ADVERTISEMENT

‘ಕಾಂಗ್ರೆಸ್ ಅಧ್ಯಕ್ಷೆ, ಉಪಾಧ್ಯಕ್ಷ ಜಾಮೀನು ಪಡೆದು ಓಡಾಡುತ್ತಿದ್ದಾರೆ’

ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್ ಸಚಿವರ ಪ್ರಕರಣಗಳು ಮರು ತನಿಖೆಗೆ: ಬಿ.ಎಸ್‌. ಯಡಿಯೂರಪ್ಪ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2017, 20:23 IST
Last Updated 10 ಡಿಸೆಂಬರ್ 2017, 20:23 IST
ಪರಿವರ್ತನಾ ಯಾತ್ರೆಯ ಮೆರವಣಿಗೆಯಲ್ಲಿ ಶಾಸಕ ಬಿ.ಎನ್. ವಿಜಯಕುಮಾರ್, ಆರ್. ಅಶೋಕ್, ಬಿ.ಎಸ್ ಯಡಿಯೂರಪ್ಪ, ಅನಂತಕುಮಾರ್, ಶಾಸಕ ಸತೀಶ್‌ ರೆಡ್ಡಿ ಇದ್ದರು -ಪ್ರಜಾವಾಣಿ ಚಿತ್ರ
ಪರಿವರ್ತನಾ ಯಾತ್ರೆಯ ಮೆರವಣಿಗೆಯಲ್ಲಿ ಶಾಸಕ ಬಿ.ಎನ್. ವಿಜಯಕುಮಾರ್, ಆರ್. ಅಶೋಕ್, ಬಿ.ಎಸ್ ಯಡಿಯೂರಪ್ಪ, ಅನಂತಕುಮಾರ್, ಶಾಸಕ ಸತೀಶ್‌ ರೆಡ್ಡಿ ಇದ್ದರು -ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಬಿಜೆಪಿ ಎಂದರೆ ಬೇಲ್–ಜೈಲ್ ಪಾರ್ಟಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸುತ್ತಾರೆ. ಆದರೆ, ಅವರ ಪಕ್ಷದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಆಸ್ಕರ್ ಫರ್ನಾಂಡೀಸ್ ಜಾಮೀನಿನ ಮೇಲೆಯೇ ತಿರುಗಾಡುತ್ತಿದ್ದಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ತಿರುಗೇಟು ನೀಡಿದರು.

ಇಲ್ಲಿನ ಜೆ.ಪಿ ನಗರದ ಆರ್‌.ಬಿ.ಐ ಮೈದಾನದಲ್ಲಿ ಭಾನುವಾರ ಬಿಜೆಪಿ ಏರ್ಪಡಿಸಿದ್ದ ಪರಿವರ್ತನಾ ಯಾತ್ರೆಯಲ್ಲಿ ಅವರು ಮಾತನಾಡಿದರು. ಬಿಜೆಪಿ ಬಗ್ಗೆ ಸಿದ್ದರಾಮಯ್ಯ ಅನಗತ್ಯ ಆರೋಪಗಳನ್ನು ಮಾಡುತ್ತಿದ್ದಾರೆ. ಅವರ ಪಕ್ಷದ ರಾಷ್ಟ್ರೀಯ ಪ್ರಮುಖರೇ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ನ್ಯಾಯಾಲಯದಲ್ಲಿ ಜಾಮೀನು ಪಡೆದಿರುವ ವಿಷಯ ಗೊತ್ತಿಲ್ಲವೇ ಎಂದು ಪ್ರಶ್ನಿಸಿದರು.

‘ಮುಖ್ಯಮಂತ್ರಿ ಮತ್ತು ರಾಜ್ಯ ಸರ್ಕಾರದ ಸಚಿವರ ಮೇಲೆ ಭ್ರಷ್ಟಾಚಾರ ಮತ್ತು ಕೊಲೆ ಆರೋಪಗಳಿವೆ. ಆದರೆ, ಸಿಐಡಿ ಮತ್ತು ಎಸಿಬಿ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಂಡು ದೋಷಮುಕ್ತರು ಎಂದು ಘೋಷಿಸಲಾಗಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಈ ಎಲ್ಲ ಪ್ರಕರಣಗಳನ್ನು ಮರು ತನಿಖೆಗೆ ಒಳಪಡಿಸುತ್ತೇವೆ’ ಎಂದು ಯಡಿಯೂರಪ್ಪ ಹೇಳಿದರು.

ADVERTISEMENT

‘ಅಚ್ಛೇ ದಿನ್ ಎಲ್ಲಿದೆ ಎಂದು ಸಿದ್ದರಾಮಯ್ಯ ಕೇಳುತ್ತಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಮುಕ್ತ ಮಾಡಿದಾಗ, ಸಿದ್ದರಾಮಯ್ಯ ಅವರನ್ನು ಮನೆಗೆ ಕಳಿಸಿದಾಗ ಕರ್ನಾಟಕಕ್ಕೆ ಅಚ್ಛೇ ದಿನ ಬರುತ್ತದೆ. ಗುಜರಾತ್‌ನಲ್ಲಿ ಬಿಜೆಪಿ 130 ಸೀಟುಗಳನ್ನು ಪಡೆಯುತ್ತದೆ. ರಾಜ್ಯದಲ್ಲಿ 150 ಸೀಟುಗಳನ್ನು ಗೆಲ್ಲುತ್ತೇವೆ. ಆಗ ಬಿಜೆಪಿ ಏನೆಂದು ಅವರಿಗೆ ತಿಳಿಸುತ್ತೇವೆ’ ಎಂದು ಗುಡುಗಿದರು.

‘ಕಲರ್‌ಫುಲ್’ ಕನಸು:  ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್, ‘ಇತ್ತೀಚೆಗೆ ಸರ್ಕಾರಿ ಜಾಹೀರಾತಿನಲ್ಲಿ ಸಿದ್ದರಾಮಯ್ಯ ನನಗೊಂದು ಕನಸಿದೆ ಎಂದು ಹೇಳಿದ್ದಾರೆ. ನಾಲ್ಕೂವರೆ ವರ್ಷ ನಿದ್ದೆ ಮಾಡಿದ ಬಳಿಕ ಅವರಿಗೆ ಈಗ ಕನಸು ಬಿದ್ದಿದೆ. ರಾತ್ರಿ 9ಕ್ಕೆ ಸ್ಟೀಲ್ ಬ್ರಿಡ್ಜ್ ಕನಸು, 10ಕ್ಕೆ ಕೆ.ಜೆ.ಜಾರ್ಜ್ ಕನಸು, 11ಕ್ಕೆ ಮರಳು ಕಳ್ಳಸಾಗಣೆ ಕನಸು, 12ಕ್ಕೆ ಮಾಜಿ ಸಚಿವ ಮೇಟಿಯ ಕಲರ್‌ಫುಲ್ ಕನಸು ಬೀಳುತ್ತದೆ. ಬೆಂಗಳೂರು ಅಭಿವೃದ್ಧಿ ಕನಸು, ಅಪರಾಧಗಳನ್ನು ತಡೆಗಟ್ಟುವಂತಹ ಕನಸು ಅವರಿಗೆ ಬೀಳುವುದೇ ಇಲ್ಲ’ ಎಂದು ವ್ಯಂಗ್ಯವಾಡಿದರು.

‘ಬೆಂಗಳೂರಿನಲ್ಲಿ ಚಾಕು, ಚೂರಿ, ಮಚ್ಚು, ರಿವಾಲ್ವರ್ ಸದ್ದು ಮಾಡುತ್ತಿವೆ. ಕಾನೂನು ಸುವ್ಯವಸ್ಥೆ ಹಾಳಾಗಿದ್ದು, ಜನ ಪ್ರಾಣ ಭಯದಲ್ಲಿದ್ದಾರೆ. ಮಾಜಿ  ಕಾರ್ಪೊರೇಟರ್ ಗೋವಿಂದೇಗೌಡ ಎಂಬುವರನ್ನು ಅಟ್ಟಾಡಿಸಿಕೊಂಡು ಹೊಡೆದರು ಎಂದು ಪತ್ರಿಕೆಯಲ್ಲಿ ಬಂದಿದೆ. ಈ ರೀತಿ ಅಟ್ಟಾಡಿಸಿ ಕೊಂದಿದ್ದು ಚಂಬಲ್ ವ್ಯಾಲಿಯಲ್ಲಿ ಅಲ್ಲ. ಬದಲಿಗೆ ನಮ್ಮ ಸಿಲಿಕಾನ್ ವ್ಯಾಲಿಯಲ್ಲಿ. ಇದಕ್ಕೆ ಸಿದ್ದರಾಮಯ್ಯ ನೇರ ಕಾರಣ’ ಎಂದು ಆರೋಪಿಸಿದರು.

ಶಾಸಕ ಆರ್. ಅಶೋಕ್, ‘ನರೇಂದ್ರ ಮೋದಿ ಮತ್ತು ಯಡಿಯೂರಪ್ಪ ಜೋಡೆತ್ತು ಇದ್ದಂಗೆ. ಕಾಂಗ್ರೆಸ್‌ನಲ್ಲಿಯೂ ಜೋಡೆತ್ತು ಇವೆ. ಒಂದು ಕಡೆ ಪಾಪು (ರಾಹುಲ್‌ಗಾಂಧಿ) ಮತ್ತೊಂದು ಕಡೆ ನಿದ್ದೆ ಮಾಡುವ ಸಿದ್ದರಾಮಯ್ಯ. ಇವರಿಂದ ಕರ್ನಾಟಕದ ಅಭಿವೃದ್ಧಿ ಆಗುತ್ತದೆಯೇ. ಕಾಂಗ್ರೆಸ್ ಸರ್ಕಾರವನ್ನು ತೊಳೆಯಲು ಇಲ್ಲಿನ ಜನರೇ ಫಿನಾಯಿಲ್ ಹಿಡಿದು ನಿಂತಿದ್ದಾರೆ’ ಎಂದು ಲೇವಡಿ ಮಾಡಿದರು.

ಬಾರದ ಎಸ್‌.ಎಂ.ಕೃಷ್ಣ
ನಗರದಲ್ಲಿ ಪರಿವರ್ತನಾ ಯಾತ್ರೆ ಕಾರ್ಯಕ್ರದಲ್ಲಿ ಹಿರಿಯ ನಾಯಕ ಎಸ್.ಎಂ. ಕೃಷ್ಣ ಭಾಗಿಯಾಗಿರಲಿಲ್ಲ.

ಪರಿವರ್ತನಾ ಯಾತ್ರೆಯ ಉದ್ಘಾಟನಾ ಕಾರ್ಯಕ್ರಮದಿಂದಲೂ ಕೃಷ್ಣ ದೂರ ಉಳಿದಿದ್ದರು. ಹೀಗಾಗಿ, ಕೃಷ್ಣ ಅವರನ್ನು ಶನಿವಾರ(ಡಿ.9) ಭೇಟಿ ಮಾಡಿದ್ದ ಆರ್. ಅಶೋಕ್‌, ಸಮಾವೇಶದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದ್ದರು.

ಯಾತ್ರೆಯ ಸಮಾರೋಪ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಪಾಲ್ಗೊಳ್ಳಲಿದ್ದು, ಆ ಕಾರ್ಯಕ್ರಮಕ್ಕೆ ಬರುವುದಾಗಿ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಯಾತ್ರೆಗೆ ಬಂದವರಿಗೆ ₹ 300 ಇನಾಮು!
‘ಕಾರ್ಯಕ್ರಮಕ್ಕೆ ಬಂದರೆ ₹ 300 ಕೊಡುವುದಾಗಿ ಹೇಳಿ ಕರೆದುಕೊಂಡು ಬಂದಿದ್ದರು. ಆದರೆ, ಹಣವನ್ನು ಮಹಿಳಾ ಸಂಘಗಳಿಗೆ ನೀಡಿದ್ದೇವೆ ಎಂದು ಹೇಳುತ್ತಿದ್ದಾರೆ. ನಮಗೆ ಹಣ ಸಿಕ್ಕಿಲ್ಲ’ ಎಂದು ಪರಿವರ್ತನಾ ಯಾತ್ರೆಗೆ ಬಂದಿದ್ದ ಮಹಿಳೆಯರು ಬೇಸರ ವ್ಯಕ್ತಪಡಿಸಿದರು.

