ADVERTISEMENT

ಕಾಂಗ್ರೆಸ್ ಸೋಲಿಸಲು ಯಾರೇ ಬಂದರೂ ಸ್ವಾಗತ: ಕೆ.ಎಸ್.ಈಶ್ವರಪ್ಪ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2018, 6:33 IST
Last Updated 30 ಮಾರ್ಚ್ 2018, 6:33 IST
ಕೆ.ಎಸ್.ಈಶ್ವರಪ್ಪ
ಕೆ.ಎಸ್.ಈಶ್ವರಪ್ಪ   

ಕಲಬುರ್ಗಿ: ಕಾಂಗ್ರೆಸ್ ಸೋಲಿಸುವ ಗುರಿ ಇಟ್ಟುಕೊಂಡು ಯಾರೇ ಪಕ್ಷಕ್ಕೆ ಬಂದರೂ ಅವರನ್ನು ಸ್ವಾಗತಿಸುತ್ತೇವೆ, ಅವರಿಗೆ ಬೆಂಬಲ ನೀಡುತ್ತೇವೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಹೇಳಿದರು.

ಮಲ್ಲಿಕಾರ್ಜುನ ಖರ್ಗೆ, ಅವರ ಪುತ್ರ ಪ್ರಿಯಾಂಕ್ ಖರ್ಗೆ ಅವರನ್ನು ಸೋಲಿಸುವುದನ್ನೇ ತಮ್ಮ ಗುರಿಯಾಗಿಸಿಕೊಂಡು ಅಫಜಲಪುರ ಶಾಸಕ ಮಾಲೀಕಯ್ಯ ಗುತ್ತೇದಾರ ಬಿಜೆಪಿ ಸೇರ್ಪಡೆಗೆ ಮುಂದಾಗಿದ್ದಾರೆ. ದೇಶದಲ್ಲಿ ನಮ್ಮ ಮೊದಲ ವೈರಿ ಕಾಂಗ್ರೆಸ್. ಕಾಂಗ್ರೆಸ್ ಮುಕ್ತ ಭಾರತ ನಮ್ಮ ಗುರಿಯಾಗಿದೆ. ಇದನ್ನು ಒಪ್ಪಿಕೊಳ್ಳುವ ಎಲ್ಲರನ್ನೂ ಪಕ್ಷಕ್ಕೆ ಬರಮಾಡಿಕೊಳ್ಳುತ್ತೇವೆ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಸಮಾಧಾನ ಮೋರ್ಚಾ: ಅನ್ಯ ಪಕ್ಷದವರನ್ನು ಬಿಜೆಪಿಗೆ ಬರಮಾಡಿಕೊಂಡಿರೆ ಪಕ್ಷದ ನಿಷ್ಠಾವಂತರನ್ನು ಕಡೆಗಣಿಸಿದಂತೆ ಆಗುವುದಿಲ್ಲವೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅದಕ್ಕಾಗಿ ಸಮಾಧಾನ ಮೋರ್ಚಾ ಇದೆ ಎಂದು ಹೇಳಿದರು.
ಯುವ ಮೋರ್ಚಾ, ಮಹಿಳಾ ಮೋರ್ಚಾ, ರೈತ ಮೋರ್ಚಾದಂತೆ ಸಮಾಧಾನ ಮೋರ್ಚಾ ಇದೆ. ಯಾರಿಗೆ ಟಿಕೆಟ್ ಸಿಗುವುದಿಲ್ಲ. ಯಾರು ಅಸಮಾಧಾನ ಹೊಂದಿರುತ್ತಾರೆಯೋ ಅಂತವರ ಮನೆಗೆ ಸಮಾಧಾನ ಮೋರ್ಚಾ ಮುಖಂಡರು ತಕ್ಷಣವೇ ಭೇಟಿ ನೀಡುತ್ತಾರೆ. ಅವರಿಗೆ ಪಕ್ಷ, ದೇಶ ಭಕ್ತಿ, ನಿಷ್ಠೆಯ ಬಗ್ಗೆ ಮನವರಿಕೆ ಮಾಡಿಕೊಡುತ್ತಾರೆ ಎಂದು ತಿಳಿಸಿದರು.

ADVERTISEMENT

ಮದುವೆ ಮುಖ್ಯ: ಮಾಲೀಕಯ್ಯ ಮತ್ತೆ ಬಿಜೆಪಿ ಮಧ್ಯೆ ಪ್ರೀತಿ ಹುಟ್ಟಿದ್ದು ಹೇಗೆ ಎಂಬ ಪ್ರಶ್ನೆಗೆ, ಪ್ರೀತಿ ಯಾರು ಮಾಡಿದರೇನು, ಹುಡುಗ ಹುಡುಗಿಯ ಹಿಂದೆ ಹೋಗಲಿ, ಹುಡುಗಿ ಹುಡುಗನ ಹಿಂದೆ ಹೋಗಲಿ ಮದುವೆ ಆಗುವುದು ಮುಖ್ಯ ಎಂದು ಹೇಳಿದರು.

