ADVERTISEMENT

ಕಾಂಗ್ರೆಸ್‌ ಅನ್ನು ಪಿ.ಪಿ.ಪಿ. ಪಕ್ಷವಾಗಿಸಿ : ಮೋದಿ ಕರೆ

​ಪ್ರಜಾವಾಣಿ ವಾರ್ತೆ
Published 5 ಮೇ 2018, 9:37 IST
Last Updated 5 ಮೇ 2018, 9:37 IST
ಕಾಂಗ್ರೆಸ್‌ ಅನ್ನು ಪಿ.ಪಿ.ಪಿ. ಪಕ್ಷವಾಗಿಸಿ : ಮೋದಿ ಕರೆ
ಕಾಂಗ್ರೆಸ್‌ ಅನ್ನು ಪಿ.ಪಿ.ಪಿ. ಪಕ್ಷವಾಗಿಸಿ : ಮೋದಿ ಕರೆ   

ಗದಗ : ‘ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ಸೋಲಿಸುವ ಮೂಲಕ, ಅದನ್ನು ಪಿ.ಪಿ.ಪಿ. ಪಕ್ಷವಾಗಿಸಿ’ ಎಂದು ಪ್ರಧಾನಿ ನರೇಂದ್ರ ಮೋದಿ ಕರೆನೀಡಿದರು.

ಗದಗಿನಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ‘ಕರ್ನಾಟಕದಲ್ಲಿ ಕಾಂಗ್ರೆಸ್‌ ಟಿಕೆಟ್‌ ಹಂಚಿಕೆಗೆ ಟೆಂಡರ್ ಕರೆಯಲಾಗಿತ್ತು. ಒಂದು ವೇಳೆ ಸರ್ಕಾರ ಬಂದರೂ ಯಾರು ಮೇಲಿನವರಿಗೆ ಅತ್ಯಂತ ಹೆಚ್ಚು ಹಣ ತಲುಪಿಸುತ್ತಾರೆ, ಅವರಿಗೆ ಹುದ್ದೆಗಳನ್ನು ನೀಡಬೇಕು ಎಂಬ ಒಪ್ಪಂದ ಈಗಲೇ ಆಗಿದೆ. ಮತದಾರರೇ, ಬಹಳ ಎಚ್ಚರಿಕೆಯಿಂದಿರಬೇಕು. ಈ ಚುನಾವಣೆಯಲ್ಲಿ ನೀವು ಕಾಂಗ್ರೆಸ್‌ ಅನ್ನು ಸೋಲಿಸಲಿದ್ದೀರಿ. ನಂತರ ಅದು ಪಿ.ಪಿ.ಪಿ. ಕಾಂಗ್ರೆಸ್ ಆಗಲಿದೆ. ಪಿ.ಪಿ.ಪಿ. ಕಾಂಗ್ರೆಸ್ ಅಂದರೆ ಪಂಜಾಬ್, ಪುದುಚೆರಿ, ಪರಿವಾರ ಪಾರ್ಟಿ ಎಂದು ಲೇವಡಿ ಮಾಡಿದರು.

‘ಬಿಜೆಪಿಯನ್ನು ಇಡೀ ದೇಶದ ಪಕ್ಷವಾಗಿಸುವಲ್ಲಿ ಕರ್ನಾಟಕದ ಪಾಲು, ಆಶೀರ್ವಾದ ದೊಡ್ಡದಿದೆ. ಮೇ 15ರಂದು ನೀವು ಇತಿಹಾಸ ಬರೆಯಲಿದ್ದೀರಿ. ಅಂದು ಬಿಜೆಪಿಯನ್ನು ಅಧಿಕಾರಕ್ಕೆ ತಂದು ಕಾಂಗ್ರೆಸ್‌ ಅನ್ನು ಪಿ.ಪಿ.ಪಿ. ಪ್ರಾದೇಶಿಕ ಪಕ್ಷ ಮಾಡಲಿದ್ದೀರಿ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ADVERTISEMENT

‘ಕರ್ನಾಟಕದ ವಿಕಾಸ, ಪ್ರಗತಿಗೆ ನಾವು ಬದ್ಧರಿದ್ದೇವೆ. ₹1 ಲಕ್ಷ ಕೋಟಿ ಮೊತ್ತದ ಯೋಜನೆ ಜಾರಿಗೆ ಮುಂದಾಗಿದ್ದೇವೆ. ಗದಗ–ವಾಡಿ ರೈಲುಮಾರ್ಗ ಕಾಮಗಾರಿಗೆ ಜಮೀನು ನೀಡಲು ಕಾಂಗ್ರೆಸ್‌ ಸರ್ಕಾರ ಮುಂದಾಗುತ್ತಿಲ್ಲ’ ಎಂದು ಟೀಕಿಸಿದರು.

‘12ನೇ ತಾರೀಖಿನಂದು ಉಪಾಹಾರಕ್ಕೂ ಮುನ್ನ ಮತ ಚಲಾಯಿಸಬೇಕು. ಕಮಲದ ಗುಂಡಿ ಒತ್ತಿ ಬಿಜೆಪಿಗೆ ಮತ ನೀಡಬೇಕು. ಬನ್ನಿ ಎಲ್ಲರೂ ಕೈಜೋಡಿಸಿ, ಸರ್ಕಾರ ಬದಲಿಸಿ–ಬಿಜೆಪಿ ಗೆಲ್ಲಿಸಿ’ ಎನ್ನುವ ಮೂಲಕ ಕನ್ನಡದಲ್ಲೇ ಭಾಷಣ ಕೊನೆಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.