ADVERTISEMENT

ಕಸಾಪ ಕಡೆಗಣಿಸಿಲ್ಲ: ಕನ್ನಡ ಅಭಿವೃದ್ಧಿಗೆ ಬದ್ಧ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2013, 19:30 IST
Last Updated 17 ಡಿಸೆಂಬರ್ 2013, 19:30 IST

ಬೆಂಗಳೂರು: ‘ಕನ್ನಡ ಸಾಹಿತ್ಯ ಪರಿ­ಷತ್ತಿನ ಬಗ್ಗೆ ಇಂದಿನ ಸರ್ಕಾರಕ್ಕೆ ಗೌರವ ಇಲ್ಲ’ ಎಂದು ಅದರ ಅಧ್ಯಕ್ಷ ಪುಂಡಲೀಕ ಹಾಲಂಬಿ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ, ‘ಆರೋಪ ನಿರಾಧಾರ. ಸರ್ಕಾರವು ಪರಿಷತ್ತನ್ನು ಯಾವ ಸಂದರ್ಭದಲ್ಲೂ ಕಡೆಗಣಿಸಿಲ್ಲ’ ಎಂದು ಸ್ಪಷ್ಟನೆ ನೀಡಿದ್ದಾರೆ.

ಸಾಹಿತ್ಯ ಪರಿಷತ್ತಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಹಾಲಂಬಿ, ‘ಪರಿಷತ್ತಿಗೆ ಅನುದಾನ ನೀಡಬೇಕಿ­ರುವುದು ಸರ್ಕಾ­ರದ ಕರ್ತವ್ಯ. ಅನು­ದಾನ ಕೊಡಿ ಎಂದು ನಾವು ಭಿಕ್ಷಾ­ಪಾತ್ರೆ ಹಿಡಿ­ಯ­­ಬೇಕಾಗಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಮಡಿಕೇರಿಯಲ್ಲಿ ಜನವರಿ 7ರಿಂದ 9ರವರೆಗೆ ನಡೆಯಲಿರುವ 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳ­ನಕ್ಕೆ ರೂ 1 ಕೋಟಿ ಅನುದಾನ­ವನ್ನು ಇದೇ 7ರಂದು ಬಿಡುಗಡೆ ಮಾಡ­­ಲಾಗಿದೆ. ಅಲ್ಲದೆ, ಮುಖ್ಯ­ಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಆಧರಿಸಿ, ಹೆಚ್ಚುವರಿಯಾಗಿ ರೂ 1 ಕೋಟಿ ಅನುದಾನ ಬಿಡುಗಡೆಗೆ ಇದೇ 10ರಂದು ಆದೇಶಿಸಲಾಗಿದೆ ಎಂದು ಉಮಾಶ್ರೀ  ವಿವರಣೆ ನೀಡಿದ್ದಾರೆ.

ಪರಿಷತ್ತಿನ ಆಡಳಿತದ ಖರ್ಚು­ಗಳಿಗಾಗಿ ರೂ 1.10 ಕೋಟಿ ಬಿಡುಗಡೆ ಮಾಡ­ಲಾಗಿದೆ. ಪರಿಷತ್ತಿನ ಜಿಲ್ಲಾ ಘಟಕಗಳಿಗೆ ಒಟ್ಟು ರೂ 3.5 ಕೋಟಿ ಅನುದಾನ ಬಿಡುಗಡೆಗೆ ಅನು­ಮೋದನೆ ನೀಡಲಾಗಿದೆ. ಪರಿಷತ್ತಿನ ಶತಮಾನೋತ್ಸವ ಆಚರಣೆಗೆ ರೂ 11.90 ಕೋಟಿ ಬೇಕು ಎಂದು ಹಾಲಂಬಿ ಅವರು ಮುಖ್ಯಮಂತ್ರಿ­ಸಿದ್ದರಾಮಯ್ಯ ಅವ­ರನ್ನು ಕೋರಿ­ದ್ದಾರೆ. ಇದಕ್ಕೆ ಮುಖ್ಯ­ಮಂತ್ರಿಯವರು ಪೂರಕವಾಗಿ ಸ್ಪಂದಿಸು­ತ್ತಾರೆ ಎಂಬ ವಿಶ್ವಾಸವಿದೆ ಎಂದು ಅವರು  ತಿಳಿಸಿದ್ದಾರೆ.

ಇಷ್ಟೊಂದು ಆಕ್ರೋಶ ಏಕೆ?

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಪುಂಡಲೀಕ ಹಾಲಂಬಿ ಅವರು ಸರ್ಕಾರದ ವಿರುದ್ಧ ಅನಗತ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರ ಹೇಳಿಕೆ­ಯಿಂದ ಆಶ್ಚರ್ಯವಾಯಿತು. ಸರ್ಕಾರ ಕನ್ನಡಪರ­ವಾಗಿದೆ. ಕನ್ನಡದ ಅಭಿವೃದ್ಧಿಗೆ ಬದ್ಧವಾಗಿದೆ. ಈ ಬಗ್ಗೆ ಯಾವುದೇ ರೀತಿಯ ಸಂಶಯ ಬೇಡ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT