ADVERTISEMENT

ಕಸಾಪ ನಿರ್ಲಕ್ಷ್ಯಕ್ಕೆ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2013, 19:30 IST
Last Updated 15 ಡಿಸೆಂಬರ್ 2013, 19:30 IST

ಬೆಂಗಳೂರು: ರಾಜಾಶ್ರಯದಲ್ಲಿ ಸ್ಥಾಪನೆಗೊಂಡ ಕನ್ನಡ ಸಾಹಿತ್ಯ ಪರಿಷತ್ತನ್ನು ರಾಜ್ಯ ಸರ್ಕಾರ ಕಡೆಗಣಿಸುತ್ತಿದೆ ಎಂದು ಸಾಹಿತಿಗಳು ವಿರೋಧ ವ್ಯಕ್ತಪಡಿಸಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದ ಪ್ರಸಂಗ ನಗರದಲ್ಲಿ ಭಾನುವಾರ ನಡೆಯಿತು.

ಕನ್ನಡ ಸಾಹಿತ್ಯ ಪರಿಷತ್ತು ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಕುರಿತ ವಿಚಾರ ಸಂಕಿರಣದ ಉದ್ಘಾಟನಾ ಕಾರ್ಯಕ್ರಮದಲ್ಲಿ, ಸರ್ಕಾರ ಸಾಹಿತ್ಯ ಪರಿಷತ್ತನ್ನು ನಿರ್ಲಕ್ಷ್ಯಿಸುತ್ತಿದೆ ಎಂಬ ಆಕ್ರೋಶ ವ್ಯಕ್ತವಾಯಿತು.

‘ಸಾಹಿತ್ಯ ಪರಿಷತ್ತು ಆಯೋಜಿಸುವ ಯಾವ ಕಾರ್ಯಕ್ರಮಕ್ಕೂ ಮುಖ್ಯಮಂತ­್ರಿಯವರಾಗಲೀ, ಸಚಿವರಾಗಲೀ ಬರುತ್ತಿಲ್ಲ. ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳಿಗೆ ಹೋಗದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸಂಪುಟದ ಸಚಿವರಿಗೆ ಸೂಚಿಸಿದ್ದಾರೋ ಹೇಗೋ ಗೊತ್ತಿಲ್ಲ. ಸರ್ಕಾರ ಈ ರೀತಿ ಸಾಹಿತ್ಯ ಪರಿಷತ್ತನ್ನು ನಿರ್ಲಕ್ಷ್ಯಿಸುತ್ತಿರು­ವುದು ಸರಿಯಲ್ಲ’ ಎಂದು ಪರಿಷತ್‌ ಅಧ್ಯಕ್ಷ ಪುಂಡಲೀಕ ಹಾಲಂಬಿ ಅಸಮಾಧಾನ ವ್ಯಕ್ತಪಡಿಸಿದರು.

‘ನೃಪತುಂಗ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬರಲಿಲ್ಲ. ಕೂಡಲ ಸಂಗಮದಲ್ಲಿ ಆಯೋಜಿಸಿದ್ದ ವಚನ ಕಾರ್ಯಕ್ರಮಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಬರಲಿಲ್ಲ. ಇಂದಿನ ಕಾರ್ಯಕ್ರಮಕ್ಕೆ ಬರುವುದಾಗಿ ಹೇಳಿದ್ದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಎಚ್‌.ಕೆ.­ಪಾಟೀಲ್‌ ಬಂದಿಲ್ಲ. ಸರ್ಕಾರದ ಈ ನಡೆಗೆ ಧಿಕ್ಕಾರ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ದನಿಗೂಡಿಸಿದ ಸಭಿಕರು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.

‘ಸಾಹಿತ್ಯ ಪರಿಷತ್ತಿಗೆ ಮುಂದಿನ ವರ್ಷ ನೂರು ವರ್ಷ ತುಂಬಲಿದೆ. ಇದಕ್ಕಾಗಿ ವಿಶೇಷ ಯೋಜನೆಗಳನ್ನು ರೂಪಿಸಲು ಅನುದಾನ ಕೇಳಲಾಗಿತ್ತು. ಆದರೆ, ಈ ವಿಚಾರದಲ್ಲಿ ಸರ್ಕಾರ ಮೌನವಹಿಸಿದೆ. ಮನುಷ್ಯನ ಆಯಸ್ಸು ನೂರು  ವರ್ಷ. ಸಾಹಿತ್ಯ ಪರಿಷತ್ತಿನ ಆಯಸ್ಸೂ ನೂರು ವರ್ಷಕ್ಕೆ ಸಾಕು ಎನ್ನುವುದಾದರೆ ಪರಿಷತ್ತನ್ನು ಮುಚ್ಚಬೇಕಾಗುತ್ತದೆ. ನಾಡಿನ ಸಾಹಿತ್ಯ ಹಾಗೂ ಸಂಸ್ಕೃತಿಗೆ ಸರ್ಕಾರ ಸರಿಯಾದ ಬೆಲೆ ಕೊಡುತ್ತಿಲ್ಲ’ ಎಂದು  ಕಿಡಿಕಾರಿದರು.

‘ಪರಿಷತ್ತಿಗೆ ಅನುದಾನ ಕೊಡಬೇಕಾದ್ದು ಸರ್ಕಾರದ ಕರ್ತವ್ಯ. ಅನುದಾನ ಕೊಡಿ ಎಂದು ನಾವು ಸರ್ಕಾರದ ಮುಂದೆ ಭಿಕ್ಷಾಪಾತ್ರೆ ಹಿಡಿಯಬೇಕಾದ ಅಗತ್ಯವಿಲ್ಲ. ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರು ₨ 5 ಸಾವಿರ ದೇಣಿಗೆ ಕೊಟ್ಟು ಕಟ್ಟಿದ ಕನ್ನಡಿಗರ ಸಂಸ್ಥೆ ಇದು. ಪರಿಷತ್ತಿನ ಬಗ್ಗೆ ಇಂದಿನ ಸರ್ಕಾರಕ್ಕೆ ಗೌರವವಿಲ್ಲ. ಸರ್ಕಾರ ಅನುದಾನ ಬಿಡುಗಡೆ ಮಾಡದೇ ಇದ್ದರೆ ಸತ್ಯಾಗ್ರಹದ ಮೂಲಕ ಪ್ರತಿಭಟಿಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ಹಾಲಂಬಿ ಅವರ ಮಾತಿಗೆ ಸಹಮತ ವ್ಯಕ್ತಪಡಿಸಿದ ಹಿರಿಯ ಕವಿ ಜಿ.ಎಸ್‌.ಸಿದ್ದಲಿಂಗಯ್ಯ, ‘ರಾಜ್ಯದ ಆರು ವಿಶ್ವವಿದ್ಯಾಲಯಗಳಿಗೆ ಸಮನಾದುದು ಸಾಹಿತ್ಯ ಪರಿಷತ್ತು. ಆ ವಿಶ್ವವಿದ್ಯಾಲ­ಯಗಳ ಕುಲಪತಿಗಳಿಗಿರುವ  ಸ್ಥಾನಮಾನ ಪರಿಷತ್ತಿನ ಅಧ್ಯಕ್ಷರಿಗಿದೆ. ಪರಿಷತ್ತಿನ ಅಧ್ಯಕ್ಷರ ಮಾತನ್ನು   ಸರ್ಕಾರ ನಿರ್ಲಕ್ಷ್ಯಿಸುವುದು ಸರಿಯಲ್ಲ. ಸರ್ಕಾರ ಪರಿಷತ್ತಿಗೆ ಅಗತ್ಯ     ಅನುದಾನ ಕೊಡಬೇಕು. ಅನುದಾನ ಪಡೆಯಲು ಸರ್ಕಾರದ ವಿರುದ್ಧ ಪ್ರತಿಭಟಿಸುವ ಅಧಿಕಾರ ಪರಿಷತ್ತಿಗಿದೆ’ ಎಂದು ಅವರು ಹೇಳಿದರು.

