ADVERTISEMENT

ಕಾಂಗ್ರೆಸ್ ಸೇರುವುದಿಲ್ಲ: ಸಚಿವ ಸೋಮಣ್ಣ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2012, 19:30 IST
Last Updated 13 ಮಾರ್ಚ್ 2012, 19:30 IST
ಕಾಂಗ್ರೆಸ್ ಸೇರುವುದಿಲ್ಲ: ಸಚಿವ ಸೋಮಣ್ಣ ಸ್ಪಷ್ಟನೆ
ಕಾಂಗ್ರೆಸ್ ಸೇರುವುದಿಲ್ಲ: ಸಚಿವ ಸೋಮಣ್ಣ ಸ್ಪಷ್ಟನೆ   

ಬೆಂಗಳೂರು: `ಕಾಂಗ್ರೆಸ್ ಸೇರಲು ನಾನು ಅರ್ಜಿ ಹಾಕಿಲ್ಲ. ಆ ಪಕ್ಷದ ಪರವಾಗಿ ಚಿಕ್ಕಮಗಳೂರಿನಲ್ಲಿ ಪ್ರಚಾರ ಮಾಡಿಲ್ಲ. ಈ ಬಗ್ಗೆ ಕಾಂಗ್ರೆಸ್ ಮುಖಂಡ ಅಲ್ಲಂ ವೀರಭದ್ರಪ್ಪ ಮಾಡಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ~ ಎಂದು ವಸತಿ ಸಚಿವ ವಿ.ಸೋಮಣ್ಣ ಮಂಗಳವಾರ ಇಲ್ಲಿ ತಿಳಿಸಿದರು.

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉಪ ಚುನಾವಣೆಯ ಪ್ರಚಾರದಲ್ಲಿ ಭಾಗವಹಿಸಲು ಸೋಮವಾರ ಚಿಕ್ಕಮಗಳೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಕೆಲ ಕಾಂಗ್ರೆಸ್ ಕಾರ್ಯಕರ್ತರು ಸೌಜನ್ಯಕ್ಕೆ ಹೂವಿನ ಹಾರ ಹಾಕಿದರು ಅಷ್ಟೇ. ಇದಕ್ಕೆ ಬಿಜೆಪಿ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿಲ್ಲ. ವೀರಶೈವ ಸಮಾಜದ ಸಭೆಯನ್ನೂ ನಡೆಸಿಲ್ಲ ಎಂದು ಸುದ್ದಿಗಾರರಿಗೆ ತಿಳಿಸಿದರು.

`ಹವಾನಿಯಂತ್ರಿತ ಕೊಠಡಿಯಿಂದ ಹೊರಗೆ ಬಾರದ ಅಲ್ಲಂ ವೀರಭದ್ರಪ್ಪ ಅವರಿಗೆ ನನ್ನ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ ಕಾಂಗ್ರೆಸ್‌ಗೆ ಕರೆದುಕೊಂಡು ಹೋಗಿ ಟೋಪಿ ಹಾಕಿದರು. ನನ್ನ ಬಗ್ಗೆ ಇಲ್ಲಸಲ್ಲದ ಮಾತುಗಳನ್ನು ಆಡುವುದು ಅವರ ವ್ಯಕ್ತಿತ್ವಕ್ಕೆ ಸಾಧುವಲ್ಲ~ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

`ಕಾಂಗ್ರೆಸ್‌ಗೆ ಮತ ಹಾಕಿ ಎಂದು ಹೇಳಿಲ್ಲ, ಪಕ್ಷ ವಿರೋಧಿ ಕೆಲಸ ಮಾಡುವುದಿಲ್ಲ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚನೆಯಂತೆ ಪ್ರಚಾರಕ್ಕೆ ತೆರಳಿದ್ದೆ. ಉಪ ಚುನಾವಣೆ ಪ್ರಚಾರಕ್ಕೆ ಯಡಿಯೂರಪ್ಪ ಅವರೇ ಬರಬೇಕಾಗಿಲ್ಲ. ನಾವೆಲ್ಲ ಇದ್ದೇವೆ. ಅವರ ಆಶೀರ್ವಾದ ಇದ್ದು ಬಿಜೆಪಿ ಅಭ್ಯರ್ಥಿ ಗೆಲುವು ಖಚಿತ~ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ವೈಷ್ಣೋದೇವಿ ದರ್ಶನ ನಂತರ ಯಡಿಯೂರಪ್ಪ ಅವರು ಮನಸ್ಸು ಬದಲಾಯಿಸಿ ಉಪ ಚುನಾವಣಾ ಪ್ರಚಾರಕ್ಕೆ ಬರಬಹುದು ಎಂದು ಸೋಮಣ್ಣ ಅವರು ಇಂಗಿತ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.