ಯಾತ್ರೆ ಅಂಗವಾಗಿ ಸಾರಕ್ಕಿ ಕೆರೆ ಸಮೀಪದ ದೇವಸ್ಥಾನದಿಂದ ಆರ್‌.ಬಿ.ಐ ಮೈದಾನದವರೆಗೆ ಮೆರವಣಿಗೆ ಏರ್ಪಡಿಸಲಾಗಿತ್ತು. ಮಹಿಳೆಯರಿಂದ ಪೂರ್ಣಕುಂಭ ಸ್ವಾಗತ ನೀಡಲಾಯಿತು. ಇವರ ಜೊತೆಗೆ ಶಾಸಕ ಸತೀಶ್ ರೆಡ್ಡಿ ಭಾವಚಿತ್ರ ಹಾಗೂ ಪಕ್ಷದ ಬಾವುಟ ಹಿಡಿದಿದ್ದ ಸಾವಿರಾರು ಮಹಿಳೆಯರು ಹೆಜ್ಜೆ ಹಾಕುತ್ತಿದ್ದರು. ಇದರಲ್ಲಿ ಗರ್ಭಿಣಿಯರು, ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳೂ ಇದ್ದರು.

‘ಮೂರು ತಾಸು ಕಾರ್ಯಕ್ರಮ ಇರುತ್ತದೆ ಎಂದು ಹೇಳಿದ್ದರು. ಆದರೆ, ಬೆಳಿಗ್ಗೆ 10ರಿಂದ ಮಧ್ಯಾಹ್ನ 3ರವರೆಗೆ ಕೂಡಿಸಿದ್ದಾರೆ’ ಎಂದು ಅನೇಕ ಮಹಿಳೆಯರು ಬೇಸರ ವ್ಯಕ್ತಪಡಿಸಿದರು.

ಕಾರ್ಯಕ್ರಮ ನಡೆದ ಸ್ಥಳಕ್ಕೂ, ಬಸ್‌ಗಳು ನಿಂತಿದ್ದ ಜಾಗಕ್ಕೂ ಒಂದು ಕಿ.ಮೀ.ಗೂ ಹೆಚ್ಚಿನ ಅಂತರ ಇದ್ದುದರಿಂದ ಅನೇಕರಿಗೆ ಯಾವ ಕಡೆ ಹೋಗಬೇಕು ಎಂದು ಗೊತ್ತಾಗದೆ ಪರದಾಡುತ್ತಿದ್ದುದು ಕಂಡು ಬಂತು.

*
ರಾಜ್ಯದಲ್ಲಿ ಬಿಜೆಪಿಯ 20 ಕಾರ್ಯಕರ್ತರ ಕೊಲೆ ಆಗಿದೆ. ಕೊಲೆ ಪಾತಕಿಗಳನ್ನು ಹಿಡಿಯುವ ಬದಲು ಯುವ ಮೋರ್ಚಾ ಪ್ರತಿಭಟನೆ ತಡೆಯಲು ಪ್ರಯತ್ನಿಸುತ್ತಿದೆ.
– ಅರವಿಂದ ಲಿಂಬಾವಳಿ, ಬಿಜೆಪಿ ಪ್ರಧಾನ ಕಾರ್ಯದರ್ಶಿ

*
ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಬಳಿಕ ₹ 1.45 ಲಕ್ಷ ಕೋಟಿ ಸಾಲ ಮಾಡಿದ್ದಾರೆ.  ಬಹುಪಾಲು ಹಣ ಆ ಪಕ್ಷದ  ಹೈಕಮಾಂಡ್‌ಗೆ ಕಪ್ಪ ನೀಡಲು ಹೋಗಿದೆ.
– ಸಿ.ಟಿ. ರವಿ, ಬಿಜೆಪಿ ಪ್ರಧಾನ ಕಾರ್ಯದರ್ಶಿ

*
ಕೇಂದ್ರ ಸರ್ಕಾರ ಅಕ್ಕಿ, ಗೋಧಿ ಸೇರಿ ಪ್ರತಿ ತಿಂಗಳು ₹ 409 ಕೋಟಿ ಮೌಲ್ಯದ ಪಡಿತರ ಕೊಡುತ್ತಿದೆ. ಆದರದು ಕಾಂಗ್ರೆಸ್ ಚೇಲಾಗಳ ಜೇಬು ಸೇರುತ್ತಿದೆ.
– ಶೋಭಾ ಕರಂದ್ಲಾಜೆ, ಬಿಜೆಪಿ ಪ್ರಧಾನ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.