ಹಿರಿಯ ಸಾಹಿತಿ ಕೋ.ಚೆನ್ನಬಸಪ್ಪ ಮಾತನಾಡಿ, ‘ಸರ್ಕಾರದ ವಿರುದ್ಧ ಧಿಕ್ಕಾರ ಕೂಗುವುದು ಸರಿಯಲ್ಲ. ಸಾಹಿತ್ಯ ಸಮ್ಮೇಳನಕ್ಕೆ ಹಣ ಕೇಳಲು ಪರಿಷತ್ತು ಮತ್ತೆ ಸರ್ಕಾದ ಬಳಿಗೇ ಹೋಗಬೇಕು. ಹೀಗಾಗಿ ಸಾಹಿತಿಗಳು ಸಚಿವರೊಂದಿಗೆ ಸ್ನೇಹದಿಂದಿರಬೇಕೆ ಹೊರತು ಶತ್ರುತ್ವ ಸರಿಯಲ್ಲ. ಅಷ್ಟಕ್ಕೂ ಸಾಹಿತ್ಯದ ಕಾರ್ಯಕ್ರಮಗಳಿಗೆ ರಾಜಕಾರಣಿಗಳನ್ನು ಆಹ್ವಾನಿಸುವ ಅಗತ್ಯವೇನಿದೆ’ ಎಂದು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಹಾಲಂಬಿ, ‘ಕೋ.ಚೆನ್ನಬಸಪ್ಪ ಅವರು ಒಂದು ಕಾಲದವರು. ನಾನು ಆ ಕಾಲದವನಲ್ಲ. ಪರಿಷತ್ತಿನ ಒಂದು ರೂಪಾಯಿಯನ್ನೂ ಸ್ವಂತಕ್ಕೆ ಬಳಸಿದವನಲ್ಲ. ಹೀಗಾಗಿ ಸರ್ಕಾರದ ವಿರುದ್ಧ ಮಾತನಾಡಲು ನನಗೆ ಯಾವ ಅಂಜಿಕೆಯೂ ಇಲ್ಲ’ ಎಂದರು.

ಬರಗೂರು ವ್ಯಂಗ್ಯ
ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ, ‘ಸಾಹಿತ್ಯ ಕಾರ್ಯಕ್ರಮ­ದಲ್ಲಿದ್ದು ಇಲ್ಲಿನ ವಾತಾವರಣವನ್ನು ಮಲಿನಗೊಳಿಸುವುದು ಬೇಡ ಎಂಬ ಕಾರಣಕ್ಕೆ ಬಹುಶಃ ರಾಜಕಾರಣಿಗಳು ಬಂದಿಲ್ಲ. ‘ಜ್ಞಾನಪೀಠದ ಮಧ್ಯೆ ನಮಗೇನು ಕೆಲಸ, ನಮಗೆ ಪೀಠ     ಇದ್ದರೆ ಸಾಕು’ ಎಂದು ಅವರು ಭಾವಿಸಿರಬಹುದು. ಈ ಮೂಲಕ ರಾಜಕಾರ­ಣಿಗಳು ಔಚಿತ್ಯ ಪ್ರಜ್ಞೆ ಮೆರೆದಿದ್ದಾರೆ’ ಎಂದು ವ್ಯಂಗ್ಯವಾಡಿದರು.

‘ರಾಜಕಾರಣಕ್ಕಿಂತ ಭಯಾನಕ’
ರಾಜಕಾರಣಿಗಳು ಸಾಹಿತ್ಯವನ್ನು ನಿರ್ಲಕ್ಷ್ಯಿಸುತ್ತಿದ್ದಾರೆ ಎಂಬುದನ್ನು ವಿರೋ­ಧಿಸ­ಬೇಕಾಗುತ್ತದೆ. ಆದರೆ, ಸಾಹಿತ್ಯದಲ್ಲೂ ರಾಜಕಾರಣ ಇದೆ. ಸಾಹಿತ್ಯದ ರಾಜಕಾರಣ ವಿಧಾನಸೌಧದ ರಾಜಕಾರಣಕ್ಕಿಂತ ಭಯಾನಕ­ವಾದುದು.

ಪ್ರೊ.ಬರಗೂರು ರಾಮಚಂದ್ರಪ್ಪ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.