ಟಿಕೆಟ್ ಅಂತಿಮವಾಗಿಲ್ಲ: ಗೆಲ್ಲುವ ಅಭ್ಯರ್ಥಿಗಳ ಪಟ್ಟಿ ತಯಾರಿಸಲಾಗುತ್ತಿದೆ. ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಇನ್ನೂ ಅಂತಿಮವಾಗಿಲ್ಲ. ಪಕ್ಷದ ವರಿಷ್ಠರು 3-4 ಹಂತದಲ್ಲಿ ಸಮೀಕ್ಷೆ ಮಾಡಿಸಿದ್ದಾರೆ. ಅವರೇ ಪಟ್ಟಿಯನ್ನು ಅಂತಿಮಗೊಳಿಸಲಿದ್ದಾರೆ ಎಂದರು.
ಟಿಕೆಟ್ ಈಗಲೇ ಘೋಷಿಸಿದರೆ ಬರುವವರು ಬರಲ್ಲ, ಹೀಗಾಗಿ ಕಾದು ನೋಡಬೇಕಾಗಿದೆ. ನಾವು ಕೂಡ ಚಾಣಕ್ಯ ನೀತಿಯನ್ನು ಅನುಸರಿಸುತ್ತಿದ್ದೇವೆ ಎಂದು ತಿಳಿಸಿದರು.

ಬ್ರಿಗೇಡ್ ಮುಗಿದ ಅಧ್ಯಾಯ: ಅಹಿಂದ ಹೆಸರು ಹೇಳಿಕೊಂಡು ಮುಖ್ಯಮಂತ್ರಿ ಆದ ಸಿದ್ದರಾಮಯ್ಯ ಅವರನ್ನು ಕಡೆಗಣಿಸಿದರು. ಪಕ್ಷದ ಹಿರಿಯ ನಾಯಕರಾದ ಎಸ್.ಎಂ.ಕೃಷ್ಷ, ಶ್ರೀನಿವಾಸಪ್ರಸಾದ್, ಎಚ್.ವಿಶ್ವನಾಥ ಅವರನ್ನು ಮೂಲೆಗುಂಪು ಮಾಡಿದರು. ನೊಂದವರು ನಮ್ಮ ಬಳಿ ಬಂದು ನೋವು ತೋಡಿಕೊಂಡರು. ಹೀಗಾಗಿ ರಾಯಣ್ಣ ಬ್ರಿಗೇಡ್ ಸ್ಥಾಪಿಸಲಾಗಿತ್ತು. ಆದರೆ ಹೀಗೆ ಮಾಡುವುದರಿಂದ ಕಾರ್ಯಕರ್ತರಲ್ಲಿ ಗೊಂದಲ ಉಂಟಾಗುತ್ತದೆ ಎಂದು ವರಿಷ್ಠರು ಮನವರಿಕೆ ಮಾಡಿಕೊಟ್ಟಿದ್ದರಿಂದ ಅದನ್ನು ಕೈಬಿಟ್ಟೆ. ರಾಯಣ್ಣ ಬ್ರಿಗೇಡ್ ಈಗ ಮುಗಿದ ಅಧ್ಯಾಯ ಎಂದು ಹೇಳಿದರು.

ಏ.3ರಂದು ಸಮಾವೇಶ: ಏಪ್ರಿಲ್ 3ರಂದು ಕಾಗಿನೆಲೆಯಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಹಿಗಾಗಿ ರಾಜ್ಯದ ವಿವಿಧೆಡೆ ಪೂರ್ವಭಾವಿ ಸಭೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಗಂಡ-ಹೆಂಡತಿ ಮಧ್ಯೆ ಜಗಳ: ಯಡಿಯೂರಪ್ಪ ಮತ್ತು ನನ್ನ ಮಧ್ಯೆ ಯಾವತ್ತೂ ಸಂಘರ್ಷ ನಡೆದಿಲ್ಲ. ಗಂಡ-ಹೆಂಡತಿ ಜಗಳದಂತೆ ಆಗಾಗ ಮುನಿಸಿಕೊಂಡಿದ್ದೇವೆ. ಸೈದ್ಧಾಂತಿಕ ಮತ್ತು ವೈಚಾರಿಕ ಕಾರಣಕ್ಕಾಗಿ ಸಣ್ಣಪುಟ್ಟ ಭಿನ್ನಾಭಿಪ್ರಾಯ ನಡೆದಿದ್ದು, ಈಗ ಎಲ್ಲವೂ ಸರಿ ಹೋಗಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.