ್ಘಾಟಿಸಿದರು. ಪರಿಷತ್ ಅಧ್ಯಕ್ಷ ವೈ.ಕೆ. ಮುದ್ದುಕೃಷ್ಣ, ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ, ಸಾಹಿತಿ ಚಂದ್ರಶೇಖರ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.