ADVERTISEMENT

ಕಾಂಗ್ರೆಸ್ ಬೆಂಬಲಿಸುವಂತೆ ಸಂವಿಧಾನ ಉಳಿವಿಗಾಗಿ ಕರ್ನಾಟಕ ವೇದಿಕೆ ಮನವಿ

​ಪ್ರಜಾವಾಣಿ ವಾರ್ತೆ
Published 10 ಮೇ 2018, 11:30 IST
Last Updated 10 ಮೇ 2018, 11:30 IST
ಕೆ.ಎಲ್‌. ಅಶೋಕ್ (ಸಂಗ್ರಹ ಚಿತ್ರ)
ಕೆ.ಎಲ್‌. ಅಶೋಕ್ (ಸಂಗ್ರಹ ಚಿತ್ರ)   

ಶಿವಮೊಗ್ಗ: ಕೋಮುವಾದಿ ಬಿಜೆಪಿ ಜತೆ ಜೆಡಿಎಸ್ ತೆರೆಮರೆಯ ಹೊಂದಾಣಿಕೆ ಮಾಡಿಕೊಂಡಿದೆ. ಅದಕ್ಕಾಗಿ ಮತದಾರರು ದುಷ್ಟ ಹಾಗೂ ಅವಕಾಶ ಪಕ್ಷಗಳನ್ನು ತಿರಸ್ಕರಿಸಿ ಕಾಂಗ್ರೆಸ್ ಬೆಂಬಲಿಸುವಂತೆ ಸಂವಿಧಾನ ಉಳಿವಿಗಾಗಿ ಕರ್ನಾಟಕ ವೇದಿಕೆಯ ಸಮನ್ವಯಕಾರ ಕೆ.ಎಲ್‌. ಅಶೋಕ್ ಕೋರಿದರು.

ಸಂವಿಧಾನವನ್ನೇ ಬದಲಿಸುವ ಗುಪ್ತ ಅಜೆಂಡಾ ಹೊಂದಿರುವ ಮತಾಂಧ ಬಿಜೆಪಿ  ಸೋಲಿಸಲು ಸಂವಿಧಾನ ಉಳಿವಿಗಾಗಿ ಕರ್ನಾಟಕ ವೇದಿಕೆ ರಾಜ್ಯದ ಎಲ್ಲೆಡೆ ನಿರಂತರ ಪ್ರಚಾರಾಂದೋಲನ ನಡೆಸಿದೆ. ಲಕ್ಷಾಂತರ ಕರಪತ್ರ ವಿತರಿಸಿದೆ. ‘ರೆಡ್ ಅಲಾರ್ಟ್ ದೇಶ ಆಪತ್ತಿನಲ್ಲಿ’ ಪಸ್ತಕ ಮುದ್ರಿಸಿ ಸಾವಿರಾರು ಪ್ರತಿಗಳನ್ನು ಜನರಿಗೆ ತಲುಪಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸಂವಿಧಾನ ಬದಲಿಸುತ್ತೇವೆ ಎಂದು ಸಚಿವ ಅನಂತ ಕುಮಾರ್ ಹೆಗಡೆ ಬಹಿರಂಗವಾಗಿ ಹೇಳಿದರು. ಆಸಿಫಾಳ ಮೇಲೆ ಬರ್ಬರ ಅತ್ಯಾಚಾರ ನಡೆಸಿದ್ದಲ್ಲದೇ ಹೇಯ ಕೃತ್ಯ ಸಮರ್ಥಿಸಿಕೊಳ್ಳುವ ಕೀಳುಮಟ್ಟಕ್ಕೆ ಬಿಜೆಪಿ ಇಳಿಯಿತು. ಸುಪ್ರೀಂಕೋರ್ಟ್ ಮೂಲಕ ಪರಿಶಿಷ್ಟರ ದೌರ್ಜನ್ಯ ತಡೆ ಕಾಯ್ದೆ ದುರ್ಬಲವಾಗುವಂತೆ ನೋಡಿಕೊಳ್ಳಲಾಯಿತು. ಇಂತಹ ಕೃತ್ಯಗಳಿಗೆ ಬಿಜೆಪಿ ಕಾರಣವಾದರೆ, ಜೆಡಿಎಸ್ ಇಂತಹ ಕೃತ್ಯಗಳ ವಿರುದ್ಧ ಧ್ವನಿಯನ್ನೇ ಎತ್ತಲಿಲ್ಲ  ಎಂದು ದೂರಿದರು.

ADVERTISEMENT

ರಾಜ್ಯದ ರಾಜಕೀಯ ಚಿತ್ರಣ ನೋಡಿದಾಗ ಕಾಂಗ್ರೆಸ್ ಮೊದಲ ಸ್ಥಾನದಲ್ಲಿದೆ. ಎರಡು ಹಾಗೂ ಮೂರವೇ ಸ್ಥಾನದಲ್ಲಿರುವ ಬಿಜೆಪಿ, ಜೆಡಿಎಸ್ ಅಪವಿತ್ರ ಮೈತ್ರಿ ಮಾಡಿಕೊಂಡಿವೆ. ಆ ಮೂಲಕ ಕಾಂಗ್ರಸ್ ಮಣಿಸಿ ಅಧಿಕಾರಕ್ಕೆ ಬರುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. ಇಂತಹ ಅವಕಾಶವಾದಿತನಕ್ಕೆ ಮತದಾರರು ಅವಕಾಶ ನೀಡಬಾರದು. ಬಿಜೆಪಿ, ಜೆಡಿಎಸ್ ಎರಡೂ ಪಕ್ಷ ಬಹಿಷ್ಕರಿಸುವಂತೆ ಮನವಿ ಮಾಡಿಕೊಂಡರು.

ವೇದಿಕೆ ಪ್ರಮುಖರಾದ ಕೆ.ಪಿ. ಶ್ರೀಪಾಲ್, ಎಂ.ಗುರುಮೂರ್ತಿ, ಅಬ್ದುಲ್ ವಾಹಬ್, ಡಿ.ಎಸ್. ಶಿವಕುಮಾರ್, ಎಚ್.ಎಂ. ಖಾದ್ರಿ, ವೀರೇಶ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.